Advertisement

Karnataka: ವಾರದಲ್ಲಿ ಎರಡು ಬಂದ್‌: ಆರ್ಥಿಕ ಹೊಡೆತ

11:18 PM Sep 30, 2023 | Team Udayavani |

ಬೆಂಗಳೂರು: ಕಾವೇರಿ “ಬಂದ್‌’ ಅಬಕಾರಿ ಇಲಾಖೆಯ “ಕಿಕ್‌’ ಇಳಿಸಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡ ಒಕ್ಕೂಟ ಮತ್ತು ಕರ್ನಾಟಕ ಜಲ ಸಂರಕ್ಷಣ ಸಮಿತಿ ಒಂದೇ ವಾರದಲ್ಲಿ ಎರಡು ದಿನ “ಬೆಂಗಳೂರು ಬಂದ್‌’ ಮತ್ತು “ಅಖಂಡ ಕರ್ನಾಟಕ ಬಂದ್‌’ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಸರಕಾರದ ಬೊಕ್ಕಸ ತುಂಬುವ ಬಿಳಿಯಾನೆ ಎಂದೇ ಗುರುತಿಸಿಕೊಂಡಿರುವ ಅಬಕಾರಿ ಇಲಾಖೆಯ ಆದಾಯದಲ್ಲಿ ಇಳಿಕೆಯಾಗಿದೆ. ಹೀಗಾಗಿ ಸರಕಾರಕ್ಕೆ ಸೆಪ್ಟಂಬರ್‌ ತಿಂಗಳ ಆದಾಯದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ.

Advertisement

ಪ್ರತಿದಿನ ಸುಮಾರು 1ಲಕ್ಷ 80 ಸಾವಿರದಿಂದ 2 ಲಕ್ಷ ರೂ. ವರೆಗೆ ವಿವಿಧ ಮಾದರಿಯ ಮದ್ಯದ ಬಾಕ್ಸ್‌ ಮಾರಾಟವಾಗುತ್ತದೆ. ಆದರೆ ಶುಕ್ರವಾರದ ಬಂದ್‌ ದಿನ ಸುಮಾರು 70 ಸಾವಿರ ವಿವಿಧ ಮದ್ಯಗಳ ಬಾಕ್ಸ್‌ಗಳು ಮಾರಾಟವಾಗದೇ ಉಳಿದಿವೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

ಎಫ್ಕೆಸಿಸಿಐಗೆ 700 ಕೋ. ರೂ.ನಷ್ಟ
ಒಂದೇ ವಾರದಲ್ಲಿ ಎರಡು ಬಂದ್‌ ಆದ ಹಿನ್ನೆಲೆಯಲ್ಲಿ ವಾಣಿಜ್ಯೋದ್ಯಮ ವಲಯಕ್ಕೆ ನೂರಾರು ಕೋಟಿ ರೂ. ನಷ್ಟವಾಗಿದೆ. “ಬೆಂಗಳೂರು ಬಂದ್‌’ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ವಾಣಿಜ್ಯ ವಹಿವಾಟಿನ ಮೇಲೆ ದೊಡ್ಡ ಹೊಡೆತ ನೀಡಿತ್ತು. ಹಲವು ಕೈಗಾರಿಕೆಗಳು ಬಂದ್‌ ಆಗಿದ್ದವು. ಆ ಹಿನ್ನೆಲೆಯಲ್ಲಿ ಬೆಂಗಳೂರು ಬಂದ್‌ ದಿನದಂದೇ ಸುಮಾರು 300 ಕೋಟಿ ರೂ. ನಷ್ಟವಾಗಿದೆ.
ಇದಾದ ಬೆನ್ನಲ್ಲೇ ಕರ್ನಾಟಕ ಬಂದ್‌ನಿಂದಾಗಿ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಸುಮಾರು 400 ಕೋ. ರೂ. ನಷ್ಟವಾಗಿದೆ. ಶೇ.70ರಷ್ಟು ಕೈಗಾರಿಕೆ ವಲಯಗಳು ಮುಚ್ಚಿದ್ದವು ಎಂದು ಎಫ್ಕೆಸಿಸಿಐನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಫ್ಕೆಸಿಸಿಐ ಅಧ್ಯಕ್ಷ ರಮೇಶ ಚಂದ್ರ ಲಹೋಟಿ, ಎರಡು ದಿನಗಳ ಬಂದ್‌ ಹಿನ್ನೆಲೆಯಲ್ಲಿ 700 ಕೋಟಿ ರೂ.ನಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಮಾಚೋಹಳ್ಳಿ ಸಣ್ಣ ಕೈಗಾರಿಕೆ ಘಟಕಕ್ಕೆ 50 ಕೋಟಿ ರೂ.ನಷ್ಟ
ಅತಿ ಸಣ್ಣ ಬಿಡಿ ಭಾಗಗಳ ಉತ್ಪನ್ನಗಳ ತಯಾರಿಕೆಗೆ ಹೆಸರುವಾಸಿ ಆಗಿರುವ ರಾಜಧಾನಿ ಹೊರ ವಲಯದಲ್ಲಿರುವ ಮಾಚೋಹಳ್ಳಿ ಸಣ್ಣ ಕೈಗಾರಿಕೆಗಳ ಪ್ರದೇಶ “ಬೆಂಗಳೂರು ಬಂದ್‌’ ದಿನದಂದು ಸ್ತಬ್ಧವಾಗಿತ್ತು. ಪರಿಣಾಮ ಮಾಚೋಹಳ್ಳಿ ಕೈಗಾರಿಕೆ ಘಟಕಕ್ಕೆ ಸುಮಾರು 50 ಕೋಟಿ ರೂ. ನಷ್ಟವಾಗಿದೆ ಎಂದು ಮಾಚೋಹಳ್ಳಿ ಸಣ್ಣ ಕೈಗಾರಿಕೆ ಒಕ್ಕೂಟದ ಗೌರವಾಧ್ಯಕ್ಷ ಸುರೇಶ್‌ ಸಾಗರ್‌ ಹೇಳಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಮತ್ತು ರೈತ ಸಂಘಟನೆಗಳು ಒಂದೇ ವಾರದಲ್ಲಿ 2 ಬಂದ್‌ಗೆ ಕರೆ ನೀಡಿದ್ದವು. ಆ ಬಂದ್‌ನಲ್ಲಿ ಇಡೀ ಕೈಗಾರಿಕೋದ್ಯಮ ವಲಯ ಕೂಡ ಭಾಗವಹಿಸಿತ್ತು. ಎರಡು ದಿನಗಳ ಬಂದ್‌ ಹಿನ್ನೆಲೆಯಲ್ಲಿ 700 ಕೋಟಿ ರೂ.ನಷ್ಟವಾಗಿದೆ.
-ರಮೇಶ ಚಂದ್ರ ಲಹೋಟಿ, ಎಫ್ಕೆಸಿಸಿಐ ಅಧ್ಯಕ್ಷ

Advertisement

 ದೇವೇಶ ಸೂರಗುಪ್ಪ

 

Advertisement

Udayavani is now on Telegram. Click here to join our channel and stay updated with the latest news.

Next