ರಾಜಸ್ಥಾನ: ವೇಗವಾಗಿ ಬಂದ ಕಾರು ಟ್ರಕ್ ಗೆ ಡಿಕ್ಕಿಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಇಬ್ಬರು ಮಕ್ಕಳು, ಮೂವರು ಮಹಿಳೆಯರು ಸೇರಿದಂತೆ ಏಳು ಮಂದಿ ಸಜೀವವಾಗಿ ದಹನವಾಗಿರುವ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:Building Collapses: ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರು ಮೃತ್ಯು , 17 ಮಂದಿಗೆ ಗಾಯ
ಎಲ್ಲಾ ಪ್ರಯಾಣಿಕರು ಉತ್ತರಪ್ರದೇಶದ ಮೀರತ್ ನಿವಾಸಿಗಳು ಎಂದು ಗುರುತಿಸಲಾಗಿದ್ದು, ರಾಜಸ್ಥಾನದ ಸಲ್ಸಾರ್ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಕಾರು ಚಾಲಕ ಟ್ರಕ್ ಅನ್ನು ಓವರ್ ಟೇಕ್ ಮಾಡಿದ ಸಂದರ್ಭದಲ್ಲಿ ಮತ್ತೊಂದು ವಾಹನ ಮುಂಭಾಗದಿಂದ ಬಂದಾಗ ನಿಯಂತ್ರಣ ತಪ್ಪಿ ಟ್ರಕ್ ಗೆ ಡಿಕ್ಕಿ ಹೊಡೆದಿದ್ದು, ತಕ್ಷಣವೇ ಕಾರಿಗೆ ಬೆಂಕಿ ಹೊತ್ತುಕೊಂಡಿರುವುದಾಗಿ ವರದಿ ವಿವರಿಸಿದೆ.
ಸ್ಥಳೀಯರು ಕಾರಿನೊಳಗಿದ್ದ ಜನರ ಪ್ರಾಣ ಉಳಿಸಲು ಸಾಕಷ್ಟು ಪ್ರಯತ್ನಪಟ್ಟರೂ ಅದು ಸಾಧ್ಯವಾಗದೇ, ಏಳು ಮಂದಿ ಸಜೀವವಾಗಿ ದಹನವಾಗಿರುವುದಾಗಿ ವರದಿ ತಿಳಿಸಿದೆ. ಕಾರಿನೊಳಗಿದ್ದ ಪ್ರಯಾಣಿಕರು ಪ್ರಾಣ ಉಳಿಸಲು ಅಂಗಲಾಚುತ್ತಿದ್ದರು ಎಂದು ಪ್ರತ್ಯಕ್ಷದರ್ಶಿ ರಾಮ್ನಿನಿವಸ್ ಸೈನಿ ತಿಳಿಸಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದ್ದರೂ ಕೂಡಾ ಅಷ್ಟರಲ್ಲಿಯೇ ಬೆಂಕಿ ಕೆನ್ನಾಲೆಗೆ ಸಿಲುಕಿ ಪ್ರಯಾಣಿಕರು ಕೊನೆಯುಸಿರೆಳೆದಿದ್ದರು. ಮೃತರನ್ನು ನೀಲಂ ಗೋಯಲ್ (55), ಆಕೆಯ ಮಗ ಅಶುತೋಷ್ ಗೋಯಲ್ (35), ಮಂಜು ಬಿಂದಾಲ್ (58), ಆಕೆಯ ಮಗ ಹಾರ್ದಿಕ್ ಬಿಂದಾಲ್ (37ವರ್ಷ), ಆತನ ಪತ್ನಿ ಸ್ವಾತಿ ಬಿಂದಾಲ್ (32), ದಂಪತಿಯ ಇಬ್ಬರು ಮಕ್ಕಳು ದುರಂತದಲ್ಲಿ ಸಾವನ್ನಪ್ಪಿದ್ದು, ಟ್ರಕ್ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.