ಗುಂಡ್ಲುಪೇಟೆ(ಚಾಮರಾಜನಗರ): ಯಡನವಹಳ್ಳಿ ಬಳಿಕ ಗರಗನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಏಳು ವಿದ್ಯಾರ್ಥಿಗಳು ಕಲುಷಿತ ಆಹಾರ ಸೇವಿಸಿ ಅಸ್ವಸ್ಥತರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜು.27ರ ಗುರುವಾರ ಬೆಳಗ್ಗೆ ನಡೆದಿದೆ.
ಯಡನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ಯಾಂಪಸ್ ನಲ್ಲಿರುವ ಗರಗನಹಳ್ಳಿ ವಸತಿ ಶಾಲೆಯಲ್ಲಿ ಗುರುವಾರ ಬೆಳಗಿನ ತಿಂಡಿ ಟೋಮ್ಯಾಟೋ ಬಾತ್ ಮಕ್ಕಳಿಗೆ ನೀಡಿದ್ದು, ತಿಂಡಿ ಹೆಚ್ಚು ಖಾರವಾದ ಹಿನ್ನೆಲೆ ಕೆಲ ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು, ಉರಿ, ವಾಂತಿ ಕಾಣಿಸಿಕೊಂಡಿದೆ.
ವರ್ಣಿತ(13), ಹರ್ಷಿತಾ(13), ಪ್ರಿಯ(13), ರಚನಾ(15), ಸಂಜನಾ(15), ಸಂಗೀತ (13), ಪ್ರಜ್ವಲ್(15) ಎಂಬ ಏಳು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಕೂಡಲೇ ಸಮೀಪದ ಹೊರೆಯಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದರಲ್ಲಿ ಪ್ರಜ್ವಲ್ ಎಂಬ ವಿದ್ಯಾರ್ಥಿಗೆ ಹೊಟ್ಟೆ ನೋವು ಹೆಚ್ಚು ಕಾಣಿಸಿಕೊಂಡ ಹಿನ್ನಲೆ ಆತನನ್ನು ಬೇಗೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಹೊರೆಯಾಲ ಆಸ್ಪತ್ರೆ ವೈದ್ಯ ಡಾ.ದೀಪಕ್ ಅಸ್ವಸ್ಥ ವಿದ್ಯಾರ್ಥಿಗಳಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ವಸತಿ ಶಾಲೆ ಪ್ರಾಂಶುಪಾಲ ಲೋಕೇಶ್ ಹಾಗೂ ಬೇಗೂರು ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಸದ್ಯ ಘಟನೆಯಲ್ಲಿ ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ ವಾರ ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಚಿಕನ್ ಊಟ ಸೇವಿಸಿ ಅಸ್ವಸ್ಥರಾಗಿದ್ದ ಘಟನೆ ಮಾಸುವ ಮುನ್ನವೇ ಇದೀಗ ಅದೇ ಕ್ಯಾಂಪಸ್ ನಲ್ಲಿರುವ ಗರಗನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಬೆಳಗಿನ ತಿಂಡಿ ಸೇವಿಸಿ ಅಸ್ವಸ್ಥರಾಗಿರುವುದು ವಸತಿ ಶಾಲೆಯ ಆಡಳಿತ ವೈಖರಿ ಮತ್ತು ಅನೈರ್ಮಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಘಟನೆಗೆ ವಿದ್ಯಾರ್ಥಿ ಪೋಷಕರು ಸಹ ಆಕ್ರೋಶ ಹೊರ ಹಾಕಿದ್ದಾರೆ.