ವರದಿ : ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ: ನೌಕರರು ನಡೆಸಿದ ಮುಷ್ಕರದಿಂದಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 14 ದಿನಗಳಲ್ಲಿ 66.03 ಕೋಟಿ ರೂ. ಸಾರಿಗೆ ಆದಾಯ ಖೋತಾ ಆಗಿದ್ದು, ಮುಷ್ಕರ ಮುಗಿದು ಸಹಜ ಸ್ಥಿತಿಗೆ ಬರಲಿದೆ ಎನ್ನುವುದರೊಳಗೆ ಕೊರೊನಾ ಎರಡನೇ ಅಲೆ, ಕರ್ಫ್ಯೂ ನಷ್ಟದ ಪ್ರಮಾಣ ಹೆಚ್ಚುವಂತೆ ಮಾಡಿದೆ.
ಆರ್ಥಿಕವಾಗಿ ಸಂಪೂರ್ಣ ಕುಸಿದಿರುವ ವಾಯವ್ಯ ಸಾರಿಗೆ ಸಂಸ್ಥೆ ಕಳೆದ ವರ್ಷದ ಲಾಕ್‌ಡೌನ್ ಪರಿಣಾಮ ಚೇತರಿಸಿಕೊಳ್ಳದ ಪರಿಸ್ಥಿತಿಯಲ್ಲಿದೆ. ಹೀಗಿರುವಾಗ ಸಾರಿಗೆ ನೌಕರರು ಏ.7ರಿಂದ 20ರವರೆಗೆ ನಡೆಸಿದ 14 ದಿನಗಳ ಮುಷ್ಕರದಿಂದಾಗಿ 66.03 ಕೋಟಿ ರೂ. ಸಾರಿಗೆ ಆದಾಯ ನಷ್ಟವಾಗಿದೆ. ಸಂಸ್ಥೆಯ 3380 ಬಸ್ ಗಳ ಕಾರ್ಯಾಚರಣೆಯಿಂದ ಪ್ರತಿನಿತ್ಯ 4.5-4.75 ಕೋಟಿ ರೂ. ಸಾರಿಗೆ ಆದಾಯವಿದೆ. ಮುಷ್ಕರವೇನೋ ಮುಗಿಯಿತು. ಮದುವೆ, ಸಭೆ ಸಮಾರಂಭಗಳ ಸೀಸನ್ ಇರುವುದರಿಂದ ಒಂದಿಷ್ಟು ಹೆಚ್ಚುವರಿ ಸಾರಿಗೆ ಆದಾಯ ನಿರೀಕ್ಷೆಗೆ ಕೊರೊನಾ ಎರಡನೇ ಅಲೆ ತಣ್ಣೀರು ಎರಚಿದೆ.
ಮುಷ್ಕರದ ಮೊದಲ ದಿನ ಕೇವಲ 21 ಬಸ್ ಸಂಚಾರ ಮಾಡಿದ್ದವು. ಕೆಲ ವಿಭಾಗಗಳಲ್ಲಿ ಒಂದು ಬಸ್ ಕೂಡ ಹೊರಬರಲಿಲ್ಲ. 2ನೇ ದಿನ 48, 3ನೇ ದಿನ 107, 4ನೇ ದಿನ 389 ಹೀಗೆ 14ನೇ ದಿನದಂದು 1539 (ಶೇ.45) ಬಸ್‌ಗಳು ಸಂಚಾರ ಮಾಡಿದ್ದವು. ಏ.20ರಂದು ಹೈಕೋರ್ಟ್ ಆದೇಶ ನೀಡಿದ ಪರಿಣಾಮ ಏ.21ರಂದು ಶೇ.89 ಬಸ್‌ಗಳು ಸಂಚರಿಸುವ ಮೂಲಕ ಸಾರಿಗೆ ಸೇವೆ ಸಹಜ ಸ್ಥಿತಿಗೆ ಬಂದಿತು. ಓಡಿಸಿದ್ದೇ ಹೆಚ್ಚುವರಿ ನಷ್ಟ: 14 ದಿನಗಳಲ್ಲಿ ಸಂಚಾರ ಮಾಡಿದ ಒಟ್ಟು 8458 ಬಸ್ ಗಳಿಂದ ಬಂದ ಸಾರಿಗೆ ಆದಾಯ 46.6 ಲಕ್ಷ ರೂ. ಮಾತ್ರ. ಸಾಮಾನ್ಯ ದಿನಗಳಲ್ಲಿ ಪ್ರತಿ ಕಿಮೀ ಕಾರ್ಯಾಚರಣೆಗೆ 41-42 ರೂ. ಖರ್ಚಾಗುತ್ತದೆ. ಆದರೆ ಮುಷ್ಕರದ ಸಂದರ್ಭದಲ್ಲಿ ಜನರೇ ಇಲ್ಲದೆ ಒಂದಿಷ್ಟು ಬಸ್‌ಗಳನ್ನು ಓಡಿಸಿದ ಪರಿಣಾಮ ಪ್ರತಿ ಕಿಮೀ ಕಾರ್ಯಾಚರಣೆಗೆ ಸುಮಾರು 115 ರೂ. ಖರ್ಚು ತಗುಲಿದೆ. ಈ ಕಾರ್ಯಚರಣೆಗಳಿಂದ ಸಂಸ್ಥೆಗೆ ಬರೋಬ್ಬರಿ 15.40 ಕೋಟಿ ರೂ. ನಷ್ಟವಾಗಿದೆ!
ಯಾರಿಗೆ ಕರ್ತವ್ಯ ನೀಡಬೇಕು?: ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ ಪಾಳಿಯ ಬಸ್‌ಗಳು ಬಹುತೇಕ ರದ್ದಾಗಿವೆ. ಇನ್ನೂ ಹಗಲು ವೇಳೆಯಲ್ಲಿ ಪ್ರಯಾಣಿಕರ ಸಂಖ್ಯೆ ಕೂಡ ಕಡಿಮೆಯಾಗಿದೆ. ಇದರಿಂದ ನೌಕರರಿಗೆ ಕರ್ತವ್ಯ ನಿಯೋಜನೆ ಬದಲು ರಜೆ ಹಾಕಿ ಮನೆಗೆ ಹೋಗಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಏ.7ರಿಂದ 21ರವರೆಗೆ ಕರ್ತವ್ಯ ನಿರ್ವಹಿಸಿದ ಶೇ.50 ಸಿಬ್ಬಂದಿ ಹೊರತುಪಡಿಸಿ ಉಳಿದವರಿಗೆ ಮಾರ್ಚ್ ತಿಂಗಳ ವೇತನ ಪಾವತಿಸಿಲ್ಲ. ಇದೀಗ ಕರ್ಫ್ಯೂವಿನಿಂದಾಗಿ ಪ್ರಯಾಣಿಕರ ಕೊರತೆ. ಮೇಲಾಗಿ ಶೇ.50 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಿದೆ. ಬಸ್‌ಗಳು ಕಾರ್ಯಾಚರಣೆಯಿಂದ ನಷ್ಟದ ಪ್ರಮಾಣ ಹೆಚ್ಚಾಗಲಿದೆ. ಬರುವ ಆದಾಯ ಡೀಸೆಲ್, ಬಿಡಿ ಭಾಗ ಖರೀದಿಗೆ ವೆಚ್ಚಕ್ಕೇ ಸಾಕಾಗುವುದಿಲ್ಲ. ಏಪ್ರಿಲ್ ತಿಂಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ವೇತನ ನೀಡುವುದಾದರೂ ಹೇಗೆ ಎನ್ನುವ ಪರಿಸ್ಥಿತಿ ಬಂದೊದಗಲಿದೆ ಎನ್ನುವ ಆತಂಕವಿದೆ.