ಬೆಂಗಳೂರು: 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ಏಳು ಅಂಶಗಳ ಕಾರ್ಯಕ್ರಮ ರೂಪಿಸಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಕಲ್ಪದಿಂದ ಸಿದ್ಧಿ-ದೃಢ ನಿಶ್ಚಯದಿಂದ ಸಾಧನೆಯತ್ತ ನ್ಯೂ ಇಂಡಿಯಾ ಮೂಮೆಂಟ್ (2017-2022) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿಯನ್ನೇ ನಂಬಿರುವ ರೈತರ ಆದಾಯ ಕೂಡ 2020ರಲ್ಲಿ ದ್ವಿಗುಣಗೊಳ್ಳುವಂತೆ ಮಾಡಲು ಸಂಕಲ್ಪ ಮಾಡಬೇಕು. ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣಗೊಳ್ಳುವಂತೆ ಮಾಡಲು ಏಳು ಅಂಶಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದನ್ನು ತಪ್ಪದೇ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಮುಂದಿನ ಐದು ವರ್ಷಗಳಲ್ಲಿ ಇಡೀ ವಿಶ್ವವೇ ನಮ್ಮೆಡೆಗೆ ನೋಡುವಂತೆ ಆಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ಕ್ಷೇತ್ರವೂ ಅಭಿವೃದ್ಧಿ ಸಾಧಿಸಬೇಕಿದೆ ಎಂದು ಹೇಳಿದರು. ಖಚಿತ ಆದಾಯಕ್ಕಾಗಿ ಎಲ್ಲರೂ ಬೆಳೆ ವಿಮೆ ಮಾಡಿಸಬೇಕು. ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಮಣ್ಣು , ಆರೋಗ್ಯ, ತಂತ್ರಜ್ಞಾನದ ಮಾಹಿತಿ ಪಡೆದುಕೊಂಡು ವ್ಯವಸ್ಥಾಯ ಮಾಡಬೇಕು.
ಅಧಿಕ ಇಳುವರಿ ನೀಡುವ ಬಿತ್ತನೆ ಬೀಜ ಹಾಗೂ ಸಸಿಗಳನ್ನು ಬಳಸಬೇಕು. ಕೃಷಿಕರೇ ತಮ್ಮ ಬೆಳೆಗಳ ಮೌಲ್ಯವರ್ಧನೆ ಮಾಡಬೇಕು. ಆಹಾರ ಧಾನ್ಯಗಳನ್ನು ಸೂಕ್ತ ರೀತಿಯಲ್ಲಿ ಶೇಖರಿಸಬೇಕು. ಈ ಏಳು ಅಂಶಗಳನ್ನು ಕೃಷಿಕರು ಕಾರ್ಯರೂಪಕ್ಕೆ ತರುವ ಮೂಲಕ ಆದಾಯ ಹೆಚ್ಚಿಸಿಕೊಳ್ಳುತ್ತೇವೆ ಎಂದು ಸಚಿವ ಅನಂತಕುಮಾರ್ ರೈತರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಹವಾಮಾನ ವೈಪರಿತ್ಯದಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಆದರೂ ಸಹ ಕಳೆದ 70 ವರ್ಷಗಳಿಗೆ ಹೋಲಿಸಿದರೆ ಈ ವರ್ಷ ದೇಶದ ರೈತ ಆಹಾರ ಪದಾರ್ಥಗಳನ್ನು ಬೆಳೆದು ಶತಮಾನದ ದಾಖಲೆ ನಿರ್ಮಿಸಿದ್ದಾನೆ. 2022 ರ ವೇಳಗೆ ಭಾರತ ಜಗತ್ತಿನ ಸೂಪರ್ ಪವರ್ ದೇಶವಾಗುವುದರಲ್ಲಿ ಸಂಶಯವಿಲ್ಲ. ಕೇಂದ್ರ ಸರ್ಕಾರ ರೈತರಿಗಾಗಿ ಪ್ರಧಾನ ಮಂತ್ರಿ ಫಸಲ ಬೀಮಾ ಯೋಜನೆಯಲ್ಲಿ ರೈತರಿಗೆ ಬೆಳೆ ವಿಮೆ ಸೌಲಭ್ಯ ಕಲ್ಪಿಸಿದೆ. ದೇಶಾದ್ಯಂತ ಜನೌಷಧಿ ಮಳಿಗೆಯಲ್ಲಿ ಕಡಿಮೆ ಬೆಲೆಯಲ್ಲಿ ಹೃದಯಕ್ಕೆ ಅಳವಡಿಸುವ ಸ್ಟಂಟಗಳು, ಮಂಡಿ ಚಿಪ್ಪುಗಳನ್ನು ಸಹ ಕೇಂದ್ರ ಸರ್ಕಾರ ನೀಡುತ್ತಿದೆ ಎಂದರು.
ಈ ಹಿಂದೆ ನಮ್ಮ ದೇಶದಲ್ಲಿ ಯೂರಿಯಕ್ಕಾಗಿ ಲಾಠಿ ಚಾರ್ಜ್ ಆಗುತ್ತಿತ್ತು. ರೈತರಿಗೆ ಯೂರಿಯಾ ಸಿಗುವ ಮುನ್ನವೇ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿತ್ತು. ಪ್ರಸ್ತುತ ಬೇವು ಲೇಪಿತ ಯೂರಿಯಾವನ್ನು ರೈತರಿಗೆ ಕೊಡುತ್ತಿರುವುದರಿಂದ ಕಾಳ ಸಂತೆಗೆ ಹೋಗುತ್ತಿಲ್ಲ. ಇದರಿಂದ ಬೆಳೆಗಳ ಇಳುವರಿ ಶೇ.10ರಷ್ಟು ಜಾಸ್ತಿಯಾಗುತ್ತಿದೆ ಎಂದ ಅವರು, ಚೀನಾದಿಂದ ಪ್ರಸ್ತುತ ಯೂರಿಯಾ ಆಮದು ಮಾಡಿಕೊಳ್ಳುತ್ತಿದ್ದೇವೆ. 3 ವರ್ಷಗಳಲ್ಲಿ ಪಾಕಿಸ್ತಾನಕ್ಕೆ ಮೇಡ್ ಇನ್ ಇಂಡಿಯಾ ಯೂರಿಯವನ್ನು ರಫ್ತು ಮಾಡುವ ಸ್ಥಿತಿ ಬರಲಿದೆ ಎಂದು ಹೇಳಿದರು.
ಕೇಂದ್ರ ಸಚಿವ ಡಿ.ಸಿ.ಸದಾನಂದಗೌಡ ಮಾತನಾಡಿ, 2020ರೊಳಗೆ ಎಲ್ಲಾ ರೈತರು ಸ್ವಾಭಿಮಾನಿಗಳಾಗಿರಬೇಕು. ಬೆಳೆ ವಿಮೆ, ಹನಿ ನೀರಾವರಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಡಿಎಸಿ ಜಂಟಿ ಕಾರ್ಯದರ್ಶಿ ನೀರಜ ಉಪಸ್ಥಿತರಿದ್ದರು. ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಹೆಚ್. ಶಿವಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.