Advertisement

Belthangady ಅಂಡಮಾನ್‌ನಲ್ಲಿ ಸೇನಾ ವಿಮಾನ ದುರಂತಕ್ಕೆ 7 ವರ್ಷ

12:50 AM Aug 16, 2023 | Team Udayavani |

“ಮೇರಿ ಮಾಟಿ ಮೇರಾ ದೇಶ್‌’ (ನನ್ನ ಮಣ್ಣು ನನ್ನ ದೇಶ) ಅಭಿಯಾನ ಆರಂಭಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 7, ಉಡುಪಿ ಜಿಲ್ಲೆಯಲ್ಲಿ ಓರ್ವ ಸೇರಿ ಕರಾವಳಿಯ 8 ಮಂದಿ ಹುತಾತ್ಮ ಯೋಧರ ವಿಶೇಷ ಸ್ಮಾರಕ ಅವರ ಊರಿನ ಗ್ರಾಮಗಳಲ್ಲಿ ಸ್ಥಾಪನೆಗೊಳ್ಳಲಿದೆ. ಇಂದಿನ ಸರಣಿಯಲ್ಲಿ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಏಕನಾಥ ಶೆಟ್ಟಿ ಅವರ ವೀರಗಾಥೆ.

Advertisement

ಬೆಳ್ತಂಗಡಿ: ಸೇನಾ ಕರ್ತವ್ಯದ ನಿಮಿತ್ತ ಚೆನ್ನೈಯ ತಾಂಬರಂ ವಾಯುನೆಲೆಯಿಂದ ಅಂಡಮಾನ್‌ನ ಪೋರ್ಟ್‌ಬ್ಲೇರ್‌ಗೆ 2016ರ ಜುಲೈ 22ರಂದು ಪ್ರಯಾಣ ಬೆಳೆಸಿದ್ದ ಭಾರತೀಯ ವಾಯುಸೇನೆಯ ಎಎನ್‌-32 ಯುದ್ಧ ವಿಮಾನ ಬಂಗಾಲಕೊಲ್ಲಿ ಸಮುದ್ರದ ಮೇಲೆ ಹಾರುತ್ತಿದ್ದಾಗ ಸಂಪರ್ಕ ಕಡಿತಗೊಂಡಿತ್ತು. ಅದರಲ್ಲಿದ್ದ ಗುರುವಾಯನಕೆರೆಯ ಏಕನಾಥ ಶೆಟ್ಟಿ ಸೇರಿ 29 ಜನ ಸೈನಿಕರ ಸುಳಿವು ಇಂದಿಗೂ ನಿಗೂಢವಾಗಿದೆ.
ಬೆಳಗ್ಗೆ 8.30ಕ್ಕೆ ವಿಮಾನ ಹೊರಟಿದ್ದು, 9.12ಕ್ಕೆ ನಿಲ್ದಾಣದೊಂದಿಗಿನ ಸಂಪರ್ಕ ಕಡಿತಗೊಂಡಿತ್ತು. 11.45ಕ್ಕೆ ಪೋರ್ಟ್‌ಬ್ಲೇರ್‌ಗೆ ತಲುಪಬೇಕಿದ್ದ ವಿಮಾನ ಕಣ್ಮರೆಯಾಗಿರುವುದಾಗಿ ಮಧ್ಯಾಹ್ನ 1.50ಕ್ಕೆ ವಾಯುಸೇನೆ ಪ್ರಕಟಿಸಿತ್ತು.

ಪತ್ತೆಗಾಗಿ ಕೇಂದ್ರ ಸರಕಾರ ಹಾಗೂ ಮಿಲಿಟರಿ ತಜ್ಞರು ಸತತ ಮೂರು ತಿಂಗಳು ನಡೆಸಿದ್ದ ಯತ್ನಗಳು ವಿಫಲವಾದವು. ಇದಕ್ಕಾಗಿ ಎರಡು ಪಿ-8ಎ ವಿಮಾನ, ಮೂರು ಡೋರ್ನಿಯರ್‌ ವಿಮಾನ, ಒಂದು ಜಲಾಂತರ್ಗಾಮಿ, ನೌಕಾ ಸೇನೆಯ 12 ನೌಕೆಗಳನ್ನು ಬಳಸಲಾಗಿತ್ತು. ವಿಮಾನವೊಂದು ಕುರುಹೇ ಇಲ್ಲದಂತೆ ನಾಪತ್ತೆಯಾಗಿರುವುದು ವಾಯುಪಡೆಯ ಇತಿಹಾಸ‌ದಲ್ಲೇ ಇದು ಮೊದಲು. ಅಂದಿನಿಂದ ಇಂದಿನ ವರೆಗೂ ಪತಿಯ ಬರುವಿಕೆಯ ನಿರೀಕ್ಷೆಯಲ್ಲಿ ಪತ್ನಿ ಜಯಂತಿ ಶೆಟ್ಟಿ, ಮಕ್ಕಳಾದ ಅಕ್ಷಯ್‌, ಆಶಿಕಾ ಶೆಟ್ಟಿ ಮತ್ತು ಕುಂಬಸ್ಥರು ಕಾಯುತ್ತಿದ್ದಾರೆ.
ಕಾರ್ಗಿಲ್‌ ಕಾರ್ಯಾಚರಣೆಯಲ್ಲಿ ಭಾಗಿ ಏಕನಾಥ ಅವರು ಮಾಜಿ ಸೈನಿಕ ದಿ| ಕೃಷ್ಣ ಶೆಟ್ಟಿ ಮತ್ತು ಸುನಂದಾ ದಂಪತಿಯ ಐವರು ಮಕ್ಕಳಲ್ಲಿ ನಾಲ್ಕನೆಯವರಾಗಿ 1965ರ ಜೂ. 30ರಂದು ಮಂಗಳೂರಿನ ಕುತ್ತಾರಿನಲ್ಲಿ ಜನಿಸಿದ್ದರು. ಪಿಯುಸಿ ಮುಗಿಸಿ 1985ರಲ್ಲಿ ಭೂ ಸೇನೆ (ಮದ್ರಾಸ್‌ ರೆಜಿಮೆಂಟ್‌)ಗೆ ಸೇರ್ಪಡೆಗೊಂಡು ತಮಿಳು ನಾಡಿನ ವೆಲ್ಲಿಂಗ್‌ಟನ್‌ನಲ್ಲಿ ತರಬೇತಿ ಮುಗಿಸಿ, ಶ್ರೀಲಂಕಾ, ಸಿಕ್ಕಿಂ, ಅರುಣಾಚಲ ಪ್ರದೇಶ, ಕಾಶ್ಮೀರ ಸಹಿತ ದೇಶದ ಹಲವೆಡೆ ಸೇವೆ ಸಲ್ಲಿಸಿದ್ದರು. 1999ರಲ್ಲಿ ಮದ್ರಾಸ್‌ ರೆಜಿಮೆಂಟ್‌ನಲ್ಲಿ ನಾಯಕ್‌ ಹುದ್ದೆಗೆ ಪದೋನ್ನತಿ ಹೊಂದಿ 1999ರಲ್ಲಿ ನಡೆದ ಕಾರ್ಗಿಲ್‌ ಕಾರ್ಯಾಚರಣೆಯಲ್ಲಿ ಅಪ್ರತಿಮ ಸಾಹಸ ಮೆರೆದು ಸೇನಾ ಪದಕ (ಆಪರೇಷನ್‌ ವಿಜಯ್‌) ಪಡೆದುಕೊಂಡಿದ್ದರು.

ಸಿಗದ ಉದ್ಯೋಗ, ಸರಕಾರಿ ಜಾಗ
ಏಕನಾಥ ಅವರ ಪತ್ನಿ ಜಯಂತಿ ಎಂ. ಪ್ರಸಕ್ತ ಪೆರಿಂಜೆ ಎಸ್‌ಡಿಎಂ ಶಾಲಾ ಶಿಕ್ಷಕಿಯಾಗಿದ್ದು, ಪುತ್ರಿ ಆಶಿಕಾ ಎಂಜಿನಿಯರಿಂಗ್‌ ಪೂರ್ಣಗೊಳಿಸಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಪುತ್ರ ಅಕ್ಷಯ್‌ ಎಂ. ಇತ್ತೀಚೆಗಷ್ಟೆ ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ ಪೂರ್ಣಗೊಳಿಸಿದ್ದಾರೆ. ಪುತ್ರಿ ಹಾಗೂ ಪುತ್ರ ಸರಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದು ಅದು ಈಡೇರಿಲ್ಲ. ಅತ್ತ ಸರಕಾರದಿಂದ ನಿವೃತ್ತ ಯೋಧರಿಗೆ ನೀಡಬೇಕಿದ್ದ ಸರಕಾರಿ ಸ್ಥಳವೂ ದೊರೆತಿಲ್ಲ. ಎಲ್ಲವೂ ಭರವಸೆಯಾಗಿಯೇ ಉಳಿದಿವೆ.

ಕೃಷ್ಣಶಿಲಾ ಪ್ರತಿಮೆ ನಿರ್ಮಾಣ
ಏಕನಾಥ ಅವರನ್ನು ಸೇನೆಯು ಹುತಾತ್ಮ ಯೋಧರ ಸಾಲಿನಲ್ಲಿ ಗುರುತಿಸಿದ್ದರೂ ಅವರು ನಮ್ಮೊಂದಿಗೇ ಇದ್ದಾರೆ ಎಂಬ ನೆನಪಿನಲ್ಲಿ ಕುಟುಂಬದವರು ಮೈಸೂರಿನ ಶಿಲ್ಪಿ ಯೋಗರಾಜ್‌ ಅವರ ಮೂಲಕ ಕೃಷ್ಣಶಿಲೆಯ ಪ್ರತಿಮೆಯನ್ನು ನಿರ್ಮಿಸಿ 2023ರ ಜ. 26ರಂದು ನಿವೃತ್ತ ಸೈನಿಕರ ಸಮ್ಮುಖದಲ್ಲಿ ಅನಾವರಣಗೊಳಿಸಲಾಗಿತ್ತು.

Advertisement

ನಿವೃತ್ತಿಯ ಬಳಿಕ ವಾಯುಸೇನೆಗೆ
ಅನಂತರ ಹವಾಲ್ದಾರ್‌ ರ್‍ಯಾಂಕಿಗೆ ಪದೋನ್ನತಿ ಹೊಂದಿ ಸಿಯಾಚಿನ್‌ನ ತಂಗ್ವಾರ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿಯೂ ಪದಕ ಮುಡಿಗೇರಿಸಿ ಕೊಂಡಿದ್ದರು. 24 ವರ್ಷಗಳ ಸೇವೆಯಲ್ಲಿ ಹಲವು ಸೇನಾಪದಕಗಳನ್ನು ಪಡೆದ ಏಕನಾಥ ಅವರಿಗೆ 2009ರಲ್ಲಿ ಗೌರವಾರ್ಹ ಸುಬೇದಾರ್‌ ರ್‍ಯಾಂಕ್‌ ಲಭಿಸಿತು. ಆದೇ ವರ್ಷದ ಫೆ. 28ರಂದು ಸೇವಾ ನಿವೃತ್ತಿ ಹೊಂದಿದರು. ಊರಿನಲ್ಲಿ ದೊರೆತ ಉದ್ಯೋಗವನ್ನು ತ್ಯಜಿಸಿ ವಾಯುಸೇನೆಯಿಂದ ಮತ್ತೆ ಸೇವೆಗೆ ಅವಕಾಶ ಒದಗಿ ಬಂದಾಗ ಡಿಫೆನ್ಸ್‌ ಸೆಕ್ಯೂರಿಟಿ ಫೋರ್ಸ್‌ನಲ್ಲಿ 2016ರ ವರೆಗೆ ಕಾನ್ಪುರ, ಗೋವಾ, ಅಂಡಮಾನ್‌ನಲ್ಲಿ ಒಟ್ಟಾರೆ 6 ವರ್ಷ 7 ತಿಂಗಳು ಸೇವೆ ಸಲ್ಲಿಸಿದ್ದರು. 2016ರಲ್ಲಿ ಅಂಡಮಾನ್‌ನಲ್ಲಿ ಕಾರ್ಯಾಚರಣೆಯಲ್ಲಿದ್ದಾಗ ದುರಂತ ಸಂಭವಿಸಿತ್ತು.

31 ವರ್ಷಗಳ ದೇಶಸೇವೆ
ಒಟ್ಟು 31 ವರ್ಷ 7 ತಿಂಗಳು ದೇಶಸೇವೆಯಲ್ಲಿ ತೊಡಗಿಸಿಕೊಂಡ ಹೆಮ್ಮೆ ಏಕನಾಥ ಅವರದು. ಕಣ್ಮರೆಯಾದ 90 ದಿನಗಳ ಬಳಿಕ ಅವರ ಸಮವಸ್ತ್ರವನ್ನು ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಕಳುಹಿಸಿಕೊಡಲಾಗಿತ್ತು. ಜಿಲ್ಲಾಧಿಕಾರಿಗಳ ಸಮ್ಮುಖ ದಲ್ಲಿ ಗೌರವ ಸಲ್ಲಿಸಿ ಮಡಂತ್ಯಾರು ವರೆಗೆ ಬಂದು ಅಲ್ಲಿಂದ ಮೆರವಣಿಗೆ ಮೂಲಕ ಸಾಗಿ ಮನೆಯವರಿಗೆ ಹಸ್ತಾಂತರಿಸಲಾಗಿತ್ತು.

ಪತಿ ಏಕಾನಾಥ ಶೆಟ್ಟಿ ಅವರು 31 ವರ್ಷ 7 ತಿಂಗಳು ದೇಶಕ್ಕಾಗಿ ಉನ್ನತ ಸೇವೆ ನೀಡಿದ್ದಾರೆ. ಅವರ ಪತ್ನಿ ಎಂದು ಹೇಳಿಕೊಳ್ಳುವುದೇ ನನಗೆ ಹೆಮ್ಮೆ ಅನಿಸಿದೆ. ಕಳೆದ ಬಾರಿ ಸ್ವಾತಂತ್ರÂ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ರಾಜ್ಯ ಶೌರ್ಯ ಪ್ರಶಸ್ತಿ ತುಳುನಾಡಿನ ಯೋಧನನ್ನು ಅರಿಸಿ ಬಂದಿದೆ. ನೋವನ್ನೆಲ್ಲ ಮರೆತು ಮಕ್ಕಳ ಭವಿಷ್ಯ ರೂಪಿಸಿದ್ದೇನೆ.
– ಜಯಂತಿ ಎಂ., ಏಕನಾಥ ಶೆಟ್ಟಿ ಅವರ ಪತ್ನಿ

– ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next