Advertisement

ಕರಾವಳಿಯಲ್ಲಿ ವಾಯಿದೆ ಮೀರಿವೆ 68 ಸಾವಿರ ಹಳೆ ವಾಹನಗಳು!

12:32 AM Feb 07, 2023 | Team Udayavani |

ಮಂಗಳೂರು: ಕರಾವಳಿಯಲ್ಲಿ ನಾಲ್ಕು ವರ್ಷಗಳ ಅಂತರದಲ್ಲಿ ಬರೋಬ್ಬರಿ 68,951 ಸಾರಿಗೇತರ ವಾಹನಗಳು ವಾಯಿದೆ ಮೀರಿದ ವಾಹನಗಳ ಯಾದಿ ಸೇರಿವೆ.

Advertisement

ಈ ಪೈಕಿ ದ.ಕ. ಜಿಲ್ಲೆಯ ಮಂಗಳೂರು, ಬಂಟ್ವಾಳ ಹಾಗೂ ಪುತ್ತೂರು ಆರ್‌ಟಿಒ ವ್ಯಾಪ್ತಿಯಲ್ಲಿ 48,522 ಹಾಗೂ ಉಡುಪಿಯಲ್ಲಿ 20,429 ಹಳೆವಾಹನಗಳು. ನೋಂದಣಿ ದಿನಾಂಕದಿಂದ 15 ವರ್ಷ ಮೀರಿದ ಸಾರಿಗೇತರ ದ್ವಿಚಕ್ರ, ಲಘು ಮೋಟಾರು ವಾಹನಗಳು ಇವುಗಳಲ್ಲಿ ಸೇರಿವೆ.

ಪ್ರಸ್ತುತ ರಾಜ್ಯದಲ್ಲಿ ಸುಮಾರು 14.3 ಲಕ್ಷ ವಾಹನಗಳು ವಾಯಿದೆ ಮೀರಿವೆ. ಇಂತಹ ವಾಹನಗಳನ್ನು ಗುಜರಿಗೆ ಹಾಕುವ ನೋಂದಾಯಿತ ವಾಹನಗಳ ಗುಜರಿ ಕೇಂದ್ರ (ಆರ್‌ವಿಎಸ್‌ಪಿ) ಗಳನ್ನು ಸ್ಥಾಪಿಸಲು ಸಲ್ಲಿಸಿದ್ದ “ಕರ್ನಾಟಕ ಗುಜರಿ ನೀತಿ-2022′ ಕರಡು ಯೋಜನೆ ಪ್ರಸ್ತಾವನೆಗೆ ರಾಜ್ಯ ಸರಕಾರ ಈಗಾಗಲೇ ಅನುಮೋದನೆ ನೀಡಿದೆ. ಇದರಂತೆ 15 ವರ್ಷ ತುಂಬಿರುವ ಖಾಸಗಿ ಹಾಗೂ ಸರಕಾರಿ ವಾಹನಗಳನ್ನು ಗುಜರಿಗೆ ಹಾಕುವ ಪ್ರಕ್ರಿಯೆ ಆರಂಭವಾಗಲಿದೆ.

ಗುಜರಿ ನೀತಿ ಯಾವಾಗ-ಗೊತ್ತಿಲ್ಲ!
“ಗುಜರಿ ನೀತಿ’ ಜಾರಿಯನ್ನು ಕೇಂದ್ರ-ರಾಜ್ಯ ಸರಕಾರಗಳು ಈಗಾಗಲೇ ಘೋಷಣೆ ಮಾಡಿವೆಯೇ ವಿನಾ ಈ ಕುರಿತ ಯಾವುದೇ ಬೆಳವಣಿಗೆ ನಡೆದಿಲ್ಲ. ಹೀಗಾಗಿ ನೀತಿ ಯಾವಾಗದಿಂದ ಜಾರಿಯಾಗುತ್ತದೆ ಎಂಬ ಬಗ್ಗೆ ನಿಖರತೆ ಇಲಾಖೆಯಲ್ಲಿಲ್ಲ. ಆದರೆ ವಾಯಿದೆ ಮೀರಿದ ವಾಹನಗಳು ಎಷ್ಟು ಎಂಬಿತ್ಯಾದಿ ಮಾಹಿತಿ ಸಂಗ್ರಹ ಮಾತ್ರ ಇಲಾಖೆಯಿಂದ ಸದ್ಯ ನಡೆಯುತ್ತಿದೆ.

ಏನಾಗಲಿದೆ?
ಗುಜರಿ ನೀತಿ ಬಂದ ಬಳಿಕ 15 ವರ್ಷ ಮೀರಿದ ವಾಹನಗಳನ್ನು ಸ್ವಯಂಪ್ರೇರಿತವಾಗಿ ಗುಜರಿಗೆ ಹಾಕಿ ಸವಲತ್ತು ಪಡೆಯಲು ಇಚ್ಛಿಸುವವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. 15 ವರ್ಷ ಮೀರಿದ ವಾಹನಗಳನ್ನು “ಹಸುರು ತೆರಿಗೆ’ ಪಾವತಿಸಿ ಬಳಸಲು ಕೂಡ ನೀತಿಯಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ. ವಾಹನಗಳು ಸುಸ್ಥಿತಿಯಲ್ಲಿ ಇವೆಯೇ ಎಂಬುದನ್ನು ತಪಾಸಣೆಗೆ ಒಳಪಡಿಸಲು ಸಂಪೂರ್ಣ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳು ಅಲ್ಲಲ್ಲಿ ಸ್ಥಾಪನೆಯಾಗಲಿವೆ.

Advertisement

ಗುಜರಿ ಕೇಂದ್ರ-ಎಲ್ಲಿ?
ಸಾರಿಗೆ ಇಲಾಖೆಯಿಂದ ಅನುಮತಿ ಪಡೆದು ಸ್ಥಾಪಿಸುವ ಗುಜರಿ ಕೇಂದ್ರಗಳಲ್ಲಿ ಹಳೇ ವಾಹನಗಳನ್ನು “ಸಾðéಪ್‌’ ಮಾಡಲಾಗುತ್ತದೆ. ಆದರೆ ಗುಜರಿಗೆ ಹಾಕಲು ವಾಹನಗಳನ್ನು ಕೊಡುವ ಮುನ್ನ ವಾಹನದ ಮೇಲೆ ಯಾವುದೇ ಕ್ರಿಮಿನಲ್‌ ಹಿನ್ನೆಲೆ, ಕೇಸ್‌ ಹಾಗೂ ದಂಡ ಶುಲ್ಕ ಪಾವತಿ ಬಾಕಿ ಉಳಿಸಿಕೊಂಡಿಲ್ಲ ಎಂದು ಮಾಲಕ ಮುಚ್ಚಳಿಕೆ ಬರೆದುಕೊಡಬೇಕು. ಯಾವುದೇ ವ್ಯಕ್ತಿ, ಸಂಸ್ಥೆ, ಸೊಸೈಟಿ ಕಾನೂನುಬದ್ಧವಾಗಿ ಸಾðéಪಿಂಗ್‌ ಕೇಂದ್ರ ಸ್ಥಾಪಿಸಲು ಇಲಾಖೆ ಅವಕಾಶ ನೀಡುವ ಸಾಧ್ಯತೆಯಿದೆ.

ಗುಜರಿ ನಿಯಮ; ಲಾಭವೇನು ?
ಸ್ವಯಂಪ್ರೇರಿತವಾಗಿ ಹಳೆವಾಹನಗಳನ್ನು ಗುಜರಿಗೆ ಹಾಕಿದರೆ ವಾಹನ ಮಾಲಕರಿಗೆ ಸಾರಿಗೆ ಇಲಾಖೆಯು ಠೇವಣಿ ಪ್ರಮಾಣಪತ್ರ (ಸಿಒಡಿ) ವಿತರಿಸುತ್ತದೆ. ಹೊಸ ವಾಹನ ಖರೀದಿಸುವಾಗ ಆ ಪ್ರಮಾಣಪತ್ರ ತೋರಿಸಿದರೆ ಸಾರಿಗೇತರ ವಾಹನಕ್ಕೆ ಶೇ. 25ರಷ್ಟು ಹಾಗೂ ಸಾರಿಗೆ ವಾಹನಕ್ಕೆ ಶೇ. 15ರಷ್ಟು ತೆರಿಗೆ ವಿನಾಯಿತಿ ಸಿಗಲಿದೆ. ಈ ವಿನಾಯಿತಿ ಸಾರಿಗೇತರ ವಾಹನಕ್ಕೆ 15 ವರ್ಷದವರೆಗೆ ಹಾಗೂ ಸಾರಿಗೆ ವಾಹನಕ್ಕೆ 8 ವರ್ಷದವರೆಗೆ ಲಭ್ಯವಿರುತ್ತದೆ.

ವಾಯಿದೆ ಮೀರಿದ ವಾಹನಗಳು ಹಾಗೂ ಗುಜರಿ ನೀತಿ ಜಾರಿಗೆ ಸಂಬಂಧಿಸಿದ ಕೊನೆಯ ಹಂತದ ಪ್ರಕ್ರಿಯೆ ಸಾರಿಗೆ ಇಲಾಖೆಯಲ್ಲಿ ನಡೆಯುತ್ತಿದೆ. ಸದ್ಯಕ್ಕೆ ಈ ಬಗ್ಗೆ ಇಲಾಖೆಯಿಂದ ಯಾವುದೇ ನಿರ್ದೇಶನ ಬಂದಿಲ್ಲ. ಆದರೆ ಶೀಘ್ರದಲ್ಲಿ ಹಳೆ ವಾಹನಗಳಿಗೆ ಮುಕ್ತಿ ನೀಡುವ ನೀತಿಯ ಅನುಷ್ಠಾನದ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ.
– ಭೀಮನಗೌಡ ಪಾಟೀಲ್‌, ಆರ್‌ಟಿಒ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next