ಕೊಲಂಬೋ:ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆದ ಬೌದ್ಧರ ವೈಭವದ ಮೆರವಣಿಗೆಯಲ್ಲಿ ಹಣ್ಣು, ಹಣ್ಣು ಮುದಿ 70 ವರ್ಷದ ಹೆಣ್ಣಾನೆಯನ್ನು ಬಳಸಿಕೊಂಡಿದ್ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಟಿಕ್ರಿ ಎಂಬ 70ವರ್ಷದ ಹೆಣ್ಣಾನೆಯನ್ನು ಶ್ರೀಲಂಕಾದ ಕ್ಯಾಂಡಿಯಲ್ಲಿ ಪ್ರತೀ ವರ್ಷ ಜುಲೈ ತಿಂಗಳಿನಲ್ಲಿ ಹತ್ತು ದಿನಗಳ ಕಾಲ ನಡೆದ ಬೌದ್ಧರ ಅದ್ದೂರಿ ಹಬ್ಬದಲ್ಲಿ ಬೀದಿ ಮೆರವಣಿಗೆಯಲ್ಲಿ ಬಳಸಿಕೊಂಡಿದ್ದರು. 70 ವರ್ಷದ ಆನೆ ಪ್ರತಿದಿನ ಸಂಜೆಯಿಂದ ರಾತ್ರಿ 10ಗಂಟೆವರೆಗೂ ಪರೇಡ್ ನಲ್ಲಿ ಕಿಲೋ ಮೀಟರ್ ಗಟ್ಟಲೆ ನಡೆಯುತ್ತಿತ್ತು.
ಅಷ್ಟೇ ಅಲ್ಲ ಭಾರೀ ಪ್ರಮಾಣದ ಬೆಳಕು, ಶಬ್ದ ಹಾಗೂ ಪಟಾಕಿ ಶಬ್ದ, ಹೊಗೆಯಿಂದ ಟಿಕ್ರಿ ಆನೆ ಕಂಗೆಟ್ಟು ಹೋಗಿತ್ತು. ಆದರೆ ಯಾರೋಬ್ಬರು ಎಲುಬುಗೂಡು ಎದ್ದು ತೋರುತ್ತಿದ್ದ, ಕೃಶಕಾಯದ ಆನೆಯ ಬಗ್ಗೆ ಗೊತ್ತಾಗಲೇ ಇಲ್ಲ! ಯಾಕೆಂದರೆ ಆನೆಯನ್ನು ಬಣ್ಣ, ಬಣ್ಣದ ಬಟ್ಟೆಯಿಂದ ಅಲಂಕರಿಸಲಾಗಿತ್ತು!
ಅನಾರೋಗ್ಯದಿಂದ ಬಳಲುತ್ತಿದ್ದ ಟಿಕ್ರಿ ಆನೆ ನಡೆಯಲು ಸಾಧ್ಯವಾಗದೇ ಅದರ ಕಣ್ಣಂಚಲ್ಲಿ ಜಿನುಗುತ್ತಿದ್ದ ಕಣ್ಣೀರನ್ನು ಯಾರೂ ಗಮನಿಸಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಇದೀಗ ಆನೆ ರಕ್ಷಣಾ ಪೌಂಡೇಶನ್ ಟಿಕ್ರಿಯ ಫೋಟೋವನ್ನು ಹಂಚಿಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ, ಟೀಕೆ ವ್ಯಕ್ತವಾಗಿತ್ತು.
ಈ ನಿಟ್ಟಿನಲ್ಲಿ ಶ್ರೀಲಂಕಾದ ಪ್ರವಾಸೋದ್ಯಮ ಮತ್ತು ವನ್ಯಜೀವಿ ಇಲಾಖೆ ಸಚಿವ ಜಾನ್ ಅಮರತುಂಗಾ ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ವನ್ಯಜೀವಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.