ಬೆಂಗಳೂರು: ನಡು ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಏಳು ಮಂದಿ ಯುವಕರನ್ನು ಪೂರ್ವ ವಲಯದ ಸಂಚಾರ ವಿಭಾಗದ ಮೂರು ಸಂಚಾರ ಠಾಣೆ ಪೊಲೀಸರು ಬಂಧಿಸಿ, ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಕೊತ್ತನೂರು, ನಾರಾಯಣಪುರ ಭಾಗದಲ್ಲಿ ಬೈಕ್ ವೀಲಿಂಗ್ ಮಾಡುತ್ತಿದ್ದ ಲಿಂಗರಾಜಪುರದ ಕರಿಯಣ್ಣ ಪಾಳ್ಯ ನಿವಾಸಿ ಆಗಸ್ಟಿನ್(23) ಎಂಬಾತನನ್ನು ಬಾಣಸವಾಡಿ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಆಗಸ್ಟಿನ್ ಬೈಕ್ ವೀಲಿಂಗ್ ಮಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣ ವಾಟ್ಸ್‌ಆ್ಯಪ್‌ನಲ್ಲಿ ಹರಿಬಿಟ್ಟಿದ್ದ. ಈ ಮಾಹಿತಿ ಆಧಾರದ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ನಾರಾಯಣಪುರದಲ್ಲಿ ಬೈಕ್ ವೀಲಿಂಗ್ ಮಾಡುವಾಗ ಬಂಧಿಸಿದ್ದಾರೆ. ಆರೋಪಿಯಿಂದ ಬೈಕ್ ವಶಕ್ಕೆ ಪಡೆಯಲಾಗಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡುತ್ತಿದ್ದ ಒಬ್ಬ ಅಪ್ರಾಪ್ತ ಸೇರಿ ಇಬ್ಬರನ್ನು ಜೀವನ್‌ಭೀಮಾನಗರ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೀವನ್‌ಭೀಮಾನಗರ ನಿವಾಸಿಗಳಾದ ಎಫ್.ಪಾಷಾ(17) ಮತ್ತು ವೆಂಕಟೇಶ್ (21) ಬಂಧಿತರು. ಅಪ್ರಾಪ್ತ ಯುವಕನಿಗೆ ದ್ವಿಚಕ್ರ ವಾಹನ ಕೊಟ್ಟ ಆರೋಪದ ಮೇಲೆ ಪಾಷಾ ಪೋಷಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಮತ್ತೂಂದು ಪ್ರಕರಣದಲ್ಲಿ ವೀಲಿಂಗ್ ಮಾಡುತ್ತಿದ್ದ ನಾಲ್ವರು ಯುವಕರನ್ನು ಪುಲಕೇಶಿನಗರ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಸಂತನಗರ ನಿವಾಸಿ ವಿಘ್ನೇಶ್ (21), ಎಚ್‌ಬಿಆರ್ ಲೇಔಟ್‌ನ ಎಸ್.ಅಹ್ಮದ್(24), ಜೆ.ಸಿ.ನಗರ ನಿವಾಸಿ ಮಿಸೈಯ (19) ಮತ್ತು ಆರ್.ಟಿ.ನಗರದ ವಿನೋದ್ ರಾವ್(21) ಬಂಧಿತರು.
ಆರೋಪಿಗಳು ಸೆಂಟ್‌ಜಾನ್ ಚರ್ಚ್ ರಸ್ತೆ ಮತ್ತು ಪುಲಕೇಶಿನಗರ ಮುಖ್ಯರಸ್ತೆಗಳಲ್ಲಿ ಬೈಕ್ ವೀಲಿಂಗ್ ಮಾಡುತ್ತಿದ್ದರು. ಈ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ನಾಲ್ಕು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.