ಚಿಕ್ಕೋಡಿ: ನೆರೆಯಿಂದ ಹಾನಿಗೊಳಗಾದ ತಾಲೂಕಿನ ಯಡೂರ, ಮಾಂಜರಿ ಗ್ರಾಮದ ಕುಡಿಯುವ ನೀರಿನ ಯೋಜನೆಗೆ ರಾಜ್ಯ ಸರ್ಕಾರ 7.70 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ತಿಳಿಸಿದ್ದಾರೆ.
ಬುಧವಾರ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಮಾಂಜರಿ ಹಾಗೂ ಮಾಂಜರಿವಾಡಿ ಮತ್ತು ಯಡೂರ ಹಾಗೂ ಇತರ ಎರಡು ಗ್ರಾಮಗಳಾದ ಯಡುರುವಾಡಿ, ಹೊಸಯಡೂರ ಗ್ರಾಮಗಳಿಗೆ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ಅನುದಾನ ಮಂಜೂರಾಗಿದೆ ಎಂದರು.
ಈ ಹಿಂದೆ ಸನ್ 2003-04ರಲ್ಲಿ ಈ ಯೋಜನೆ ಮಂಜೂರಾಗಿತ್ತು. ಆದರೆ ಕಳೆದ ಅಗಸ್ಟ್ ತಿಂಗಳಲ್ಲಿ ಭಾರಿ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿ ನದಿ ಪಾತ್ರದಲ್ಲಿ ಈ ಎರಡು ಗ್ರಾಮ ಪಂಚಾಯತಿಗಳಲ್ಲಿಯ ಕುಡಿಯುವ ನೀರಿನ ಯೋಜನೆಯ ಪಂಪ್‌ಸೆಟ್‌ಗಳು, ಪೈಪ್‌ಲೈನ್‌ಗಳು ಹಾಗೂ ವಿದ್ಯುತ್ ಉಪಕರಣಗಳು ಪೂರ್ತಿ ಹಾಳಾಗಿದ್ದವು. ಇದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಕರ್ಯದಿಂದ ಭಾರಿ ತೊಂದರೆಯಾಗಿತ್ತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವ ಕೆ.ಎಸ್. ಈಶ್ವರಪ್ಪನವರು ನೆರೆ ಹಾವಳಿ ವೀಕ್ಷಣೆಗೆ ಈ ಗ್ರಾಮಗಳಿಗೆ ಭೇಟಿ ನೀಡಿದಾಗ ಅವರಿಗೆ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಲಾಗಿತ್ತು. ಸಚಿವರು ಮನವಿಗೆ ಸ್ಪಂದಿ ಸಿ ಹಾಗೂ ಅವರು ಖುದ್ದಾಗಿ ಪರಿಶೀಲಿಸಿದ್ದರು. ಸಚಿವರು ಯೋಜನೆಗೆ ಸರಕಾರದಿಂದ ತ್ವರಿತವಾಗಿ ಮಂಜೂರಾತಿ ನೀಡಿವದಾಗಿ ವಾಗ್ಧಾನ ನೀಡಿದ್ದರು. ಅದರಂತೆ ಮಾಂಜರಿ ಮತ್ತು ಮಾಂಜರಿವಾಡಿ ಗ್ರಾಮಗಳಿಗೆ 4 ಕೋಟಿ ಹಾಗೂ ಯಡೂರ ಮತ್ತು ಇತರೆ ಎರಡು(ಯಡುರುವಾಡಿ, ಹೊಸಯಡುರ) ಗ್ರಾಮಗಳಿಗೆ 3.70 ಕೋಟಿ ಅನುದಾನಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಹೊಸ ಕುಡಿಯುವ ನೀರಿನ ಯೋಜನಗೆ ಅನುಮೋದನೆ ಸಿಕ್ಕಿದೆ ಎಂದರು.