ಮಂಗಳೂರು: ತುಳುನಾಡಿನ ಕಲಾರಾಧನೆಯ ಸೊಗಡಿನಲ್ಲಿ ನಿರ್ಮಾಣವಾದ “ಜೀಟಿಗೆ’ ತುಳು ಸಿನೆಮಾ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ “ಅತ್ಯುತ್ತಮ ಪ್ರಾದೇಶಿಕ ಚಿತ್ರ’ ಎಂಬ ಗೌರವಕ್ಕೆ ಪಾತ್ರವಾಗಿದೆ.
ತುಳು ಸಿನೆಮಾಕ್ಕೆ ಸಿಗುವ ಏಳನೇ ರಾಷ್ಟ್ರೀಯ ಪ್ರಶಸ್ತಿ ಇದಾಗಿದ್ದು ಇದಕ್ಕೂ ಮುನ್ನ “ಬಂಗಾರ್ ಪಟ್ಲೆàರ್’, “ಕೋಟಿ ಚೆನ್ನಯ’, “ಗಗ್ಗರ’, “ಮದಿಪು’, “ಪಡ್ಡಾಯಿ’, “ಪಿಂಗಾರ’ ಸಿನೆಮಾಗಳು ರಾಷ್ಟ್ರೀಯ ಗೌರವಕ್ಕೆ ಪಾತ್ರವಾಗಿದ್ದವು.
ಸಂತೋಷ್ ಮಾಡ ನಿರ್ದೇಶನ ಹಾಗೂ ಅರುಣ್ ರೈ ತೋಡಾರ್ ನಿರ್ಮಾಣ, ನವೀನ್ ಡಿ. ಪಡೀಲ್ ಅವರ ಮುಖ್ಯ ತಾರಾಗಣದಲ್ಲಿ “ಜೀಟಿಗೆ’ ಸಿದ್ಧವಾಗಿದೆ. ಸಂತೋಷ್ ಮಾಡ ಅವರ ಮೊದಲ ಸಿನೆಮಾ ನಿರ್ದೇಶನವೇ “ರಾಷ್ಟ್ರೀಯ ಪ್ರಶಸ್ತಿ’ಗೆ ಭಾಜನವಾಗಿರುವುದು ವಿಶೇಷ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ 15 ದಿನದಲ್ಲಿ ಶೂಟಿಂಗ್ ಕಂಡ “ಜೀಟಿಗೆ’ ಇನ್ನಷ್ಟೇ ತೆರೆಕಾಣಬೇಕಿದೆ.
ತುಳುನಾಡಿನ ದೈವಾರಾಧನೆ ಮತ್ತು ಅನನ್ಯ ಕಟ್ಟುಪಾಡುಗಳನ್ನು ಬಿಂಬಿಸುವ ಕಲಾತ್ಮಕ ಚಿತ್ರ
ವಿದು. ನವೀನ್ ಡಿ. ಪಡೀಲ್, ರೂಪ ವರ್ಕಾಡಿ, ಜೆ.ಪಿ. ತೂಮಿನಾಡ್, ಚೇತನ್ ರೈ ಮಾಣಿ, ಅರುಣ್ ರೈ ಸಹಿತ ಹಲವರು ತಾರಾಗಣದಲ್ಲಿ ದ್ದಾರೆ. ಚಿತ್ರಕಥೆ, ಸಂಭಾಷಣೆ ಶಶಿರಾಜ್ ಕಾವೂರು ಅವರದ್ದು. ಉನ್ನಿ ಮಡವುರ್ ಕೆಮರಾ, ಸ್ಯಾಕ್ಸೋಫೋನ್ ಜಯರಾಮ್ ಸಂಗೀತವಿದೆ.
ಒಂದು ಒಳ್ಳೆಯ ಸಿನೆಮಾ ಮಾಡಬೇಕು ಎಂಬುದಷ್ಟೇ ನಮ್ಮ ಉದ್ದೇಶವಾಗಿತ್ತು. ಅದನ್ನು ತುಂಬಾ ಶ್ರದ್ಧೆಯಿಂದ ಮಾಡಿದ್ದೇವೆ.ಈಗ ಅದನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಈ ಚಿತ್ರದಲ್ಲಿ ದುಡಿದ ಎಲ್ಲರಿಗೆ, ನಮ್ಮ ಚಿತ್ರವನ್ನು ಗುರುತಿಸಿದ ಜ್ಯೂರಿಗಳಿಗೆ ಧನ್ಯ ವಾದ ಹೇಳಬಯಸುತ್ತೇನೆ.
– ಅರುಣ ರೈ ತೋಡಾರು, ನಿರ್ಮಾಪಕರು, “ಜೀಟಿಗೆ