ಸುರತ್ಕಲ್: ಶ್ರೀನಿವಾಸ ವಿಶ್ವವಿದ್ಯಾನಿಲಯದ ಆರನೇ ವಾರ್ಷಿಕ ಘಟಿಕೋತ್ಸವ ಶ್ರೀನಿವಾಸ ವಿಶ್ವವಿದ್ಯಾಲಯ ಮುಕ್ಕ ಕ್ಯಾಂಪಸ್‌ನಲ್ಲಿ ಶನಿವಾರ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಎಂಸಿಎಫ್ ವೈದ್ಯಕೀಯ ಸೇವೆಯ ಜಂಟಿ ಪ್ರಧಾನ ವ್ಯವಸ್ಥಾಪಕ ಡಾ| ಕೆ. ಯೋಗೀಶ ಮಾತನಾಡಿ, ವಿದ್ಯಾಭ್ಯಾಸದ ಬಳಿಕ ಸವಾಲಿನ ಜಗತ್ತಿಗೆ ತೆರಳುವ ಸಂದರ್ಭ ಆತ್ಮವಿಶ್ವಾಸದೊಂದಿಗೆ ಮುನ್ನಡೆಯಿರಿ. ಉತ್ತಮ ಜೀವನ ರೂಪಿಸಿಕೊಡಲು ನೆರವಾದ ಪೋಷಕರು, ಶಿಕ್ಷಕರು, ಶಿಕ್ಷಣ ಸಂಸ್ಥೆಯನ್ನು ಸದಾ ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಹೊಸ ಹೊಸ ಅವಕಾಶಗಳು ಇಂದು ಹೆಚ್ಚಿದ್ದು, ಸ್ಟಾರ್ಟ್ ಅಪ್‌ನಂತಹ ಸ್ವಂತ ಯೋಜನೆ ಆರಂಭಿಸಲು ಅವಕಾಶವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿ.ವಿ. ಕುಲಾಧಿಪತಿ ಹಾಗೂ ಎ. ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷ ಡಾ| ಸಿಎ ಎ. ರಾಘವೇಂದ್ರ ರಾವ್ ಮಾತನಾಡಿ, ನಮ್ಮ ಪ್ರಪಂಚದ ಬೆಳವಣಿಗೆಗೆ ಪ್ರತಿಯೊಂದು ವೃತ್ತಿಯು ನಿರ್ಣಾಯಕವಾಗಿದೆ ಎಂದರು. ಸಮಾಜ ಮತ್ತು ಜನರ ಸೇವೆ ಮಾಡಲು ಪ್ರಯತ್ನಿಸುವುದು ಒಬ್ಬರು ಕೈಗೊಳ್ಳಬಹುದಾದ ದೊಡ್ಡ ಪ್ರಯತ್ನವಾಗಿದೆ. ಯಾವುದೇ ಕೆಲಸವು ಇರಲಿ, ಅದನ್ನು ಗೌರವಿಸಬೇಕು ಮತ್ತು ತಮ್ಮ ಕೆಲಸಕ್ಕೆ ಸಮರ್ಪಿಸಬೇಕು ಎಂದರು.
ಗೌರವ ಅತಿಥಿಯಾಗಿದ್ದ ಸಹ ಕುಲಾಧಿಪತಿ, ಎ. ಶಾಮರಾವ್ ಫೌಂಡೇಶನ್ ಉಪಾಧ್ಯಕ್ಷ ಡಾ| ಎ. ಶ್ರೀನಿವಾಸ್ ರಾವ್ ಶುಭ ಹಾರೈಸಿದರು. ಉಪಕುಲಪತಿ ಡಾ| ಸತ್ಯನಾರಾಯಣ ರೆಡ್ಡಿ ವರದಿ ಮಂಡಿಸಿದರು.
ಶ್ರೀನಿವಾಸ ವಿ.ವಿ. ಆಡಳಿತ ಮಂಡಳಿ ಸದಸ್ಯರಾದ ಪ್ರೊ| ಎ. ಮಿತ್ರ ಎಸ್. ರಾವ್, ಆಡಳಿತ ಮಂಡಳಿ ಟ್ರಸ್ಟಿ ಸದಸ್ಯರಾದ ಎ. ವಿಜಯಲಕ್ಷ್ಮೀ ಆರ್.ರಾವ್, ಪದ್ಮಿನಿ ಕುಮಾರ್, ಡಾ| ಉದಯ್ ಕುಮಾರ್ ಮಯ್ಯ, ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಸಚಿವ ಡಾ| ಅನಿಲ್ ಕುಮಾರ್, ಮೌಲ್ಯಮಾಪನ ಕುಲಸಚಿವ ಡಾ| ಶ್ರೀನಿವಾಸ್ ಮಯ್ಯ ಡಿ., ಅಭಿವೃದ್ಧಿ ರಿಜಿಸ್ಟ್ರಾರ್ ಡಾ| ಅಜಯ್ ಕುಮಾರ್, ಅಕಾಡೆಮಿಕ್ ರಿಜಿಸ್ಟ್ರಾರ್ ಡಾ| ಆದಿತ್ಯ ಕುಮಾರ್ ಮಯ್ಯ, ವಿವಿಧ ಸಂಸ್ಥೆಗಳ ಡೀನ್‌ಗಳು ಉಪಸ್ಥಿತರಿದ್ದರು.
ಘಟಿಕೋತ್ಸವದ ಸಮಯದಲ್ಲಿ, 1,257 ಪದವೀಧರರು (ಪಿಜಿ – 358, ಯುಜಿ – 881) ತಮ್ಮ ಪ್ರಮಾಣಪತ್ರಗಳನ್ನು ಪಡೆದರು. ವಿ.ವಿ.ಯು 144 ರ್‍ಯಾಂಕ್ ಪ್ರಕಟಿಸಿದ್ದು, ಒಟ್ಟು 38 ಪದವೀಧರರು ಕುಲಪತಿಗಳ ಚಿನ್ನದ ಪದಕ ಪಡೆದರು.
ಹೆಚ್ಚುವರಿಯಾಗಿ, 1 ಡಿಎಸ್‌ಸಿ ಮತ್ತು 17 ಪಿಎಚ್‌ಡಿಯನ್ನು ನೀಡಲಾಯಿತು. ಕುಲಸಚಿವ ಡಾ| ಅನಿಲ್ ಕುಮಾರ್ ಸ್ವಾಗತಿಸಿ, ಅಭಿವೃದ್ಧಿ ಕುಲಸಚಿವ ಡಾ| ಅಜಯ್ ಕುಮಾರ್ ವಂದಿಸಿದರು. ಡಾ| ಅಂಬಿಕಾ ಮಲ್ಯ, ಡಾ| ವಿಜಯಲಕ್ಷ್ಮೀ ನಾಯಕ್, ಪ್ರೊ| ರೋಹನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.