ಸುವರ್ಣವಿಧಾನಸೌಧ: ಜಾಗತಿಕ ಬಂಡವಾಳ ಹೂಡಿಕೆಯಡಿ ರಾಜ್ಯಕ್ಕೆ ಹರಿದು ಬಂದಿರುವ ಏಳು ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಗೆ ಮುಂದಿನ ಮೂರು ತಿಂಗಳಲ್ಲಿ ಪರಿಪೂರ್ಣ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.
ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ನ ಡಾ|ಕೆ.ಗೋವಿಂದರಾಜ್, ಎಂ.ನಾಗರಾಜ್ ಯಾದವ್ ಮತ್ತು ಯು.ಬಿ.ವೆಂಕಟೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವರ್ಷ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 9 ಲಕ್ಷ ಕೋಟಿ ರೂ.ಗಳಷ್ಟು ಬಂಡವಾಳ ರಾಜ್ಯಕ್ಕೆ ಹರಿದು ಬಂದಿದೆ. ಈ ಪೈಕಿ ಎರಡು ಲಕ್ಷ ಕೋಟಿ ರೂ.ಬಂಡವಾಳ ಹೂಡಿಕೆಯಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಕೈಗಾರಿಕಾ ಸ್ನೇಹಿ ನೆಲೆಯಾಗಿ ರೂಪುಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಡವಾಳ ಬರಲಿದೆ ಎಂದು ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪರಿಷತ್ತಿನ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಬರೀ ಬಂಡವಾಳ ಹರಿದು ಬಂದಿದ್ದು ಮಾತ್ರ ಸುದ್ದಿಯಾಗುತ್ತಿದೆ. ಆದರೆ ಅದರಿಂದ ಎಷ್ಟು ಉದ್ಯೋಗ ಸೃಷ್ಠಿಯಾಗಿದೆ ಮತ್ತು ಎಷ್ಟು ಪ್ರಮಾಣದಲ್ಲಿ ಬಂಡವಾಳ ಹೂಡಿಕೆಯಾಗಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಈ ಹಿಂದಿನ ಬಂಡವಾಳ ಹೂಡಿಕೆದಾರರ ಸಮಾವೇಶದ ಪೈಕಿ ಶೇ.5 ರಷ್ಟು ಮಾತ್ರ ಹೂಡಿಕೆಯಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ ಎಂದರು.
ಇದಕ್ಕೆ ಉತ್ತರಿಸಿದ ಸಚಿವ ನಿರಾಣಿ, ರಾಜ್ಯ ಏಕಗವಾಕ್ಷಿ ಸಭೆಗಳಲ್ಲಿ 2.83 ಲಕ್ಷ ಕೋಟಿ ರೂ. ಒಡಂಬಡಿಕೆ ಮಾಡಿಕೊಂಡ ಯೋಜನೆಗಳಲ್ಲಿ 5.41 ಲಕ್ಷ ಕೋಟಿ ರೂ.ಹಾಗೂ ಕೈಗಾರಿಕೋದ್ಯಮಿಗಳ ಘೋಷಿಸಿದ ಬಂಡವಾಳ 1.57 ಲಕ್ಷ ಕೋಟಿ ರೂ.ಸೇರಿ ಒಟ್ಟು 9.81 ಲಕ್ಷ ಕೋಟಿ ರೂ.ನಷ್ಟು ಬಂಡವಾಳ ಹರಿದು ಬಂದಿದೆ. ಈ ಪೈಕಿ 2 ಲಕ್ಷ ಕೋಟಿ ರೂ. ಈಗಾಗಲೇ ಹೂಡಿಕೆಯಾಗಿದೆ. ಇನ್ನುಳಿದ 7 ಲಕ್ಷ ಕೋಟಿ ರೂ.ನಷ್ಟು ಬಂಡವಾಳವನ್ನು ಬೆಂಗಳೂರು ಹೊರತುಪಡಿಸಿ ಇತರ ಎರಡನೇ ದರ್ಜೆ ನಗರಗಳ ಸುತ್ತಮುತ್ತ ಸ್ಥಳೀಯ ಸಂಪನ್ಮೂಲ ಮತ್ತು ಸರಕು ಸಾಗಣೆ ಸೇರಿ ಅಗತ್ಯ ಲಭ್ಯತೆಗಳನ್ನು ನೋಡಿಕೊಂಡು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
1 ಲಕ್ಷ ಎಕರೆ ಡಿನೋಟಿಫಿಕೇಶನ್ ಮಾಡಿದ್ದು ಸಿದ್ದು: ಹಿಂದಿನ ಜಿಮ್‌ನಲ್ಲಿ ಹೂಡಿಕೆಯಾಗಿದ್ದ ಬಂಡವಾಳ ವಾಪಸ್ ಹೋಗಲು ಇಲ್ಲಿ ಭೂಬ್ಯಾಂಕ್ ಇರಲಿಲ್ಲ. ರೈತರಿಂದ ಒಪ್ಪಿಗೆ ಪಡೆದುಕೊಂಡು ನಾವು ವಶಕ್ಕೆ ಪಡೆದುಕೊಂಡಿದ್ದ 1.5 ಲಕ್ಷ ಎಕರೆ ಭೂಮಿಯ ಪೈಕಿ 1 ಲಕ್ಷ ಎಕರೆ ಭೂಮಿಯನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಕೂಡಲೇ ಡಿನೋಟಿಫೈ ಮಾಡಿದರು. ಹೀಗಾಗಿ ಬಂಡವಾಳಗಾರರು ಇಲ್ಲಿ ನಿಲ್ಲಲಿಲ್ಲ. ಧಾರವಾಡದಲ್ಲಿ ನ್ಯಾನೋ ಘಟಕ ಸ್ಥಾಪನೆಗೆ ಒತ್ತು ನೀಡಿದ್ದೆವು. ಆದರೆ ಭೂಮಿ ಇಲ್ಲದೇ ಹೋಗಿದ್ದರಿಂದ ಅದು ಗುಜರಾತ್‌ಗೆ ಹೋಯಿತು ಎಂದು ಸಚಿವ ನಿರಾಣಿ ಕಾಂಗ್ರೆಸ್‌ನ ಸದಸ್ಯರಿಗೆ ಪರೋಕ್ಷ ಟಾಂಗ್ ಕೊಟ್ಟರು.
ಮೆಚ್ಚಿಕೊಳ್ಳುವುದು ಬಿಡುವುದು ವರನಿಗೆ ಬಿಟ್ಟಿದ್ದು
ಜಿಮ್ ಇನ್ವೆಸ್ಟ್ ಕರ್ನಾಟಕ-2022ಕ್ಕೆ ಬಳಕೆಯಾದ ಖರ್ಚು ಸೇರಿ ಹೆಚ್ಚಿನ ಹಣವನ್ನು ಬಂಡವಾಳಗಾರರು ಭೂ ಬ್ಯಾಂಕಿಗೆ ಪರ್ಯಾಯವಾಗಿ ಸರ್ಕಾರದ ಖಾತೆಗಳಲ್ಲಿ ಇರಿಸಿದ್ದ ಹಣದ ಬಡ್ಡಿ ಹಣದಲ್ಲಿ ಮಾಡಲಾಗಿದೆ ಎಂದು ಸಚಿವ ಮುರುಗೇಶ ನಿರಾಣಿ ಸ್ಪಷ್ಟನೆ ನೀಡಿದರು. 2010ರ ಜಿಮ್‌ಗೆ 32 ಕೊಟಿ ರೂ. ಹಾಗೆಯೇ 2022ರ ಸಮಾವೇಶಕ್ಕೆ 75 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಇನ್ನು ಸಮಾವೇಶ ಮಾಡದೇ ಬಂಡವಾಳಗಾರರನ್ನು ದೇಶ ಸುತ್ತಿ ಕರೆಯದೇ ಹೇಗೆ ಮಾಡಲು ಸಾಧ್ಯ? ವಧು ತೋರಿಸುತ್ತೇವೆ, ಮೆಚ್ಚಿಕೊಳ್ಳುವುದು ಬಿಡುವುದು ವರನಿಗೆ ಬಿಟ್ಟಿದ್ದು ಎಂದರು.