Advertisement

ಪರಿಶಿಷ್ಟರ ಕಲ್ಯಾಣಾಧಿಕಾರಿ ಕಚೇರಿಯಲ್ಲಿ 70 ಹುದ್ದೆ ಖಾಲಿ!

07:47 PM Sep 19, 2020 | Suhan S |

ದಾವಣಗೆರೆ: ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಲೆಂದೇ ಇರುವ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಸಿಬ್ಬಂದಿ ಸಮಸ್ಯೆಯಿಂದ ಬಳಲುತ್ತಿದೆ. ಇದರಿಂದ ಪರಿಶಿಷ್ಟ ವರ್ಗದವರಿಗೆ ಸಕಾಲಕ್ಕೆ ಸಮರ್ಪಕ ಸೇವೆ, ಸೌಲಭ್ಯ ನೀಡಲು= ತೊಡಕಾಗಿದೆ.

Advertisement

ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಒಟ್ಟು 94 ಮಂಜೂರಾತಿ ಹುದ್ದೆಗಳಿವೆ. ಆದರೆ ಭರ್ತಿಯಾಗಿರುವುದು ಕೇವಲ 24 ಮಾತ್ರ. ಇನ್ನೂ ಬರೋಬ್ಬರಿ 70 ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಹಾಲಿ ಅಧಿಕಾರಿ, ಸಿಬ್ಬಂದಿ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಶೇ.30ಕ್ಕಿಂತ ಕಡಿಮೆ ಇರುವ ಸಿಬ್ಬಂದಿಯನ್ನು ಬಳಸಿಕೊಂಡು ಸರಕಾರದ ಯೋಜನೆ ಅನುಷ್ಠಾನ, ನಿರಂತರ ಕಾರ್ಯಕ್ರಮ ನಿರ್ವಹಣೆ ಕಚೇರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ವಿದ್ಯಾರ್ಥಿ ನಿಲಯಗಳ ನಿರ್ವಹಣೆ ಪ್ರಮುಖವಾಗಿದೆ. ನಿಲಯ ಮೇಲ್ವಿಚಾರಕರ, ಶಿಕ್ಷಕರ ಹಾಗೂ ಅಡುಗೆಯವರ ಕೊರತೆ ಹೆಚ್ಚಿನ ಅನಾನುಕೂಲಕ್ಕೆ ಕಾರಣವಾಗಿವೆ. ಕಚೇರಿಯಲ್ಲಿರುವ ಏಕೈಕ ವಾಹನ ಚಾಲಕ ಹುದ್ದೆ, ರಾತ್ರಿ ಕಾವಲುಗಾರ ಹುದ್ದೆಗಳು ಸಹ ಖಾಲಿ ಇದ್ದು, ವಿದ್ಯಾರ್ಥಿ ನಿಲಯಗಳ ಸಮರ್ಪಕ ನಿರ್ವಹಣೆಗೆ ತೊಡಕಾಗಿದೆ.

94 ಹುದ್ದೆ ಮಂಜೂರು: ಒಬ್ಬರು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಮೂವರು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ನಾಲ್ವರು ಕಚೇರಿ ಅಧೀಕ್ಷಕರು, ಒಬ್ಬರು ತನಿಖಾ ಸಹಾಯಕರು, ಐವರು ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರು, ಒಬ್ಬರು ಬುಡಕಟ್ಟು ಕಲ್ಯಾಣ ವಿಸ್ತರಣಾಧಿಕಾರಿ, 11 ನಿಲಯ ಮೇಲ್ವಿಚಾರಕರು, ಎಂಟು ಶಿಕ್ಷಕರು, 32 ಅಡುಗೆಯವರು, 2 ಅಡುಗೆ ಸಹಾಯಕರು, ಒಬ್ಬ ವಾಹನ ಚಾಲಕ, ಒಬ್ಬ ರಾತ್ರಿ ಕಾವಲುಗಾರ ಹಾಗೂ ನಾಲ್ವರು ಗ್ರೂಪ್‌ ಡಿ ದರ್ಜೆ ಸಿಬ್ಬಂದಿ ಸೇರಿ ಒಟ್ಟು 94 ಮಂಜೂರಾತಿ ಹುದ್ದೆಗಳನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಹೊಂದಿದೆ.

ಆದರೆ ಪ್ರಸ್ತುತ ಕಚೇರಿಯಲ್ಲಿ ಒಬ್ಬರು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಇಬ್ಬರು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ನಾಲ್ವರು ಕಚೇರಿ ಅಧೀಕ್ಷಕರು, ಒಬ್ಬ ತನಿಖಾ ಸಹಾಯಕ, ನಾಲ್ವರು ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರು, ಓರ್ವ ಬುಡಕಟ್ಟು ಕಲ್ಯಾಣ ವಿಸ್ತರಣಾಧಿಕಾರಿ, ನಾಲ್ವರು ನಿಲಯ ಮೇಲ್ವಿಚಾರಕರು, ಒಬ್ಬರು ಶಿಕ್ಷಕರು, ನಾಲ್ವರು ಅಡುಗೆಯವರು, ಒಬ್ಬರು ಅಡುಗೆ ಸಹಾಯಕರು, ಒಬ್ಬರು ರಾತ್ರಿ ಕಾವಲುಗಾರರು ಸೇರಿ ಕೇವಲ 24 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ.

70 ಹುದ್ದೆ ಖಾಲಿ: ಕಚೇರಿಯಲ್ಲಿ ಒಂದು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹುದ್ದೆ, ಒಂದು ಪ್ರಥಮ ದರ್ಜೆ ಸಹಾಯಕರ ಹುದ್ದೆ, ಏಳು ನಿಲಯ ಮೇಲ್ವಿಚಾರಕರ ಹುದ್ದೆ, ಏಳು ಶಿಕ್ಷಕರ ಹುದ್ದೆ, 28 ಅಡುಗೆಯವರ ಹುದ್ದೆ, 21 ಅಡುಗೆ ಸಹಾಯಕರ ಹುದ್ದೆ, ಒಂದು ವಾಹನ ಚಾಲಕರ ಹುದ್ದೆ, ಒಂದು ರಾತ್ರಿ ಕಾವಲುಗಾರರ ಹುದ್ದೆ, ಮೂರು ಗ್ರೂಪ್‌ ಡಿ ಸಿಬ್ಬಂದಿ ಹುದ್ದೆ ಸೇರಿ ಒಟ್ಟು 70 ಹುದ್ದೆಗಳು ಖಾಲಿ ಇವೆ. ಒಟ್ಟಾರೆ ಪರಿಶಿಷ್ಟ ವರ್ಗಗಳ ಏಳ್ಗೆಗಾಗಿಯೇ ಇರುವ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಅಗತ್ಯ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಕ ಮಾಡುವ ಮೂಲಕ ಸರಕಾರ ಪರಿಶಿಷ್ಟರಿಗೆ ಸಮರ್ಪಕ ಸೌಲಭ್ಯ ದೊರಕಿಸಲು ಮುಂದಾಗಬೇಕಿದೆ.

Advertisement

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next