Advertisement

ಮೀನುಗಾರಿಕೆ ಋತು ಪೂರ್ಣಕ್ಕೆ 7 ದಿನ ಬಾಕಿ: ಕರಾವಳಿಯಲ್ಲಿ 6,809 ಕೋ.ರೂ. ಮೀನು ವಹಿವಾಟು

11:49 PM May 24, 2023 | Team Udayavani |

ಮಂಗಳೂರು: ಮೀನುಗಾರಿಕೆ ಋತು ಪೂರ್ಣಗೊಳಿಸಿ ಕರಾವಳಿಯ ಮೀನುಗಾರರು ಮೇ 31ರ ಒಳಗೆ ಮತ್ತೆ ದಡ ಸೇರುವ ತವಕದಲ್ಲಿದ್ದಾರೆ. ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆ ಪಶ್ಚಿಮ ಕರಾವಳಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ಜು. 31ರ ವರೆಗೆ ನಿಷೇಧವಿದೆ.

Advertisement

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಒಳಗೊಂಡು ಕರಾವಳಿಯಲ್ಲಿ ಈ ಬಾರಿ ಸುಮಾರು 6,809 ಕೋ.ರೂ. ಮೌಲ್ಯದ 5,45,618.05 ಮೆ.ಟನ್‌ ಮೀನುಗಾರಿಕೆ ನಡೆದಿದೆ ಎಂದು ಮೀನುಗಾರಿಕೆ ಇಲಾಖೆ ಅಂದಾಜಿಸಿದೆ. ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಮೀನುಗಾರಿಕೆ ಕ್ಷೇತ್ರದ ವ್ಯವಹಾರ ದುಪ್ಪಟ್ಟಾಗಿದೆ.

2022-23ರಲ್ಲಿ ದ.ಕ. ಜಿಲ್ಲೆಯಲ್ಲಿ 4,154 ಕೋ.ರೂ ಮೌಲ್ಯದ 3,33,537.05 ಮೆ.ಟನ್‌ ಮೀನು ಲಭ್ಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಧಿಕ. 2021-22ರಲ್ಲಿ 3801 ಕೋ.ರೂ. ಮೌಲ್ಯದ 2,91,812.00 ಮೆ.ಟನ್‌, 2020-21ರಲ್ಲಿ 1924 ಕೋ.ರೂ ಮೌಲ್ಯದ 1,39,714.04 ಮೆ.ಟನ್‌ ಮೀನುಗಾರಿಕೆ ನಡೆದಿದೆ.

ಉಡುಪಿ ಜಿಲ್ಲೆಯಲ್ಲಿ 2022-23ರಲ್ಲಿ 2655 ಕೋ.ರೂ. ಮೌಲ್ಯದ 2,12,081.00 ಮೆ.ಟನ್‌ ಮೀನು ಲಭ್ಯವಾಗಿದೆ. ಕಳೆದ ವರ್ಷ (2021-22) 1850 ಕೋ.ರೂ. ಮೌಲ್ಯದ 1,80,035.00 ಮೆ.ಟನ್‌ ಹಾಗೂ 2020-21ರಲ್ಲಿ 1109 ಕೋ.ರೂ ಮೌಲ್ಯದ 1,04,453.00 ಮೆ.ಟನ್‌ ಮೀನುಗಾರಿಕೆ ನಡೆದಿತ್ತು.

ಉತ್ತಮ ವ್ಯವಹಾರದ ಜತೆಗೆ ಹತ್ತಾರು ಸಮಸ್ಯೆಗಳಿಂದ ನಲುಗುತ್ತಿರುವ ಮೀನುಗಾರಿಕೆಯ ಶೇ. 60ಕ್ಕೂ ಅಧಿಕ ಬೋಟ್‌ಗಳು ಮೀನು ಲಭ್ಯವಿಲ್ಲದೆ ಈಗಾಗಲೇ ದಡ ಸೇರಿವೆ. ಉಳಿದ ಬೋಟ್‌ಗಳು 7 ದಿನದೊಳಗೆ ದಡ ಸೇರಲಿದ್ದು, ಮುಂದಿನ 2 ತಿಂಗಳು ರಜೆ ಇರಲಿದೆ.

Advertisement

ಬೋಟು ನಿಲ್ಲಲು ಜಾಗವೇ ಇಲ್ಲ !
ಮಂಗಳೂರಿನಲ್ಲಿ ಮೋಟರೀಕೃತ, ಯಾಂತ್ರೀಕೃತ ದೋಣಿ ಸೇರಿದಂತೆ 2 ಸಾವಿರಕ್ಕೂ ಅಧಿಕ ದೋಣಿಗಳಿವೆ. ಈಗ ಇರುವ ಮಂಗಳೂರು ದಕ್ಕೆ 600 ಮೀಟರ್‌ ಉದ್ದವಿದೆ. ಇದರಲ್ಲಿ ಒಂದು ಸಾಲಿನಲ್ಲಿ 350 ಬೋಟುಗಳಿಗೆ ನಿಲ್ಲಲು ಮಾತ್ರ ಅವಕಾಶ. ಉಳಿದಂತೆ ಎಲ್ಲ ಬೋಟುಗಳು ಇತರ ಪ್ರದೇಶಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು. ಒಂದರ ಹಿಂದೆ ಇನ್ನೊಂದರಂತೆ
7 ಸಾಲುಗಳಲ್ಲಿ ಬೋಟುಗಳು ನಿಲ್ಲುವ ಪರಿಸ್ಥಿತಿ. ಮರದ ಹಾಗೂ ಸ್ಟೀಲ್‌ಬೋಟುಗಳು ಇರುವುದರಿಂದ ಬಹಳಷ್ಟು ಬಾರಿ ಒಂದಕ್ಕೊಂದು ತಾಗಿ ಹಾನಿ ಸಂಭವಿಸುತ್ತಿವೆ. 7
ಸಾಲುಗಳಲ್ಲಿ ನಿಂತ ಬಳಿಕವೂ ಬಹಳಷ್ಟು ಬೋಟುಗಳು ಸ್ಥಳವಾಕಾಶವನ್ನು ಹುಡುಕಿಕೊಂಡು ಇತರ ಕಡೆಗೆ ಸಾಗಬೇಕಾಗಿದೆ.

ಇನ್ನು ನಾಡದೋಣಿ ಮೀನುಗಾರಿಕೆ
ಯಾಂತ್ರೀಕೃತ ಮೀನುಗಾರಿಕೆಗೆ ರಜೆ ಸಂದರ್ಭ ನಾಡದೋಣಿಗಳು ಮೀನು ಬೇಟೆಗೆ ಇಳಿಯುತ್ತವೆ. 10 ಅಶ್ವಶಕ್ತಿಯ ಎಂಜಿನ್‌ ಅಳವಡಿಸಿದ ದೋಣಿಗಳಲ್ಲಿ ಸಮುದ್ರದ ಬದಿ ಹಾಗೂ ನದಿಗಳಲ್ಲಿ ಜೂನ್‌ 1ರಿಂದ ಮೀನುಗಾರಿಕೆ ನಡೆಸುತ್ತಾರೆ.

ಸಮುದ್ರ ಮಾಲಿನ್ಯ: ಮರೆಯಾಗುತ್ತಿದೆ ಮತ್ಸ್ಯ ವೈವಿಧ್ಯ
ಮಾರ್ಚ್‌, ಎಪ್ರಿಲ್‌, ಮೇಯಲ್ಲಿ ಸಾಮಾನ್ಯವಾಗಿ ಕೊಂಚ ಮಳೆ ಬಂದು ಕಡಲಿನ ನೀರು ತಂಪಾಗಿ ಮೀನು ಸಿಗುತ್ತಿತ್ತು. ಆದರೆ ಈ ವರ್ಷ 3 ತಿಂಗಳಲ್ಲಿ ಮಳೆ ಇಲ್ಲದೆ ವಿಪರೀತ ಸೆಖೆಯಿಂದ ಬಹುತೇಕ ಮೀನುಗಳು ಕಾಣಲಿಲ್ಲ. ಬಂಗುಡೆ, ಎಟ್ಟಿ ಕೊರತೆ ಉಂಟಾಗಿತ್ತು. “ರಾಣಿ ಮೀನು’ ಲಭ್ಯವಿದ್ದರೂ ವಿದೇಶದಲ್ಲಿ ಮಾರುಕಟ್ಟೆ ಇಲ್ಲದೆ ಕರಾವಳಿ ಮೀನುಗಾರರಿಗೆ ಸಮಸ್ಯೆ ಉಂಟಾಗಿದೆ. ಬೋಟು ನಿರ್ವಹಣೆಗೆ ದುಬಾರಿ ವೆಚ್ಚವಾಗುತ್ತಿದೆ. ಡೀಸೆಲ್‌ಗಾಗಿ ಲಕ್ಷಾಂತರ ರೂ. ನೀಡಬೇಕು. ಬೋಟ್‌ ನಿರ್ವಹಣೆ, ಪಾಲುದಾರಿಕೆ ಕಮಿಶನ್‌ ಸಹಿತ ವಿವಿಧ ಕಾರಣದಿಂದ ದುಬಾರಿ ಹಣ ಖರ್ಚು ಮಾಡಬೇಕಾಗಿದೆ. ಸಮುದ್ರ ಈಗಾಗಲೇ ಮಲಿನವಾಗಿ ಮೀನುಗಳು ಕಾಣೆಯಾಗುತ್ತಿವೆ. ಹಿಂದೆ ಸಿಗುತ್ತಿದ್ದ ಬಗೆ ಬಗೆಯ ಮೀನುಗಳೇ ಈಗ ಸಿಗುತ್ತಿಲ್ಲ ಎನ್ನುತ್ತಾರೆ ಕರ್ನಾಟಕ ಪರ್ಸಿನ್‌ ಮೀನುಗಾರರ ಸಂಘದ ಅಧ್ಯಕ್ಷ ಶಶಿಕುಮಾರ್‌ ಬೆಂಗ್ರೆ.

ಜೂನ್‌ 1ರಿಂದ ಮೀನುಗಾರಿಕೆ ನಿಷೇಧ
ಮೀನುಗಳು ಸಂತಾನೋತ್ಪತ್ತಿ ಮಾಡುವ ಅವಧಿ ಮಳೆಗಾಲ. ಈ ವೇಳೆ ಯಾಂತ್ರಿಕ ದೋಣಿಗಳು ನೀರಿಗೆ ಇಳಿದರೆ ಅವುಗಳ ಸಂತಾನೋತ್ಪತ್ತಿಗೆ ತೊಂದರೆಯಾಗುತ್ತದೆ. ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಜೂ. 1ರಿಂದ ಮೀನುಗಾರಿಕೆ ಜು. 31ರ ವರೆಗೆ ಒಟ್ಟು 61 ದಿನಗಳ ನಿಷೇಧವಿರಲಿದೆ. ಈ ಬಾರಿ ಉತ್ತಮ ಮೀನುಗಾರಿಕೆ ಎರಡೂ ಜಿಲ್ಲೆಯಲ್ಲಿ ನಡೆದಿದೆ ಎಂದು ಮೀನುಗಾರಿಕೆ ಇಲಾಖೆಯ ದ.ಕ. ಹಾಗೂ ಉಡುಪಿ ಜಿಲ್ಲೆಗಳ ಜಂಟಿ ನಿರ್ದೇಶಕರಾದ ಹರೀಶ್‌ ಕುಮಾರ್‌ ಮತ್ತು ವಿವೇಕ್‌ ತಿಳಿಸಿದ್ದಾರೆ.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next