ಹುಣಸೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದ ಎಸಿ.ಡಿ.ಪಿ.ಐ ತಾಲೂಕು ಅಧ್ಯಕ್ಷ ಸೇರಿದಂತೆ 7 ಮಂದಿಯನ್ನು ನಗರ ಠಾಣಾ ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿರುವ ಘಟನೆ ನಡೆದಿದೆ.
ಎಸಿ.ಡಿ.ಪಿ.ಐ.ಕಾರ್ಯಕರ್ತರು ಯಾವುದೇ ಅನುಮತಿ ಪಡೆಯದೆ 2019 ರ ಫೆ. 1 ರಂದು ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಅಂದಿನ ಉಪವಿಭಾಗಾಧಿಕಾರಿ ಬಿ.ಎನ್.ವೀಣಾರವರು ಸರಕಾರಿ ಕರ್ತವ್ಯಕ್ಕೆ ಅಡ್ಡಿ, ಸಾರ್ವಜನಿಕ ಶಾಂತಿ ಭಂಗ ಉಂಟುಮಾಡಿದ್ದಾರೆಂದು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.
ನ್ಯಾಯಾಲಯ ವಾರೆಂಟ್ ಜಾರಿ ಮಾಡಿದ್ದು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಯೂನಸ್, ಎಸ್.ಡಿ.ಪಿ.ಐ ತಾಲೂಕು ಅಧ್ಯಕ್ಷ ಅಕ್ಮಲ್ ಅಹಮದ್, ರೆಹಮತುಲ್ಲಾ ಷರೀಫ್, ಜಭಿವುಲ್ಲಾ, ಹೆಬ್ಸೂರ್ ಹೆರಮಾನ್, ಮಹಮದ್ ವಾಸಿಂ, ಮಹಮದ್ ಜಭಿ ನ್ಯಾಯಾಂಗ ಬಂಧನಕ್ಕೊಳಗಾದವರು.
ಇದನ್ನೂ ಓದಿ:ಚೆಕ್ ಬೌನ್ಸ್ ಪ್ರಕರಣ: ಶಿಕ್ಷಕ ನ್ಯಾಯಾಂಗ ಬಂಧನಕ್ಕೆ
ನಗರ ಠಾಣೆ ಇನ್ಸ್ ಪೆಕ್ಟರ್ ಸಿ.ವಿ.ರವಿ, ಸಿಬ್ಬಂದಿಗಳಾದ ಮಂಜುನಾಥ್, ಚಂದ್ರಪ್ಪ, ಮಹಮದ್ ಆಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚುವರಿ ಹಿರಿಯ ಶ್ರೇಣಿ ನ್ಯಾಯಾಧೀಶ ಶರಿನ್ ಜೆ.ಅನ್ಸಾರಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.