ಕೊಪ್ಪಳ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬರದ ಭೀಕರತೆ ತಾಂಡವಾಡುತ್ತಿದೆ. ನೀರಿಗಾಗಿ ಎಲ್ಲೆಡೆ ಹಾಹಾಕಾರದ ಸದ್ದು ಇನ್ನೂ ನಿಂತಿಲ್ಲ. ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಕೇವಲ ಮೂರು ತಿಂಗಳಲ್ಲಿ ಬರೊಬ್ಬರಿ 696 ಬೋರವೆಲ್ ಕೊರೆಯಿಸಿದ್ದರೂ ಜನತೆಗೆ ಇನ್ನೂ ನೀರಿನ ಭವಣೆ ತಪ್ಪಿಲ್ಲ.
ಹೌದು. ಜಿಲ್ಲೆಯ ಬರದ ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆಯೆಂದರೆ ಜನರು ಸೇರಿ ಅಧಿಕಾರಿಗಳು ಕಕ್ಕಾಬಿಕ್ಕಿಯಾಗುತ್ತಿದ್ದಾರೆ. ಸರ್ಕಾರದಿಂದ ಕೋಟಿ ಕೋಟಿ ಅನುದಾನ ಬಂದರೂ ನೀರಿನ ಭವಣೆ, ಜಾನುವಾರುಗಳ ನರಳಾಟ ತಪ್ಪಿಯೇ ಇಲ್ಲ. ಇಲಾಖೆ ಲೆಕ್ಕ ಬಾಕಿ ತೋರಿಸಿ ವರ್ಷಕ್ಕೆ ಚುಕ್ತಾ ಮಾಡಿಕೊಳ್ಳುತ್ತಿದೆ.
ನೀರಿನ ಜಾಗೃತಿ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಅದೇ ನೀರಿನ ಅಪವ್ಯಯ ನಡೆದಿದೆ. ಕೊಪ್ಪಳ, ಕುಷ್ಟಗಿ ತಾಲೂಕಿನ ನೀರಿನ ಭವಣೆಯ ಪರಿಸ್ಥಿತಿಯನ್ನು ಹೇಳದಂತಾಗಿದೆ. ಜನರು ಹೊಲ ಗದ್ದೆಗಳಿಗೆ ಅಲೆದಾಡಿ ನೀರು ತಂದು ಉಪ ಜೀವನ ನಡೆಸುವಂತಹ ಪರಿಸ್ಥಿತಿಯನ್ನು ಗ್ರಾಮೀಣ ಪ್ರದೇಶದಲ್ಲಿ ಈಗಲೂ ಕಾಣುತಿದ್ದೇವೆ. ಬರ ನಿರ್ವಹಣೆಗೆ ನಾವು ಸಿದ್ಧರಿದ್ದೇವೆ ಎನ್ನುತ್ತಿದ್ದರೆ, ಸರ್ಕಾರಗಳು ಬರ ನಿರ್ವಹಣೆಗೆ ಅನುದಾನದ ಕೊರತೆಯಿಲ್ಲ ಎಂದು ಬೀಗುತ್ತಿವೆ.
696 ಬೋರ್‌ವೆಲ್ ಕೊರೆತ: ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳಿವೆ ಎಂದು ಸ್ವತಃ ಅಧಿಕಾರಿಗಳ ವರದಿಯೇ ಹೇಳುತ್ತಿದೆ. ಅಂತರ್ಜಲಮಟ್ಟ ಕುಸಿತದಿಂದ ವರ್ಷದಿಂದ ವರ್ಷಕ್ಕೆ ಕೇವಲ 3 ತಿಂಗಳಲ್ಲಿ ಬರೊಬ್ಬರಿ 696 ಬೋರ್‌ವೆಲ್ಗಳನ್ನು ಜಿಲ್ಲೆಯಲ್ಲಿ ಕೊರೆಯಿಸಿದೆ. ಈ ಪೈಕಿ ಕುಷ್ಟಗಿ, ಕೊಪ್ಪಳ, ಯಲಬುರ್ಗಾ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೋರ್‌ವೆಲ್ ಕೊರೆಯಿಸಿದೆ. ಆದರೆ ಅರ್ಧಕ್ಕೆ ಅರ್ಧದಷ್ಟು ಬೋರ್‌ವೆಲ್ಗಳು ವಿಫಲವಾಗಿವೆ ಎಂದು ಅಧಿಕಾರಿ ವರ್ಗವೇ ಹೇಳುತ್ತಿದೆ. ಇದರಿಂದ ಮುಂದಿನ ದಿನಮಾನಗಳಲ್ಲಿ ಜನರು ಸೇರಿದಂತೆ ಅಧಿಕಾರಿ ವರ್ಗಕ್ಕೂ ಆತಂಕ ಶುರುವಾಗಿದೆ. ನೀರಿನ ಭೀಕರತೆಗೆ ಜನ ಜೀವನವೇ ಬೆಚ್ಚಿ ಬೀಳುವಂತಹ ಸ್ಥಿತಿ ಉದ್ಭವಿಸುತ್ತಿದೆ.
9.44 ಕೋಟಿ ಕ್ರಿಯಾಯೋಜನೆ: ಜಿಲ್ಲೆಯಲ್ಲಿ 2018-19ನೇ ಸಾಲಿನಿಂದ ಬರದ ಬಿಸಿಗೆ ಗ್ರಾಮೀಣ ಪ್ರದೇಶದಲ್ಲಿ ನೀರು ಪೂರೈಕೆ ಮಾಡಲು ಜಿಪಂ ಟಾಸ್ಕ್ ಫೋರ್ಸ್ ಸಮಿತಿಯಿಂದ 3.10 ಕೋಟಿ ರೂ., ಜಿಲ್ಲಾಧಿಕಾರಿ ಖಾತೆಯಿಂದ 1.7 ಕೋಟಿ ರೂ. ಅನುದಾನವನ್ನು ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಪ್ರಸ್ತಾವನೆ ಪಡೆದು ಬಿಡುಗಡೆ ಮಾಡಿದೆ. ಈಗಾಗಲೇ 9.44 ಕೋಟಿ ರೂ. ಖರ್ಚು ಮಾಡಲಾಗಿದ್ದು, ಇನ್ನೂ 5 ಕೋಟಿ ರೂ. ವಿವಿಧ ಹಂತದಲ್ಲಿ ಕಾಮಗಾರಿ ನಡೆದಿವೆ ಎನ್ನುತ್ತಿದ್ದಾರೆ ಅಧಿಕಾರಿಗಳು.
ಒಂದು ಬೋರ್‌ವೆಲ್ಗೆ 49 ಸಾವಿರ!: ಎನ್‌ಆರ್‌ಡಬ್ಲ್ಯೂಪಿ ವಿಭಾಗದಿಂದ ಪ್ರತಿ ಬೋರ್‌ವೆಲ್ ಕೊರೆದಿದ್ದಕ್ಕೆ 45ರಿಂದ 49 ಸಾವಿರ ರೂ. ಬಿಡುಗಡೆ ಮಾಡುತ್ತಿದೆ. ಈ ಲೆಕ್ಕಾಚಾರ ಗಮನಿಸಿದರೆ 3.40 ಕೋಟಿ ರೂ. ಅನುದಾನ ಬರಿ ಬೋರ್‌ವೆಲ್ ಕೊರೆಸಲು ವೆಚ್ಚವಾಗಿದೆ. ಇನ್ನೂ ಪೈಪ್‌ಲೈನ್ ವೆಚ್ಚ, ರೀಫ್ಲಶಿಂಗ್ ಸೇರಿ ದುರಸ್ತಿ ಕಾರ್ಯಕ್ಕೆ 5 ಕೋಟಿ ರೂ. ಅನುದಾನದಲ್ಲಿ ಕೆಲಸ ನಡೆದಿದೆ. 250-400 ಅಡಿವರೆಗೂ ಬೋರ್‌ವೆಲ್ ಕೊರೆಯಿಸಿದರೂ ನೀರು ಬರುತ್ತಿಲ್ಲ.
ಬೋರ್‌ವೆಲ್ ಕೊರೆಸಿಲ್ಲವೆಂಬ ಆಪಾದನೆ?: ಜಿಲ್ಲೆಯ ಕೆಲವೊಂದು ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಬೋರ್‌ವೆಲ್ ಕೊರೆಯಿಸಿಲ್ಲ. ಹಳೆಯ ಬೋರ್‌ವೆಲ್ಗಳಿಗೆ ಲೆಕ್ಕ ಬಾಕಿ ಮಾಡಲಾಗುತ್ತಿದೆ ಎನ್ನುವ ಆಪಾದನೆ ಕೇಳಿ ಬಂದಿದೆ. ಈ ಹಿಂದೆ ವಿಫಲವಾದ ಬೋರ್‌ವೆಲ್ಗಳನ್ನೇ ಜಿಪಿಎಸ್ ಮಾಡಿಸಿ ಲೆಕ್ಕವನ್ನು ಚುಕ್ತಾ ಮಾಡಲಾಗುತ್ತಿದೆ ಎನ್ನುವ ಕೂಗೊಂದು ಕೇಳಿ ಬಂದಿದೆ. ಬೋರ್‌ವೆಲ್ ಸಫಲವಾದರೆ ಸರಿ, ವಿಫಲವಾದರೆ ಈ ಆಟ ನಡೆಯಲಿದೆ ಎನ್ನಲಾಗುತ್ತಿದ್ದು, ಇದನ್ನು ಇಲಾಖೆ ನಿರಾಕರಣೆ ಮಾಡಿದೆ. ಈ ಬಗ್ಗೆ ವಾಸ್ಥವ ಸ್ಥಿತಿಯ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ.
•ದತ್ತು ಕಮ್ಮಾರ