ಬೆಂಗಳೂರು: ಸುಮಾರು 5ಲಕ್ಷಕ್ಕೂ ಹೆಚ್ಚು ರಾಜ್ಯ ಸರ್ಕಾರಿ ನೌಕರರ ವೇತನವನ್ನು ಶೇ.30ರಷ್ಟು ಹೆಚ್ಚಿಸಬೇಕೆಂದು 6ನೇ ವೇತನ ಆಯೋಗದ ವರದಿಯಲ್ಲಿ ಶಿಫಾರಸು ಮಾಡಿದ್ದು, ಬುಧವಾರ ಸಿಎಂ ಸಿದ್ದರಾಮಯ್ಯನವರಿಗೆ ವರದಿ ಸಲ್ಲಿಸಲಾಗಿದೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ 6ನೇ ವೇತನ ಆಯೋಗದ ಅಧ್ಯಕ್ಷರಾದ ಸಿಎಸ್ ರತ್ನಪ್ರಭಾ, ಶ್ರೀನಿವಾಸ್ ಮೂರ್ತಿ ಹಾಗೂ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವರದಿಯನ್ನು ಸಲ್ಲಿಸಿದರು.
5.20 ಲಕ್ಷ ಸರ್ಕಾರಿ ನೌಕರರ ವೇತನ ಶೇ.30ರಷ್ಟು ಹೆಚ್ಚಿಸಬೇಕೆಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ವೇತನ ಪರಿಷ್ಕರಣೆಯಿಂದ ವಾರ್ಷಿಕ 10, 509 ಕೋಟಿ ಬೊಕ್ಕಸಕ್ಕೆ ಹೊರೆಯಾಗಲಿದೆ.
2017ರ ಜೂನ್ ನಲ್ಲಿ ಆಯೋಗ ರಚಿಸಲಾಗಿತ್ತು. ವರದಿ ಜಾರಿಯಾದರೆ ವೇತನ ಕನಿಷ್ಠ 17,000, ಗರಿಷ್ಠ 1,50, 609ರೂಪಾಯಿ ಆಗಲಿದೆ. ವಿಶ್ವವಿದ್ಯಾಲಯ, ಸ್ಥಳೀಯ ಸಂಸ್ಥೆ,ಪದವಿ ಶಿಕ್ಷಣ ಇಲಾಖೆಯ ಸುಮಾರು 73000 ಸಿಬ್ಬಂದಿಗೂ ವರದಿ ಅನ್ವಯವಾಗಲಿದೆ.
ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಸಿಎಂ ಸಿದ್ದರಾಮಯ್ಯನವರು 6ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ವಿರೋಧ:
6ನೇ ವೇತನ ಆಯೋಗದ ಶೇ.30ರಷ್ಟು ಹೆಚ್ಚಳದ ಶಿಫಾರಸ್ಸಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ 7ನೇ ವೇತನ ಆಯೋಗ ಜಾರಿಗೊಳಿಸಿದೆ. ಆದರೆ ರಾಜ್ಯದಲ್ಲಿ ನಮಗೆ ಕನಿಷ್ಠ ಶೇ.45ರಷ್ಟು ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.