Advertisement
ಪ್ರವಾಹದಿಂದಾಗಿ ಕಾಜಿರಂಗಾ ರಾಷ್ಟ್ರೀಯ ಉದ್ಯಾನದ ಶೇ.70ರಷ್ಟು ಭಾಗ ಜಲಾವೃತವಾಗಿದೆ. ಇಲ್ಲಿರುವ ಪ್ರಾಣಿ ಗಳನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ಸರಕಾರವು ಅರಣ್ಯಾಧಿಕಾರಿಗಳ ರಜೆಗಳನ್ನು ರದ್ದು ಮಾಡಿ, ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದೆ. ರಾತ್ರಿ ವೇಳೆಯಲ್ಲೂ ಅರಣ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಾಣಿ ಗಳು ಬೇಟೆಗಾರರಿಗೆ ಬಲಿಯಾಗದಂತೆ ಹದ್ದಿನ ಕಣ್ಣಿಟ್ಟಿದ್ದಾರೆ. ಬಕ್ಸಾ ಜಿಲ್ಲೆಯ ಬಲಿಪುರ್ ಚಾರ್‌ನಲ್ಲಿ ಸಿಲುಕಿ ಕೊಂಡಿದ್ದ 150 ಮಂದಿ ಗ್ರಾಮಸ್ಥರನ್ನು ಸೇನೆ ರಕ್ಷಿಸಿದೆ.
ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಬಹುಮಹಡಿ ಕಟ್ಟಡವೊಂದು ರವಿವಾರ ಕುಸಿದುಬಿದ್ದಿದೆ. ಒಬ್ಬ ಯೋಧ ಸೇರಿದಂತೆ ಇಬ್ಬರು ಮೃತಪಟ್ಟಿದ್ದು, 23 ಮಂದಿಯನ್ನು ರಕ್ಷಿಸಲಾಗಿದೆ. ಕನಿಷ್ಠ 12 ಯೋಧರು ಅವಶೇಷಗಳಡಿ ಸಿಲುಕಿದ್ದಾರೆ. ಉತ್ತರಾಖಂಡಕ್ಕೆ ತೆರಳುತ್ತಿದ್ದ ಯೋಧರ ಕುಟುಂಬಗಳು ಮಾರ್ಗಮಧ್ಯೆ ಊಟಕ್ಕೆಂದು ಈ ಕಟ್ಟಡದಲ್ಲಿದ್ದ ಹೋಟೆಲ್‌ಗೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಕಟ್ಟಡ ಕುಸಿದುಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.