ಜಮಖಂಡಿ: ನೆರೆ ನೆರವು ಸಂದಾಯ ಯೋಜನೆ ಅಡಿಯಲ್ಲಿ ಪ್ರವಾಹದಿಂದ ತೊಂದರೆ ಅನುಭವಿಸಿದ 9744 ಸಂತ್ರಸ್ತ ಕುಟುಂಬಗಳಿಗೆ ತುರ್ತು ಪರಿಹಾರವಾಗಿ 10 ಸಾವಿರ ರೂ.ಗಳಂತೆ ಈಗಾಗಲೇ 7472 ಕುಟುಂಬಗಳಿಗೆ 7.4 ಕೋಟಿ ರೂ.ಗಳನ್ನು ಗುರುವಾರ ಆರ್‌ಟಿಜಿಎಸ್ ಮೂಲಕ ಖಾತೆಗೆ ಜಮಾ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.
ಚಿಕ್ಕಪಡಸಲಗಿ ಸೇತುವೆಗೆ ಮತ್ತು ಸನಾಳ ಪಂಪ್‌ಹೌಸ್‌ಗೆ ಭೇಟಿ ನೀಡಿ, ನೆರೆ ಸಂತ್ರಸ್ತರ ಬಿದ್ದಿರುವ ಮನೆಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೆರಡು ದಿನಗಳಲ್ಲಿ ಉಳಿದ 2272 ಕುಟುಂಬಗಳಿಗೆ ಜಮಾ ಮಾಡಲಾಗುತ್ತದೆ. ಎಲ್ಲ ಸಂತ್ರಸ್ತರು ತಮ್ಮ ಬ್ಯಾಂಕ್ ಖಾತೆಗಳ ಬಗ್ಗೆ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಪ್ರವಾಹದಿಂದ ಸಂತ್ರಸ್ತರಾದವರಿಗೆ ಮನೆ ಕಳೆದುಕೊಂಡವರಿಗೆ, ಹಾನಿಗೊಳಗಾದವರನ್ನು ಗುರುತಿಸಿ ಪರಿಹಾರ ನೀಡಲಾಗುತ್ತಿದೆ ಎಂದುರು.
ಜಿಲ್ಲೆಯಲ್ಲಿ ಅಂದಾಜು 35 ಸಾವಿರಕ್ಕೂ ಹೆಚ್ಚು ಸಂತ್ರಸ್ತರನ್ನು ಗುರುತಿಸಲಾಗಿದ್ದು, ಅವರಲ್ಲಿ 21611 ಫಲಾನುಭವಿಗಳಿಗೆ 21.61 ಕೋಟಿ ಪರಿಹಾರ ನೀಡಲಾಗಿದೆ. ಪರಿಹಾರ ವಿತರಣೆ ಕಾರ್ಯದಲ್ಲಿ ಜಿಲ್ಲೆಯಲ್ಲಿ ಪಾರದರ್ಶಕವಾಗಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂತ್ರಸ್ತರು ಶಾಲಾ ಪರಿಹಾರ ಕೇಂದ್ರದಲ್ಲಿ ವಾಸವಾಗಿದ್ದರೆ ಅವರನ್ನು ಬೇರೆ ಸರ್ಕಾರಿ ಕಟ್ಟಡಗಳಿಗೆ ಸ್ಥಳಾಂತರಿಸುವ ಮೂಲಕ ಸೋಮವಾರದಿಂದ ಎಲ್ಲ ಶಾಲೆಗಳನ್ನು ಪ್ರಾರಂಭ ಮಾಡಲಾಗುತ್ತದೆ. ಈಗಾಗಲೇ ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ 2009ರಲ್ಲಿ ನೆರೆ ಸಂತ್ರಸ್ತರು ಮನೆ ಹಾಗೂ ಜಮೀನುಗಳಿಗೆ ಪರಿಹಾರ ಪಡೆದಿದ್ದರೆ ಅಂತಹ ಕುಟುಂಬ, ವ್ಯಕ್ತಿಗಳಿಗೆ ಯಾವುದೇ ಪರಿಹಾರ ನೀಡಲಾಗುತ್ತಿಲ್ಲ ಎಂದರು.
ಪ್ರವಾಹ ಜಿಲ್ಲಾ ಉಸ್ತುವಾರಿ ಅಧಿಕಾರಿ ತುಷಾರ ಗಿರಿಧರ ಮಾತನಾಡಿ, ಸೇತುವೆ ದುರಸ್ತಿ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಸೂಚಿಸಲಾಗಿದೆ. ಸೇತುವೆ ಬಿದ್ದ ಪರಿಣಾಮ ಸಾರ್ವಜನಿಕರಿಗೆ ತೊಂದರೆಯಾಗಿದೆ. ಸೇತುವೆ ನಿರ್ಮಾಣವರೆಗೆ ಪರ್ಯಾಯ ಮಾರ್ಗ ಅನುಸರಿಸಬೇಕು. ಪರಿಹಾರ ದುರುಪಯೋಗವಾಗಲು ಅವಕಾಶ ನೀಡದೆ ಅಧಿಕಾರಿಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಕಳೆದ ನಾಲ್ಕು ದಿನಗಳಿಂದ ಸಂತ್ರಸ್ತರ ಆಧಾರ ಕಾರ್ಡ್, ಬ್ಯಾಂಕ್ ಖಾತೆಗಳ ಮಾಹಿತಿ ಸಂಗ್ರಹಿಸಲಾಗಿದೆ ಎಂದರು.
ಸಂಪೂರ್ಣ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರು ತಾವೇ ತಮ್ಮ ಅನುಕೂಲದಂತೆ ಮನೆ ನಿರ್ಮಿಸಿಕೊಳ್ಳಬಹುದು. ಶೇ.0ದಿಂದ 15ರಷ್ಟು ಬಿದ್ದ ಮನೆಗಳಿಗೆ ಯಾವುದೇ ಪರಿಹಾರವಿಲ್ಲ. ಶೇ. 15 ರಿಂದ ಶೇ.25 ರಷ್ಟು ಬಿದ್ದ ಮನೆಗಳಿಗೆ 25 ಸಾವಿರ, ಶೇ. 25ರಿಂದ 75 ಬಿದ್ದ ಮನೆಗೆ 1 ಲಕ್ಷ, ಸಂಪೂರ್ಣ ಬಿದ್ದ ಮನೆಗಳಿಗೆ 5 ಲಕ್ಷ ಪರಿಹಾರ ನೀಡಲಾಗುವುದು. ಇದಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಪಿಡಿಒ ಹಾಗೂ ನಗರಪ್ರದೇಶದಲ್ಲಿ ನಗರಸಭೆ ಮುಖ್ಯಾಧಿಕಾರಿ ಉಸ್ತುವಾರಿ ವಹಿಸಲಾಗಿದೆ ಎಂದರು.
ಕನಿಷ್ಠ 10 ತಿಂಗಳವರೆಗೆ 5 ಸಾವಿರ ಬಾಡಿಗೆ ಪ್ರವಾಹದಿಂದ ಸಂಪೂರ್ಣ ಹಾನಿಗೊಳಗಾಗಿರುವ ಮನೆಗಳ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿ ಕೊಡಲಾಗುತ್ತಿದೆ. ಲೋಕೋಪಯೋಗಿ ಹಾಗೂ ನಿರ್ಮಿತಿ ಕೇಂದ್ರ ದಿಂದ ತಾತ್ಕಾಲಿಕ ಶೆಡ್ ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಮನೆಗಳು ಸಂಪೂರ್ಣ ಹಾಳಾಗಿರುವ ಹಾಗೂ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸಿಸುವ ಸಂತ್ರಸ್ತರಿಗೆ ಗರಿಷ್ಠ 10 ತಿಂಗಳ ಅವಧಿಗೆ ಸೀಮಿತಗೊಳಿಸಿ, ಮಾಸಿಕ 5 ಸಾವಿರ ಬಾಡಿಗೆ ನೀಡಲಾಗುತ್ತದೆ. ಹಾನಿಗೀಡಾಗಿರುವ ಮನೆಗಳ ಸಮೀಕ್ಷೆ ಕಾರ್ಯ ನಡೆಸಲು ನುರಿತ ಇಂಜಿನಿಯರ್‌ಗಳನ್ನೊಳಗೊಂಡ 12 ತಂಡ ನೇಮಿಸಲಾಗಿದ್ದು, ಗ್ರಾಮವಾರು ಮನೆಗಳ ಹಾನಿಯ ಸಮಿಕ್ಷೆ ಆರಂಭಿಸಿದ್ದಾರೆ.
ರಾಜೀವ ಗಾಂಧಿ ಹೌಸಿಂಗ್ ನಿಗಮದ ಜೊತೆ ಚರ್ಚಿಸಲಾಗಿದ್ದು, ಮನೆ ಹಾನಿ ವರದಿಗಳನ್ನು ಪ್ರತಿದಿನ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಅನಧಿಕೃತವಾಗಿ ಕೃಷಿ ಭೂಮಿಗಳಲ್ಲಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಹ ಸಮೀಕ್ಷೆಯಲ್ಲಿ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಪ್ರಶಾಂತ ಚನಗೊಂಡ, ತಾಪಂ ಇಒ ಅಶೋಕ ತೇಲಿ ಇದ್ದರು.