ನವದೆಹಲಿ:ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಏಳು ಮಂದಿ ಸಜೀವವಾಗಿ ದಹನವಾಗಿದ್ದು, ಸುಮಾರು ಹಲವಾರು ಜನರು ಗಾಯಗೊಂಡಿರುವ ಘಟನೆ ಶನಿವಾರ (ಮಾರ್ಚ್ 12) ನಸುಕಿನ ವೇಳೆ ಈಶಾನ್ಯ ದೆಹಲಿಯ ಗೋಕುಲ್ ಪುರಿ ಪ್ರದೇಶದಲ್ಲಿ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಪೋರ್ನ್ ವಿಡಿಯೋ ವೆಬ್‌ಸೈಟ್ ನಿಷೇಧಿಸಿದ್ದರೂ ಸಿಗುತ್ತಿವೆ ಮಕ್ಕಳ ಅಶ್ಲೀಲ ದೃಶ್ಯ ತುಣುಕುಗಳು
ನಸುಕಿನ ವೇಳೆ ಗೋಕುಲ್ ಪುರಿ ಗ್ರಾಮದಲ್ಲಿ ಜೋಪಡಿಗಳಿಗೆ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಮಾಹಿತಿ ಬಂದಿರುವುದಾಗಿ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದು, ಕೂಡಲೇ ಘಟನಾ ಸ್ಥಳಕ್ಕೆ 13 ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿರುವುದಾಗಿ ವರದಿ ಹೇಳಿದೆ.
ಘಟನಾ ಸ್ಥಳದಲ್ಲಿ ಏಳು ಮಂದಿಯ ಶವವನ್ನು ಹೊರತೆಗೆಯಲಾಗಿದೆ. ಅಲ್ಲದೇ ಬೆಂಕಿಯಿಂದಾಗಿ 60 ಗುಡಿಸಲುಗಳಿಗೆ ಹಾನಿಯಾಗಿದ್ದು, 30 ಗುಡಿಸಲುಗಳು ಬೆಂಕಿಯಿಂದ ಭಸ್ಮವಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂಜಾನೆ 4ಗಂಟೆ ವೇಳೆಗೆ ಬೆಂಕಿಯನ್ನು ನಂದಿಸಲಾಯ್ತು ಎಂಬುದಾಗಿ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ ಎಂದು ವರದಿ ತಿಳಿಸಿದೆ.
ಅಗ್ನಿದುರಂತದಲ್ಲಿ ಏಳು ಮಂದಿ ಸಾವನ್ನಪ್ಪಿರುವ ಘಟನೆ ಬಗ್ಗೆ ಈಶಾನ್ಯ ದೆಹಲಿಯ ಸಂಸದ ಮನೋಜ್ ತಿವಾರಿ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.