Advertisement

688 ಜನ ವಸತಿಗೆ ಶಾಶ್ವತ ನೀರಿಲ್ಲ!

02:56 PM May 06, 2019 | Team Udayavani |

ಬಾಗಲಕೋಟೆ: ಮುಳುಗಡೆ ಜಿಲ್ಲೆಯ 688 ಜನ ವಸತಿ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಇಲ್ಲ ಎಂದರೆ ನಂಬಲೇಬೇಕು.

Advertisement

ಹೌದು, ಜಿಲ್ಲೆಯ ಆರು ತಾಲೂಕು (ಹೊಸದಾಗಿ ನಾಲ್ಕು ಘೋಷಣೆ ಮಾಡಿದ್ದು, ಆಡಳಿತಾತ್ಮಕವಾಗಿ ಆಡಳಿತ ನಡೆಸುತ್ತಿಲ್ಲ) ತಾಲೂಕು ಮತ್ತು 18 ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 602 ಕಂದಾಯ ಗ್ರಾಮಗಳು, 20 ಅಧಿಕೃತ ಕಂದಾಯ ಗ್ರಾಮಗಳೆಂದು ಘೋಷಣೆಯಾಗದ ಗ್ರಾಮಗಳು ಸೇರಿ ಒಟ್ಟು 1072 ಜನ ವಸತಿ ಪ್ರದೇಶಗಳಿವೆ. ಅಲ್ಲದೇ 15 ನಗರ ಸ್ಥಳೀಯ ಸಂಸ್ಥೆಗಳಿವೆ. ಅದರಲ್ಲಿ 688 ಜನ ವಸತಿ ಪ್ರದೇಶಗಳಿಗೆ ಈ ವರೆಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಈ ವರೆಗೂ ಕೈಗೊಂಡಿಲ್ಲ.

384 ಹಳ್ಳಿಗೆ ಮಾತ್ರ ಶಾಶ್ವತ ಯೋಜನೆ: ನಗರ ಪ್ರದೇಶ ಹೊರತುಪಡಿಸಿ, ಗ್ರಾಮೀಣ ಪ್ರದೇಶದ ಹಳ್ಳಿ, ಜನವಸತಿಗಳಿಗೆ ಕುಡಿಯುವ ನೀರು ಪೂರೈಸುವ ಹೊಣೆಹೊತ್ತ ಜಿ.ಪಂ, ಜಿಲ್ಲೆಯಲ್ಲಿ ಒಟ್ಟು 33 ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳಿಸಿದೆ. ಅದರಲ್ಲಿ 3 ಯೋಜನೆಗಳು ವಿವಿಧ ಕಾರಣಕ್ಕೆ ನೀರು ಕೊಡುತ್ತಿಲ್ಲ. ಉಳಿದ 30 ಯೋಜನೆಗಳಡಿ 384 ಹಳ್ಳಿಗಳಿಗೆ ನೀರು ಕೊಡಲಾಗುತ್ತಿದೆ ಎಂದು ಇಲಾಖೆ, ಅಂಕಿ-ಸಂಖ್ಯೆಯ ದಾಖಲೆ ಕೊಡುತ್ತದೆ.

ನದಿಗಳೇ ಆಸರೆ: ಬಹುಹಳ್ಳಿ ಕುಡಿಯುವ ನೀರು ಪೂರೈಕೆಗೆ ಜಿಲ್ಲೆಯ ಮೂರು ನದಿಗಳೇ ಆಸರೆಯಾಗಿವೆ. ಘಟಪ್ರಭಾ ನದಿ ಪಾತ್ರದಲ್ಲಿ ಬಾದಾಮಿ-2, ಮುಧೋಳ-1, ಬಾಗಲಕೋಟೆ-3 ಹಾಗೂ ಬೀಳಗಿ ತಾಲೂಕಿನಲ್ಲಿ 3 ಬಹುಹಳ್ಳಿ ಕು.ನೀರಿನ ಯೋಜನೆ ಇವೆ.

ಕೃಷ್ಣಾ ನದಿ ಪಾತ್ರದಲ್ಲಿ ಜಮಖಂಡಿ ತಾಲೂಕಿನಲ್ಲಿ 6, ಮುಧೋಳ-1, ಹುನಗುಂದ-4, ಬಾಗಲಕೋಟೆ-5, ಬೀಳಗಿ-3 ಯೋಜನೆಗಳು, ಮಲಪ್ರಭಾ ನದಿ ಪಾತ್ರದಲ್ಲಿ ಬಾದಾಮಿ-3 ಹಾಗೂ ಹುನಗುಂದ ತಾಲೂಕಿನಲ್ಲಿ 2 ಬಹುಹಳ್ಳಿ ಯೋಜನೆ ಚಾಲ್ತಿಯಲ್ಲಿವೆ. ಈ ಯೋಜನೆಗಳಿಗೆ ನದಿ ಪಾತ್ರದಲ್ಲಿ ಬ್ಯಾರೇಜ್‌ ನಿರ್ಮಿಸಿದ್ದು, ಅಲ್ಲಿ ಜಾಕವೆಲ್ ನಿರ್ಮಿಸಿ, ಪೈಪ್‌ಲೈನ್‌ ಮೂಲಕ 384 ಹಳ್ಳಿಗಳಿಗೆ ನೀರು ಕೊಡಲಾಗುತ್ತಿದೆ.

Advertisement

688 ಜನ ವಸತಿಗೆ ಶಾಶ್ವತ ಯೋಜನೆ ಇಲ್ಲ: ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಜಿಲ್ಲೆಯ 384 ಹಳ್ಳಿಗಳು ಮಾತ್ರ ಒಳಗೊಂಡಿದ್ದು, ಉಳಿದ 688 ಜನವಸತಿಗಳಿಗೆ ಶಾಶ್ವತ ಯೋಜನೆ ಕೈಗೊಂಡಿಲ್ಲ. ಈ ಜನ ವಸತಿಗಳಲ್ಲಿ ಕೊಳವೆ ಬಾವಿಗಳ ಮೂಲಕವೇ ಇಂದಿಗೂ ಕುಡಿಯುವ ನೀರು ಒದಗಿಸಲಾಗುತ್ತಿದೆ. ಆ ಕೊಳವೆ ಬಾವಿಗಳಲ್ಲಿ ನೀರು ಬತ್ತಿದರೆ, ಮತ್ತೂಂದು ಹೊಸ ಕೊಳವೆ ಬಾವಿ ಕೊರೆದು ನೀರು ಕೊಡುವ ಪರ್ಯಾಯ ಮಾರ್ಗ ಬಿಟ್ಟರೆ, ಶಾಶ್ವತ ಯೋಜನೆ ಕೈಗೊಳ್ಳಲು ಈ ವರೆಗೆ ಯಾರೂ ಮುಂದಾಗದಿರುವುದು ಆಡಳಿತ ವ್ಯವಸ್ಥೆಯ ಕಾಳಜಿ ಎಂಬ ಬೇಸರದ ಮಾತು ಕೇಳಿ ಬರುತ್ತಿದೆ.

ಏನಿದೆ ನೀರಿನ ವ್ಯವಸ್ಥೆ : ಜಿಲ್ಲೆಯ ಆರು ತಾಲೂಕಿನ 1072 ಜನ ವಸತಿ ಪ್ರದೇಶಗಳಲ್ಲಿ ಒಟ್ಟು 13,01,686 ಜನಸಂಖ್ಯೆ ಇದೆ. ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಯ ಜತೆಗೆ ಈ ಜನ ವಸತಿಗಳಲ್ಲಿ 1,243 ಕೊಳವೆ ಬಾವಿಗಳು, 1097 ಕಿರು ನೀರು ಪೂರೈಕೆ ಯೋಜನೆಗಳು, 3,758 ಕೈ ಪಂಪ್‌ಗ್ಳು ಸೇರಿ ಒಟ್ಟು 6,719 ಕೊಳವೆ ಬಾವಿಯಿಂದ ನೀರು ಪೂರೈಕೆ ವ್ಯವಸ್ಥೆ ಜಿಲ್ಲೆಯಲ್ಲಿವೆ.

ಆದರೆ, ಮೂರು ವರ್ಷಗಳ ಸತತ ಬರಗಾಲದಿಂದ ಶೇ.35ರಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಅದಕ್ಕಾಗಿ ಈ ವರ್ಷ ಮತ್ತೆ 305 ಹೊಸ ಕೊಳವೆ ಬಾವಿ ಕೊರೆಸಲಾಗಿದೆ. ಅದರಲ್ಲಿ 233 ಮಾತ್ರ ಸಫಲವಾಗಿದ್ದು, ಅವುಗಳಿಂದಲೇ ನೀರು ಕೊಡುವ ಪ್ರಯತ್ನ, ಜಿ.ಪಂ.ನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಾಡುತ್ತಿದೆ.

ಒಟ್ಟಾರೆ, ಮೂರು ನದಿಗಳು ಹರಿದು, ರಾಷ್ಟ್ರದ ಅತ್ಯಂತ ದೊಡ್ಡ ಆಲಮಟ್ಟಿ ಜಲಾಶಯ ಜಿಲ್ಲೆಯಲ್ಲಿದ್ದರೂ, ಕುಡಿಯುವ ನೀರಿನ ಶಾಶ್ವತ ಯೋಜನೆ ಕೈಗೊಳ್ಳುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತ ಗಂಭೀರ ಪ್ರಯತ್ನ ನಡೆಸಿಲ್ಲ ಎಂಬುದು ಜಿಲ್ಲೆಯ ಜನರ ಆರೋಪ.

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next