ಹಾವೇರಿ: ಜಿಲ್ಲೆಯ ಏಳು ಗ್ರಾಮ ಪಂಚಾಯಿತಿಗಳು ಪ್ರಸಕ್ತ ಸಾಲಿನ “ಗಾಂಧಿ ಗ್ರಾಮ’ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು. ಗಾಂಧಿ ಜಯಂತಿಯಂದು ಈ ಗ್ರಾಪಂಗಳಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸ್ವಚ್ಛತೆ, ನೈರ್ಮಲ್ಯ, ಕಂದಾಯ ವಸೂಲಿ ಹೀಗೆ ಎಲ್ಲ ವಿಭಾಗಗಳಲ್ಲಿ ಸಾಧನೆ ತೋರಿದ ಗ್ರಾಮ ಪಂಚಾಯಿತಿಗಳಿಗೆ ನೀಡುವ ಪುರಸ್ಕಾರ ಇದಾಗಿದ್ದು, ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು, ಹಾವೇರಿ ತಾಲೂಕಿನ ಕೋಣನತಂಬಗಿ, ಹಾನಗಲ್ಲ ತಾಲೂಕಿನ ಬೆಳಗಾಲಪೇಟೆ, ಹಿರೇಕೆರೂರು ತಾಲೂಕಿನ ಕಣವಿಸಿದ್ದಗೇರಿ, ರಾಣಿಬೆನ್ನೂರು ತಾಲೂಕಿನ ಕವಲೆತ್ತು, ಸವಣೂರು ತಾಲೂಕಿನ ಹುರಳಿಕುಪ್ಪಿ, ಶಿಗ್ಗಾವಿ ತಾಲೂಕಿನ ನಾರಾಯಣಪುರ ಗ್ರಾಪಂಗಳು ಪ್ರತಿ ವರ್ಷ ಗಾಂಧಿ ಜಯಂತಿಯಂದು ನೀಡುವ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿವೆ.
ಅ. 2ರ ಗಾಂಧಿ ಜಯಂತಿಯಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಂಬಂಧಿಸಿದ ಗ್ರಾಪಂಗಳ ಅಧ್ಯಕ್ಷರು, ಪಿಡಿಒ, ತಾಪಂ ಇಒ ಹಾಗೂ ಜಿಪಂ ಸಿಇಒ ಅವರು ಪ್ರಶಸ್ತಿಯನ್ನು ಮುಖ್ಯಮಂತ್ರಿಗಳು, ಆರ್‌ಡಿಪಿಆರ್ ಸಚಿವರಿಂದ ಸ್ವೀಕರಿಸಲಿದ್ದಾರೆ. ಪುರಸ್ಕಾರಕ್ಕೆ ಆಯ್ಕೆಯಾದ ಪಂಚಾಯಿತಿಗಳಿಗೆ ಐದು ಲಕ್ಷ ರೂ. ಚೆಕ್, ಅಭಿನಂದನಾ ಪತ್ರ ಸಿಗಲಿದೆ.
ಆಯ್ಕೆ ಪ್ರಕ್ರಿಯೆ: 2018-19ನೇ ಸಾಲಿನ ಪ್ರಗತಿ ಆಧರಿಸಿ ಗ್ರಾಪಂಗಳನ್ನು ಆಯ್ಕೆ ಮಾಡಲಾಗುತ್ತದೆ. ಸಾಂಸ್ಥಿಕ ಮತ್ತು ಪ್ರಗತಿ ಸೂಚ್ಯಾಂಕಗಳನ್ನು ಆಧರಿಸಿ ಮಾರ್ಗಸೂಚಿಯನ್ನೊಳಗೊಂಡ 150 ಅಂಕಗಳ ಪ್ರಶ್ನಾವಳಿಗಳನ್ನು ತಂತ್ರಾಂಶದಿಂದ ಉತ್ತರಿಸುವ ಮೂಲಕ ಗ್ರಾಪಂಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಅದಕ್ಕೆ ಜಿಲ್ಲೆಯ ಎಲ್ಲ 224 ಗ್ರಾಪಂಗಳು ಅರ್ಜಿ ಸಲ್ಲಿಸಿದ್ದವು. ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತೆ, ನೈರ್ಮಲ್ಯ, ಬಯಲು ಬಹಿರ್ದೆಸೆಮುಕ್ತ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಪ್ರಗತಿ, ಮೂಲಸೌಕರ್ಯ, ಸೇರಿದಂತೆ ಹಲವಾರು ಅಂಶಗಳನ್ನು ಪರಿಗಣಿಸಲಾಗುತ್ತದೆ. ಈ ಎಲ್ಲ ವಿಭಾಗಗಳಲ್ಲೂ ಆಗಿರುವ ಸರ್ವತೋಮುಖ ಅಭಿವೃದ್ಧಿ ಹಾಗೂ ಆಯ್ಕೆಯಾಗಿ ಇರುವ ಮಾನದಂಡಗಳ ಆಧಾರದಲ್ಲಿ ಪುರಸ್ಕಾರಕ್ಕೆ ಪರಿಗಣಿಸಲಾಗುತ್ತದೆ. ಜಿಲ್ಲೆಯ ಹೊಸ ತಾಲೂಕು ಹೊರತುಪಡಿಸಿ ಪ್ರತಿ ತಾಲೂಕಿಗೆ ಒಂದರಂತೆ ಒಟ್ಟು ಏಳು ಗ್ರಾಪಂಗಳು ಪುರಸ್ಕಾರಕ್ಕೆ ಆಯ್ಕೆಯಾಗಿವೆ.
ಹಣಕಾಸಿನ ನಿರ್ವಹಣೆ, 14ನೇ ಹಣಕಾಸು ಆಯೋಗದಡಿ ಬಿಡುಗಡೆಯಾದ ಅನುದಾನದ ಬಳಕೆ, ಅನುದಾನ ಬಳಕೆ, ಜಮಾಬಂದಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೊಗ ಖಾತ್ರಿ ಯೋಜನೆ ಅನುಷ್ಠಾನ, ಮೂಲ ಸೌಕರ್ಯಗಳು ವಿಭಾಗದಲ್ಲಿ ಕುಡಿಯುವ ನೀರು, ಬೀದಿ ದೀಪ, ವಸತಿ ಯೋಜನೆ, ನೈರ್ಮಲಿಕರಣ, ತ್ಯಾಜ್ಯ ನಿರ್ವಹಣೆ, ನಮ್ಮ ಗ್ರಾಮ ಯೋಜನೆ, ವಾರ್ಡ್ ಸಭೆ, ಗ್ರಾಮ ಸಭೆ, ಸ್ಥಾಯಿ ಸಮಿತಿ ಸಭೆ, ಸಕಾಲ ಸೇವೆಗಳು, ಮಾಹಿತಿ ಹಕ್ಕು ಅಧಿನಿಯಮ ನಿರ್ವಹಣೆ, ಆಸ್ತಿಗಳ ನಿರ್ವಹಣೆ, ಸಿಬ್ಬಂದಿ ವಿಷಯ ನಿರ್ವಹಣೆ ಹೀಗೆ ವಿವಿಧ ವಿಭಾಗಗಳಿಗೆ ಪ್ರತ್ಯೇಕವಾಗಿ ಅಂಕಗಳನ್ನು ನಿಗದಿಪಡಿಸಿ 80 ಪ್ರಶ್ನೆಗಳನ್ನು ಕೇಳಲಾಗಿತ್ತು.
ಜಿಲ್ಲಾಮಟ್ಟದ ಅ ಧಿಕಾರಿಗಳ ನೇತೃತ್ವದ ತಂಡವು ಮಾರ್ಗಸೂಚಿ ಅನ್ವಯ ಸ್ಥಳ ಪರಿಶೀಲನೆ ಮಾಡಿ, ಬಳಿಕ ಜಿಪಂ ಸಿಇಒ ನೇತೃತ್ವದ ಆಯ್ಕೆ ಸಮಿತಿ ಮೂಲಕ ತಾಲೂಕಿಗೆ ಒಂದರಂತೆ ಗ್ರಾಪಂಗಳನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತು.