Advertisement

ಶ್ರೀಕೃಷ್ಣಮಠ: ಲಕ್ಷ ತುಳಸಿ –ಲಕ್ಷನಾಮ ಅರ್ಚನೆಗೆ 700 ದಿನ  

09:59 AM Dec 18, 2019 | Hari Prasad |

ಉಡುಪಿ: ಶ್ರೀ ಕೃಷ್ಣಮಠದಲ್ಲಿ ಶ್ರೀಪಲಿಮಾರು ಮಠ ಪರ್ಯಾಯದ ಕೊನೆಯ ಹಂತದಲ್ಲಿದೆ. 2018ರ ಜ. 18ರಂದು ಆರಂಭಗೊಂಡ ಲಕ್ಷ ತುಳಸೀ ಅರ್ಚನೆ ಡಿ. 18ರಂದು 701ನೆಯ ದಿನಕ್ಕೆ ಕಾಲಿರಿಸುತ್ತಿದೆ. ಇದು ಲಕ್ಷ ತುಳಸೀ ಅರ್ಚನೆ ಎಂದೇ ಪ್ರಸಿದ್ಧವಾಗಿದೆ. ಆದರೆ ಇದರೊಳಗೆ ಲಕ್ಷ ನಾಮ ಅರ್ಚನೆಯೂ ಇರುವುದು ಬಹುತೇಕರಿಗೆ ತಿಳಿದಿಲ್ಲ.

Advertisement

ಯೋಜನೆಯಲ್ಲಿರುವ ಲಕ್ಷನಾಮ ಅರ್ಚನೆ ವಿಷ್ಣುಸಹಸ್ರನಾಮದಿಂದ ನಡೆಯುತ್ತಿದೆ. ವಿಷ್ಣುಸಹಸ್ರನಾಮದ ಹೆಸರೇ ವಿಷ್ಣುವಿನ ಸಾವಿರ ಹೆಸರನ್ನು ಸೂಚಿಸುತ್ತದೆ. ಇದರ ನಾಮಾವಳಿಯನ್ನು ವೈದಿಕರು ನಡೆಸುತ್ತಾರೆ. ಕನಿಷ್ಠ 50 ವೈದಿಕರು ಎರಡು ಬಾರಿ ಹೇಳಿದರೆ ಒಟ್ಟು ಒಂದು ಲಕ್ಷ ಬಾರಿ ದೇವರ ಹೆಸರನ್ನು ಹೇಳಿದಂತೆ ಆಗುತ್ತದೆ.

ಇನ್ನು 108 ನಾಮಗಳು ಶ್ರೀಕೃಷ್ಣಾಷ್ಟೋತ್ತರದ ಶತನಾಮಾವಳಿಯನ್ನು ಹೇಳುತ್ತಾರೆ. ಇದಕ್ಕಾಗಿ 60 ವೈದಿಕರನ್ನು ನಿಗದಿಪಡಿಸಿದ್ದಾರೆ. ಏಕೆಂದರೆ ಕೆಲವರು ಬಾರದೆ ಹೋಗಬಹುದು ಎಂಬ ಕಾರಣಕ್ಕೆ. ಇದಲ್ಲದೆ 10-15 ಜನರು ಸ್ವಯಂ ಇಚ್ಛೆಯಿಂದ ಪಾರಾಯಣ ಮಾಡುವವರಿದ್ದಾರೆ. ಒಟ್ಟಾರೆ ಒಂದು ಲಕ್ಷಕ್ಕಿಂತ ಹೆಚ್ಚು ಬಾರಿ ವಿಷ್ಣು ಸಹಸ್ರನಾಮದ ಉಚ್ಚಾರಣೆ ನಡೆಯುತ್ತದೆ.

ಪ್ರತಿನಿತ್ಯ ಬೆಳಗ್ಗೆ 8.45ರಿಂದ 10.15ರವರೆಗೆ ವಿಷ್ಣುಸಹಸ್ರನಾಮದ ಪಾರಾಯಣ ನಡೆಯುತ್ತಿದ್ದು, ಪಟ್ಟಿಯಲ್ಲಿರುವ 60 ವೈದಿಕರಿಗೆ ನಿತ್ಯ 200 ರೂ. ಸಂಭಾವನೆಯನ್ನು ಶ್ರೀಮಠದಿಂದ ನಿಗದಿಪಡಿಸಲಾಗಿದೆ. ದ್ವಾದಶಿಯಂದು ಬೆಳಗ್ಗೆ 3.45ಕ್ಕೆ ಆರಂಭವಾಗುತ್ತದೆ. ಇವರಲ್ಲಿ ಯುವಕರಿಂದ ಹಿಡಿದು ವಯೋವೃದ್ಧರವರೆಗೆ ಇದ್ದಾರೆ. ಇವರಿಗೆ ಮಠದಿಂದ ವರ್ಷಕ್ಕೆ ನೀಲವರ್ಣದ ಪಟ್ಟೆ, ಶಾಲಿನ ಎರಡು ಸೆಟ್‌ಗಳನ್ನು ಕೊಡಲಾಗುತ್ತಿದ್ದು ಇದನ್ನು ಧರಿಸಿಯೇ ಪಾರಾಯಣ ನಡೆಸುತ್ತಾರೆ.


ಅನಾರೋಗ್ಯದಿಂದ ಬಳಲುತ್ತಿರುವವರು ಪಾರಾಯಣ ಆರಂಭಿಸಿದ ಬಳಿಕ ಸಹಜವಾಗಿ ಪಾರಾಯಣವನ್ನು ನಡೆಸುತ್ತಿದ್ದಾರೆ. ಇವರ ಹಾಜರಾತಿ, ಸಂಖ್ಯೆಯ ಕೊರತೆ ಆಗದಂತೆ ನೋಡಿಕೊಳ್ಳುವವರು ಮುಂಬೈನ ಪುರೋಹಿತರೂ, ಜ್ಯೋತಿಷಿಗಳೂ ಆದ ಎಂ.ಪಿ. ಗುರುರಾಜ ಉಪಾಧ್ಯಾಯ ಮತ್ತು ಉಡುಪಿಯ ಪೂರ್ಣಚಂದ್ರ ಉಪಾಧ್ಯಾಯ.
ನಿತ್ಯ ಲಕ್ಷ ತುಳಸೀ ಕುಡಿಗಳ ಅರ್ಚನೆಗೆ ನಾನಾ ಕಡೆಗಳಲ್ಲಿ ತುಳಸೀ ವನಗಳು ನಿರ್ಮಾಣವಾಗಿ ಈಗ ನಿತ್ಯ ಲಕ್ಷ ತುಳಸೀ ಕುಡಿಗಳು ಬರುತ್ತಿವೆ.

ಲಕ್ಷ ತುಳಸಿ ಕುಡಿಗಳನ್ನು ಲೆಕ್ಕ ಹಾಕುವುದು ಸಾಧ್ಯವಿಲ್ಲ. ಒಂದು ಬುಟ್ಟಿಯಲ್ಲಿ ಸುಮಾರು 5,000 ಕುಡಿಗಳಿರಬಹುದೆಂದು ಅಂದಾಜಿಸಿ ಅಂತಹ 20 ಬುಟ್ಟಿಗಳನ್ನು ಪರ್ಯಾಯ ಶ್ರೀಪಲಿಮಾರು ಸ್ವಾಮೀಜಿಯವರು ನಿತ್ಯ ಕೃಷ್ಣನಿಗೆ ಅರ್ಪಿಸುತ್ತಿದ್ದಾರೆ. ಅರ್ಚನೆಯಾದ ತುಳಸಿ ಕುಡಿಗಳು ಪ್ರಸಾದ ರೂಪದಲ್ಲಿ ವಿನಿಯೋಗವಾದ ಬಳಿಕ ಉಳಿದುದನ್ನು ಉದ್ಯಾವರ ಕುತ್ಪಾಡಿಯ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಔಷಧಿ ತಯಾರಿಕೆಗಾಗಿ ಬಳಸಲಾಗುತ್ತಿದೆ.


ಇದೊಂದು ಅಪೂರ್ವ ಅವಕಾಶ. ನಾನು ಮುಂಬೈನಲ್ಲಿದ್ದವ. ಇದರ ಮೇಲ್ವಿಚಾರಣೆ ನಡೆಸಬೇಕೆಂದು ಸ್ವಾಮೀಜಿಯವರು ಪರ್ಯಾಯ ಸಂಚಾರದ ವೇಳೆ ಹೇಳಿದಾಗ ಒಪ್ಪಿಕೊಂಡು ಬಂದೆ. ಎಲ್ಲವೂ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಎಲ್ಲ ಪಾರಾಯಣ ಮಾಡುವವರೂ ಇದನ್ನು ಸೇವೆ ಎಂದು ಭಾವಿಸಿ ಮಾಡುತ್ತಿದ್ದಾರೆ.
– ಎಂ.ಪಿ. ಗುರುರಾಜ ಉಪಾಧ್ಯಾಯ.

Advertisement

ವಿಷ್ಣು ಸಹಸ್ರನಾಮ ಔಷಧಿ!
ನನ್ನಲ್ಲಿ ಯಾರೇ ಸಮಸ್ಯೆಗಳನ್ನು ಹೇಳಿಕೊಂಡು ಬಂದರೆ ನಾನು ಕೊಡುವ ದಿವ್ಯ ಔಷಧಿ ವಿಷ್ಣುಸಹಸ್ರನಾಮ ಪಾರಾಯಣ. ‘ರೋಗಾರ್ತೋ ಮುಚ್ಯತೇ ರೋಗಾದ್ಬದ್ಧೋ…’ ಎಂದು ಅದರಲ್ಲಿಯೇ ಇದೆ.

ಮಹಾಭಾರತದಲ್ಲಿ ಉಲ್ಲೇಖವಾದ ಭಗವದ್ಗೀತೆ ಮತ್ತು ವಿಷ್ಣುಸಹಸ್ರನಾಮ ನನ್ನ ಮೇಲೆ ಅಗಾಧವಾದ ಪ್ರಭಾವ, ಪರಿಣಾಮ ಬೀರಿದೆ. ಎಷ್ಟೋ ಜನರು ಈ ಮಂತ್ರ ಪಠನದಿಂದ ತಮ್ಮ ಸಮಸ್ಯೆಗಳು ಪರಿಹಾರವಾದುದನ್ನು ನನ್ನಲ್ಲಿ ಹೇಳಿದ್ದಾರೆ. ಸಹಸ್ರನಾಮವೆಂದರೆ ಸಾವಿರದ ನಾಮ. ಇದು ಸಾವು ಇರದ ನಾಮವೂ ಹೌದು.
– ಡಾ| ಬನ್ನಂಜೆ ಗೋವಿಂದಾಚಾರ್ಯ, ವಿದ್ವಾಂಸರು.

ಶ್ರೀವಿದ್ಯಾಧೀಶತೀರ್ಥ ಶ್ರೀಪಾದರಿಂದ ಲಕ್ಷ ತುಳಸಿ ಅರ್ಚನೆ.

ಅರ್ಚನೆಗೆ ಸಿದ್ಧಗೊಂಡ ತುಳಸಿ ಕುಡಿಗಳ ಬುಟ್ಟಿಗಳು.

ವಿಷ್ಣುಸಹಸ್ರನಾಮ ಪಾರಾಯಣನಿರತ ವೈದಿಕರು.

Advertisement

Udayavani is now on Telegram. Click here to join our channel and stay updated with the latest news.

Next