ಕಲಬುರಗಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗ ಮಟ್ಟದ ಪ್ರೌಢಶಾಲೆ 68 ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೆ ಕೌನ್ಸೆಲಿಂಗ್ ಪ್ರಕ್ರಿಯೆ ಸೋಮವಾರ ನಗರದ ಸಾರ್ವಜನಿಕ ಶಿಕ್ಷಣ ಆಯುಕ್ತಾಲಯದಲ್ಲಿ ನಡೆಯಿತು.
ಹೈ-ಕ ಭಾಗದ ಆರು ಜಿಲ್ಲೆಗಳ ಪ್ರೌಢ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರನ್ನು ನಿಯೋಜಿಸಿ ಹೆಚ್ಚುವರಿಯಾಗಿರುವವರನ್ನು ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ನಿಯುಕ್ತಿಗೊಳಿಸಲಾಯಿತು. ಕಲಬುರಗಿ, ಬೀದರ ಜಿಲ್ಲೆಗಳ ಹೆಚ್ಚುವರಿ ಶಿಕ್ಷಕರು ರಾಯಚೂರು, ಬಳ್ಳಾರಿಗೆ ಮತ್ತು ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಶಿಕ್ಷಕರು ಬೀದರ, ಯಾದಗಿರಿ, ಕಲಬುರಗಿಗೆ ವರ್ಗಾವಣೆಗೊಂಡರು.
ಕಲಬುರಗಿ ವಿಭಾಗದಲ್ಲಿ ಈ ಹಿಂದೆ ಒಟ್ಟು 79 ಜನರನ್ನು ಹೆಚ್ಚುವರಿ ಶಿಕ್ಷಕಕು ಎಂದು ಗುರುತಿಸಲಾಗಿತ್ತು. ಆದರೆ, ಹುದ್ದೆಗಳು ಖಾಲಿ ಇರದ ಕಾರಣ ಶಿಕ್ಷಕರ ಮಾಹಿತಿ ತಂತ್ರಾಂಶ (ಟಿಡಿಎಸ್)ದಲ್ಲಿ 68 ಹುದ್ದೆಗಳು ಮಾತ್ರ ದಾಖಲಾಗಿತ್ತು. ಅದರಂತೆ ಕೌನ್ಸೆಲಿಂಗ್ ನಡೆಸಿ ಶಿಕ್ಷಕರು ಆಯ್ಕೆ ಮಾಡಿಕೊಂಡ ಶಾಲೆಗಳಿಗೆ ನಿಯುಕ್ತಿಗೊಳಿಸಲಾಗಿದೆ.
ಉಳಿಕೆ ಶಿಕ್ಷಕರು ರಾಜ್ಯ ಮಟ್ಟದ ಕೌನ್ಸೆಲಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆಯುಕ್ತಾಲಯ ಸಹ ನಿರ್ದೇಶಕ ನಾರಾಯಣಗೌಡ ಹೇಳಿದರು.
ಶಿಕ್ಷಣ ಇಲಾಖೆ ಮಾರ್ಗಸೂಚಿಗಳ ಪ್ರಕಾರ ಜೂ.25ರಂದು ಕೌನ್ಸೆಲಿಂಗ್ ನಡೆಯಬೇಕಿತ್ತು. ಸಿಎಂ ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಜೂ.28ಕ್ಕೆ ಮುಂದೂಡಲಾಯಿತು. ಆದರೆ, ಜೂ.28ರ ಕೌನ್ಸೆಲಿಂಗ್ ದಿನಾಂಕದ ಬಗ್ಗೆ ಮುಂಚಿತವಾಗಿ ಮಾಹಿತಿ ಕೊಟ್ಟಿಲ್ಲ ಹಾಗೂ ಅನಾರೋಗ್ಯ, ಪತಿ-ಪತಿ ಪ್ರಕರಣದಲ್ಲಿ ವಿನಾಯ್ತಿ ನೀಡಿಲ್ಲ ಎಂದು ಆರೋಪಿಸಿ ಶಿಕ್ಷಕರು ಪ್ರತಿಭಟಿಸಿ ಕೌನ್ಸೆಲಿಂಗ್‌ನಿಂದ ದೂರ ಉಳಿದಿದ್ದರು.