Advertisement

1 ಡಾಲರ್‌ಗೆ 70 ರೂಪಾಯಿ!

06:00 AM Aug 20, 2018 | |

ಜಗತ್ತು ಕರೆನ್ಸಿ ಮಾರುಕಟ್ಟೆಯನ್ನು ಹೊಸ ಸಮರಭೂಮಿಯನ್ನಾಗಿಸಿಕೊಂಡಿದ್ದು, ಈಗಾಗಲೇ ಡಾಲರ್‌ ನೆದುರು ರೂಪಾಯಿ ಮೌಲ್ಯ 70ರ ಗಡಿ ದಾಟಿದೆ. ಭವಿಷ್ಯದಲ್ಲಿ ಡಾಲರ್‌- ರೂಪಾಯಿ ದರ ಇನ್ನಷ್ಟು ಬದಲಾವಣೆಯಾಗುವ ಸಾಧ್ಯತೆಯೂ ಇದೆ. ಹೀಗಿರುವಾಗ, ಡಾಲರ್‌ನ ಎದುರು ದಿನೇ ದಿನೆ ದುರ್ಬಲವಾಗುತ್ತಿರುವ ರೂಪಾಯಿಯಿಂದ ನಮ್ಮ ಹಣಕಾಸಿನ ವ್ಯವಹಾರದ ಮೇಲೆ ಏನೇನು ಪರಿಣಾಮವಾಗುತ್ತದೆ ಎಂಬ ಪ್ರಶ್ನೆ ಬರುತ್ತದೆ. ನಮಗೆ ಲಾಭವೂ ಇದೆ, ನಷ್ಟವೂ ಇದೆ. ಅದರ ಮೇಲೊಂದು ನೋಟ…

Advertisement

ವಿದೇಶಿ ಪ್ರವಾಸ, ವಿದೇಶಿ ಶಿಕ್ಷಣ ದುಬಾರಿ
ನೀವು ಡಾಲರ್‌ನಲ್ಲಿ ಯಾವುದಕ್ಕಾದರೂ ಪಾವತಿ ಮಾಡುತ್ತಿದ್ದರೆ, ನಿಮಗೆ ಬಿಸಿ ತಟ್ಟುವುದು ನಿಶ್ಚಿತ. ಉದಾಹರಣೆಗೆ, ನಿಮ್ಮ ಮಕ್ಕಳು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ, ಮಾಸಿಕ ಖರ್ಚು 2,000 ಡಾಲರ್‌ ಬೇಕಿದ್ದರೆ, ನೀವು ಈಗ 1.4 ಲಕ್ಷ ರೂ. ವ್ಯಯಿಸಬೇಕಾಗುತ್ತದೆ. ವರ್ಷದ ಹಿಂದೆ ರೂಪಾಯಿ ಮೌಲ್ಯ 64ರಲ್ಲಿದ್ದಾಗ ನೀವು 1.28 ಲಕ್ಷ ವನ್ನಷ್ಟೇ ಪಾವತಿಸಿದರೆ ಸಾಕಾಗುತ್ತಿತ್ತು. ರೂಪಾಯಿ ಮೌಲ್ಯ ಇನ್ನಷ್ಟು ಕುಸಿದರೆ ನಿಮ್ಮ ಕಿಸೆಗೆ ಇನ್ನಷ್ಟು ಬಿಸಿ ತಟ್ಟುವುದು ನಿಶ್ಚಿತ.  ವಿದೇಶ ಪ್ರವಾಸಮಾಡುವ ಯೋಚನೆ ನಿಮಗಿದ್ದರೆ, ಅಲ್ಲಿ ಡಾಲರ್‌ನಲ್ಲಿಯೇ ನೀವು ಪಾವತಿಸುವುದಾದರೆ, ಆಗ ಕೂಡ ಹೆಚ್ಚು ಹಣ ಕೂಡಬೇಕಾದ ಸರದಿ ನಿಮ್ಮದಾಗುತ್ತದೆ. 

ವಿದೇಶಿ ಗಳಿಕೆ ಹೆಚ್ಚಳ
ನಿಮ್ಮ ಮಕ್ಕಳು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಡಾಲರ್‌ ಲೆಕ್ಕದಲ್ಲಿ ವೇತನ ಪಡೆಯುತ್ತಿದ್ದರೆ, ಅವರು ನಿಮಗೆ ಕಳುಹಿಸುವ ಹಣದ ಪ್ರಮಾಣ ರುಪಾಯಿಯಲ್ಲಿ ಹೆಚ್ಚಲಿದೆ. ವಿದೇಶಿ ವೇತನವನ್ನು ತವರಿಗೆ ಕಳುಹಿಸುವವರಿಗೆ ಈ ಅವಧಿ ಅನುಕೂಲ ಮಾಡಿಕೊಡಲಿದೆ. 

ಡಾಲರ್‌ ಮುಖಬೆಲೆಯ ಆಸ್ತಿಗೆ ಬಂಪರ್‌
ಡಾಲರ್‌ ಮುಖಬೆಲೆಯ ಆಸ್ತಿಯಲ್ಲಿ ನೀವು ಹೂಡಿಕೆ ಮಾಡಿದರೆ, ರೂಪಾಯಿಯಲ್ಲಿ ಅದರ ಮೌಲ್ಯಹೆಚ್ಚುತ್ತದೆ. ಉದಾಹರಣೆಗೆ, ಡಾಲರ್‌ ಮುಖಬೆಲೆಯ ಸೆಕ್ಯೂರಿಟಿಗಳಲ್ಲಿ ಹೂಡುವ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಹಣ ಹೂಡಿದರೆ, ರೂಪಾಯಿ ಮೌಲ್ಯದ ನಿವ್ವಳ ಆಸ್ತಿ ಮೌಲ್ಯ ಏರಲಿದೆ. ಯಾವಾಗಲೂ ವೈವಿಧ್ಯಮಯ ಹೂಡಿಕೆ ನಿರ್ವಹಣೆಯ ನಿಟ್ಟಿನಲ್ಲಿ ವಿದೇಶಗಳ ಷೇರುಪೇಟೆಗಳಲ್ಲಿ ಲಿಸ್ಟ್‌ ಆಗಿರುವ ಷೇರುಗಳಲ್ಲಿ ಹೂಡುವ ಮ್ಯೂಚುವಲ್‌ ಫ‌ ಂಡ್‌ಗಳತ್ತ ಕೂಡಾ ಗಮನ ಹರಿಸುವುದು ಸೂಕ್ತ ಎನ್ನುತ್ತಾರೆ ತಜ್ಞರು. ರೂಪಾಯಿ ದುರ್ಬಲವಾದಾಗಲೆಲ್ಲ ಚಿನ್ನದ ಬೆಲೆ ಏರಿಕೆಯಾಗುತ್ತದೆ. ಹಾಗಾಗಿ ಚಿನ್ನದಲ್ಲಿ ನೀವು ಹಣ ಹೂಡಿದ್ದರೆ, ಅದರ ಮೌಲ್ಯಹೆಚ್ಚುತ್ತದೆ. 

ವಿದೇಶಿ ಸರಕು ದುಬಾರಿ
ಇಂಧನ, ಮೊಬೈಲ್‌ ಫೋನ್‌ನಂತಹ ವಿದೇಶದಿಂದ ಆಮದಾಗುವ ಸರಕುಗಳು ತುಟ್ಟಿಯಾಗಲಿವೆ. ಜತೆಗೆ ಹಣದುಬ್ಬರವೂ ಏರಿಕೆಯಾಗಲಿದೆ. ಇದರ ಪರಿಣಾಮವಾಗಿ ಸದ್ಯದಲ್ಲೇ ಸಾಲ ಹಾಗೂ ಠೇವಣಿಗಳ ಬಡ್ಡಿದರ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಕಳೆದ ಎರಡು ಹಣಕಾಸು ನೀತಿ ಪರಾಮರ್ಶೆಯ ವೇಳೆ ರಿಸರ್ವ್‌ ಬ್ಯಾಂಕ್‌ ರೆಪೋ ದರ ಏರಿಸಿತ್ತು. ಹಣದುಬ್ಬರ ಹಾಗೂ ಬಡ್ಡಿದರ ಏರಿಕೆಯಿಂದಾಗಿ ಜನರ ಕೈಯಲ್ಲಿ ಹಣ ಇರುವುದಿಲ್ಲ.

Advertisement

ವಿದೇಶಗಳಿಗೆ ಫ್ರೀಲ್ಯಾನ್ಸ್‌ ಸೇವೆ ಬಂಪರ್‌ 
ವೆಬ್‌ ಡಿಸೈನಿಂಗ್‌, ಅನುವಾದ, ಸೋಶಿಯಲ್‌ ಇಂಜಿನಿಯರಿಂಗ್‌ ಇತ್ಯಾದಿ ಫ್ರೀಲ್ಯಾನ್ಸ್‌ ಸೇವೆಯ ಮೂಲಕ ವಿದೇಶಿ ಕಂಪನಿಗಳಿಗೆ ವಿವಿಧ ಜಾಬ್‌ ವರ್ಕ್‌ ಮಾಡಿಕೊಡುವವರಿಗೆ ಇದು ಸುಗ್ಗಿಯ ಕಾಲ. ಮನೆಯಲ್ಲೇ ಕುಳಿತುಕೊಂಡು ವಿದೇಶಗಳಿಗೆ ಮಾಡಿಕೊಡುವ ಬಹುತೇಕ ಈ ಎಲ್ಲಾ ಸೇವೆಗಳ ವ್ಯವಹಾರ ಡಾಲರ್‌ ರೂಪದಲ್ಲೇ ನಡೆಯುತ್ತದೆ. ಈ ಅವಧಿಯಲ್ಲಿ ಇದನ್ನು ರೂಪಾಯಿಯಲ್ಲಿ ನಗದೀಕರಿಸಿಕೊಳ್ಳುವಾಗ  ಈ ಕೆಲಸಗಳನ್ನು ಮಾಡುವವರಿಗೆ ಲಾಭವಾಗುತ್ತದೆ. 

ರಾಧ

Advertisement

Udayavani is now on Telegram. Click here to join our channel and stay updated with the latest news.

Next