Advertisement

ಬಂದ್‌ ಹಿಂಸೆಗೆ 9 ಬಲಿ; “ಭಾರತ್‌ ಬಂದ್‌’ಗೆ ತತ್ತರಿಸಿದ ಉತ್ತರ

06:00 AM Apr 03, 2018 | Team Udayavani |

ಹೊಸದಿಲ್ಲಿ: ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ವಿರುದ್ಧದ ಜಾತಿ ನಿಂದನೆ ಪ್ರಕರಣಗಳ ನಿಯಮಗಳನ್ನು ಸಡಿಲಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ವಿರುದ್ಧ ದಲಿತ ಸಂಘಟನೆಗಳು ಸಿಡಿದೆದ್ದಿವೆ. ಈ ಹಿನ್ನೆಲೆಯಲ್ಲಿ ಸೋಮವಾರ ಕರೆ ನೀಡಿದ್ದ “ಭಾರತ್‌ ಬಂದ್‌’, ಹಿಂಸಾಚಾರಕ್ಕೆ ತಿರುಗಿದ ಪರಿಣಾಮ 9 ಮಂದಿ ಪ್ರಾಣ ತೆತ್ತು, ನೂರಾರು ಮಂದಿ ಗಾಯಗೊಂಡಿದ್ದಾರೆ. ಕೋಟ್ಯಂತರ ರೂ. ಮೌಲ್ಯದ ಆಸ್ತಿಪಾಸ್ತಿಗಳು ನಷ್ಟವಾಗಿವೆ.

Advertisement

ದಿಲ್ಲಿ, ಪಂಜಾಬ್‌, ಮಧ್ಯಪ್ರದೇಶ ಸಹಿತ ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಹಿಂಸಾ ಚಾರ ವಿಕೋಪಕ್ಕೆ ತಿರುಗಿದ್ದರಿಂದಾಗಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಸೇನೆ ರವಾನಿಸಲಾಗಿದೆ. ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರವು ಸೋಮವಾರ, ತೀರ್ಪಿನ ವಿರುದ್ಧ ಮರುಪರಿಶೀಲನ ಅರ್ಜಿ ಸಲ್ಲಿಸಿದೆ. ಕಾಯ್ದೆಯಲ್ಲಿ ಈ ಹಿಂದಿದ್ದ ಅಂಶಗಳನ್ನೇ ಪುನರ್‌ ಜಾರಿಗೊಳಿಸಲು ಆದೇಶಿಸಬೇಕೆಂದು ಕೋರಿದೆ. 

ಏಕಾಯ್ತು ಗಲಭೆ?: 1989ರ ಎಸ್ಸಿ/ಎಸ್ಟಿ (ಜಾತಿ ನಿಂದನೆ ನಿಗ್ರಹ) ಕಾಯ್ದೆಗೆ ಸಂಬಂಧಪಟ್ಟಂತೆ ಫೆ. 20ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ದಲಿತರಿಂದ ಜಾತಿನಿಂದನೆ ಆರೋಪ ಎದುರಿಸುವವರನ್ನು ತತ್‌ಕ್ಷಣವೇ ಬಂಧಿಸುವ ಕ್ರಮವನ್ನು ರದ್ದುಗೊಳಿಸಿತ್ತು. ಪೊಲೀಸರಿಗೆ ದೂರು ನೀಡಿದ ಅನಂತರ, ಒಂದು ವಾರದೊಳಗೆ ಪ್ರಕರಣದ ತನಿಖೆ ನಡೆಸಿದ ಅನಂತರವಷ್ಟೇ ಆರೋಪಿಗಳನ್ನು ಬಂಧಿಸಬೇಕೆಂದು ನ್ಯಾಯಪೀಠ ಆದೇಶಿಸಿತ್ತು. ಆದರೆ, ದಲಿತ ಸಂಘಟನೆಗಳು, ಕೆಲವು ರಾಜಕೀಯ ಪಕ್ಷಗಳು ಈ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿವೆ. ಇದು, ಮುಂದೆ ದಲಿತರ ಮೇಲಿನ ದಬ್ಟಾಳಿಕೆಗಳು ಹೆಚ್ಚಾಗುವಂತೆ ಮಾಡು ತ್ತದೆ ಎಂದಿದ್ದ ದಲಿತ ಸಂಘಟನೆಗಳು ತೀರ್ಪಿನ ವಿರುದ್ಧ “ಭಾರತ್‌ ಬಂದ್‌’ಗೆ ಕರೆ ನೀಡಿದ್ದವು.

ಹೋರಾಟಕ್ಕೆ ಹಿಂಸಾ ಸ್ವರೂಪ
ಬಂದ್‌ ಹಿನ್ನೆಲೆಯಲ್ಲಿ, ದಿಲ್ಲಿ, ರಾಜಸ್ಥಾನ, ಪಂಜಾಬ್‌, ಮಧ್ಯಪ್ರದೇಶ, ಗುಜರಾತ್‌, ಉತ್ತರಾಖಂಡ, ಹರಿಯಾಣ, ಚಂಡೀಗಢ, ಜಾರ್ಖಂಡ್‌, ಬಿಹಾರ, ಒಡಿಶಾ ಹಾಗೂ ಉತ್ತರ ಪ್ರದೇಶಗಳಲ್ಲಿ ದಲಿತ ಸಂಘ, ಸಂಸ್ಥೆಗಳಿಂದ ಭಾರೀ ಪ್ರತಿಭಟನೆ ನಡೆದವು. ಪ್ರತಿಭಟನಕಾರರು ರೈಲು ತಡೆ ನಡೆಸಿದರು. ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಲಾಯಿತು. ಕೆಲವು ಕಿಡಿಕೇಡಿಗಳು ವ್ಯಾಪಾರ ಮಳಿಗೆಗಳನ್ನು ಲೂಟಿ ಮಾಡಿದರು. ಕಲ್ಲು ತೂರಾಟವೂ ನಡೆಯಿತು. ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಮಧ್ಯ ಪ್ರದೇಶದ ಗ್ವಾಲಿಯರ್‌ ಹಾಗೂ ಭಿಂಡ್‌ಗಳಲ್ಲಿ ನಡೆದ ಘರ್ಷಣೆಗಳಲ್ಲಿ ತಲಾ ಇಬ್ಬರು ಮೃತಪಟ್ಟರೆ, ಮೊರೆನಾ ಜಿಲ್ಲೆಯಲ್ಲಿ  ಮತ್ತೂಬ್ಬ ಬಲಿಯಾದ. ರಾಜಸ್ಥಾನದ ಆಲ್ವಾರ್‌ , ಉತ್ತರ ಪ್ರದೇಶದ ಮುಜಫ‌ರ್‌ ನಗರದಲ್ಲಿ ತಲಾ ಒಬ್ಬರು ಮೃತಪಟ್ಟರು. ಪಂಜಾಬ್‌ನಲ್ಲಿ ನಡೆಯಬೇಕಿದ್ದ ಸಿಬಿಎಸ್‌ಇ ಪರೀಕ್ಷೆ ಹಿಂಸಾಚಾರದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದೆ. ಗಲಭೆ ಪೀಡಿತ ಪ್ರದೇಶಗಳಲ್ಲಿ ಇಂಟರ್ನೆಟ್‌ ಸಂಪರ್ಕ ಕಡಿತಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next