ಉಡುಪಿ: ಯೋಗರತ್ನ ತನುಶ್ರೀ ಪಿತ್ರೋಡಿ ಅವರು ಒಂದು ನಿಮಿಷದಲ್ಲಿ 55 ಬಾರಿ “ಬ್ಯಾಕ್ ವರ್ಡ್ ಬಾಡಿ ಸ್ಕಿಪ್’ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಉಡುಪಿಯ ಸೈಂಟ್ ಸಿಸಿಲೀಸ್ ಸಮೂಹ ವಿದ್ಯಾ ಸಂಸ್ಥೆಯ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 6ನೇ ವಿಶ್ವದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ.
ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನ ಭಾರತದ ಪ್ರತಿನಿಧಿ ಮನೀಷ್ ವೈಷ್ಣವ್ ಅವರು ಅಧಿಕೃತವಾಗಿ ಘೋಷಣೆಮಾಡಿ ಪ್ರಮಾಣ ಪತ್ರ ಹಸ್ತಾಂತರಿಸಿ ಮಾತನಾಡಿದ ಅವರು, ಒಂದು ಮಗುವಿನ ಯಶಸ್ಸಿನ ಹಿಂದೆ ಪೋಷಕರ ಪಾತ್ರ ಮಹತ್ವದಾಗಿದೆ. ಎಲ್ಲ ಮಕ್ಕಳಲ್ಲಿ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪೋಷಿಸಿದಾಗ ಮಾತ್ರ ತನುಶ್ರೀಯಂತೆ ಹೆಚ್ಚಿನ ಮಕ್ಕಳು ವಿಶ್ವದಾಖಲೆ ಮಾಡಲು ಸಾಧ್ಯ ಎಂದರು.
Related Articles
ಯೋಗರತ್ನ ತನುಶ್ರೀ ಪಿತ್ರೋಡಿ ಮಾತನಾಡಿ, ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಬ್ಯಾಕ್ ವರ್ಡ್ ಬಾಡಿ ಸ್ಕಿಪ್ ಮಾಡಲು ಪ್ರಯತ್ನಿಸಿದೆ. ಪ್ರಾರಂಭದಲ್ಲಿ ಒಂದು ನಿಮಿಷದಲ್ಲಿ 20 ಬಾರಿ ಮಾಡುತ್ತಿದೆ. ಅನಂತರ 40ಕ್ಕೆ ಮಾಡಲು ಸಾಧ್ಯವಾಗಿದೆ. ಪೋಷಕರಿಗೆ ಈ ಬಗ್ಗೆ ತಿಳಿಸಿದ್ದು, ಅವರ ಪ್ರೋತ್ಸಾಹದಿಂದ ದಾಖಲೆ ನಿರ್ಮಿಸಲು ಸಾಧ್ಯವಾಗಿದೆ ಎಂದರು.
ಇದನ್ನೂ ಓದಿ:ಮೀಸಲಾತಿ ವಿಚಾರದಲ್ಲಿ ವಾಸ್ತವ ಅರಿತು ಸರ್ಕಾರ ತೀರ್ಮಾನ ಕೈಗೊಳ್ಳಬೇಕು: ಕುಮಾರಸ್ವಾಮಿ
ಪ್ರಸ್ತುತ ಸೈಂಟ್ ಸಿಸಿಲೀಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. 2017ರ ನವೆಂಬರ್‌ನಲ್ಲಿ ನಿರಾಲಾಂಭ ಪೂರ್ಣ ಚಕ್ರಾಸನ ಎಂಬ ಕಠಿನ ಯೋಗಾಸನವನ್ನು 1 ನಿಮಿಷದಲ್ಲಿ 19 ಬಾರಿ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಎ.7, 2018ರಲ್ಲಿ “ಮೋಸ್ಟ್ ಫುಲ್ ಬಾಡಿ ರೆವಲ್ಯೂಷನ್ ಮೇನ್ಟೈನಿಂಗ್ ಎ ಚೆಸ್ಟ್ ಸ್ಟಾಂಡ್ ಪೊಸಿಷನ್’ ಭಂಗಿಯನ್ನು 1 ನಿಮಿಷದಲ್ಲಿ 42 ಬಾರಿ ಮಾಡಿ ಗಿನ್ನಿಸ್ ವಿಶ್ವ ದಾಖಲೆ ಮಾಡಿದ್ದಾಳೆ. ನ.14, 2018ರಲ್ಲಿ ಇಟಲಿಯ ರೋಮ್‌ನಲ್ಲಿ ಗಿನ್ನಿಸ್ ದಾಖಲೆಯ ಸಾಧಕರೊಂದಿಗೆ ಸೇರಿ ಯೋಗ ಪ್ರದರ್ಶನ ನೀಡಿದ್ದಾಳೆ. ಫೆ.23, 2019ರಲ್ಲಿ ಮೋಸ್ಟ್ ನಂಬರ್ ಆಫ್ ರೋಲ್ಸ್ ಇನ್ ಒನ್ ಮಿನಿಟ್ ಇನ್ ಧನುರಾಸನ ಭಂಗಿ’ಯಲ್ಲಿ ಹಾಗೂ ಫೆ.22, 2020ರಲ್ಲಿ ಚಕ್ರಾಸನ ರೇಸ್ ವಿಭಾಗದಲ್ಲಿ 100 ಮೀ. ಅಂತರವನ್ನು 1 ನಿಮಿಷ 14 ಸೆಕೆಂಡ್‌ನಲ್ಲಿ ಕ್ರಮಿಸಿ ವಿಶ್ವದಾಖಲೆ ಮಾಡಿದ್ದಾಳೆ.
ತಂದೆ ಉದಯ ಕುಮಾರ್, ತಾಯಿ ಸಂಧ್ಯಾ, ಬಡಗುಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ್ ಶೆಟ್ಟಿ ಇಂದ್ರಾಳಿ, ಉಡುಪಿ ಮತ್ತು ದ.ಕ. ಜಿಲ್ಲೆ ಮೀನುಮಾರಾಟ ಒಕ್ಕೂಟದ ಅಧ್ಯಕ್ಷ ಯಶಪಾಲ್ ಸುವರ್ಣ, ಶ್ಯಾಮಿಲಿ ಕಾಲೇಜಿನ ಪ್ರಾಂಶುಪಾಲ ರಾಜಮೋಹನ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ನಾಗರಾಜ್, ನೃತ್ಯ ಗುರು ರಾಮಕೃಷ್ಣ ಕೊಡಂಚ, ಮಹಮ್ಮದ್ ಮೌಲಾ, ಗುರುಪ್ರಸಾದ್, ವಿಭಾ ಸಿಸ್ಟರ್, ಕೆ. ನರೇಂದ್ರ ಕಾಮತ್, ಪ್ರವೀಣ್, ಮಲೇಶ್ ಕುಮಾರ್, ಜಿತೇಶ್ ಶೆಟ್ಟಿ, ಲೋಕೇಶ್, ರೋಶನ್ ಶೆಟ್ಟಿ, ಲಯನ್ಸ್ ನಿರುಪಮ ಪ್ರಸಾದ್ ಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.