ಕಾಯಿಲೆ ಬಗ್ಗೆ 66 ಜನರ ರಕ್ತ ಮಾದರಿ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ 5 ಜನರಲ್ಲಿ ಚಿಕುನ್ ಗುನ್ಯಾ ಮತ್ತು ಒಬ್ಬರಲ್ಲಿ ಮಲೇರಿಯಾ ರೋಗ ಕಾಣಿಸಿಕೊಂಡಿದೆ. ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ರೋಗ ನಿಯಂತ್ರಣದಲ್ಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಮಹಮದ್ ಗಫಾರ್ ತಿಳಿಸಿದ್ದಾರೆ.
Advertisement
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಡಕಪಳ್ಳಿಯಲ್ಲಿ ಕೆಲವು ದಿನಗಳಹಿಂದೆ ಜನರಲ್ಲಿ ಕೈಕಾಲು ನೋವು ಕಾಣಿಸಿಕೊಂಡಿತ್ತು. ಸುಲೇಪೇಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳು
ದಾಖಲಾಗುತ್ತಿರುವುದರಿಂದ ವೈದ್ಯರ ಮತ್ತು ಸಿಬ್ಬಂದಿ ತಂಡದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಮೊದಲ ದಿನ 55 ಜನರು ಹಾಗೂ ಮರು ದಿನ 11 ಜನರ ರಕ್ತ ಪರೀಕ್ಷೆ ಮಾಡಲಾಗಿದೆ.
ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಪರೀಕ್ಷೆ ಸಹ ನಡೆಸಲಾಗಿದೆ ಎಂದು ತಿಳಿಸಿದರು. ಬೆಡಕಪಳ್ಳಿಯಲ್ಲಿ 75 ಜನರ ರಕ್ತ ಲೇಪನ ಮಾಡಲಾಗಿದೆ. ಒಟ್ಟು 28 ಮನೆಗಳಿಗೆ ಭೇಟಿ ನೀಡಿ ಜನರಿಗೆ ಆರೋಗ್ಯ ತಿಳಿವಳಿಕೆ ಮತ್ತು ಸ್ವತ್ಛತೆ ಹಾಗೂ ಬಿಸಿಯೂಟ ಸೇವನೆ ಮಾಡಬೇಕು. ಅಲ್ಲದೇ ಬ್ಯಾರೆಲ್ ಮತ್ತು ನೀರಿನ ತೊಟ್ಟಿಯಲ್ಲಿ ಹೆಚ್ಚು ನೀರು ಸಂಗ್ರಹ ಮಾಡಬಾರದಂತೆ ಜಾಗೃತಿ ಮೂಡಿಸಲಾಗಿದೆ. ಗ್ರಾಮದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಧೂಮೀಕರಣ(ಫಾಗಿಂಗ್) ಮಾಡಲಾಗಿದೆ. ಗ್ರಾಮದಲ್ಲಿ ಸಮುದಾಯ ಆರೋಗ್ಯ ಸಿಬ್ಬಂದಿಗಳಾದ ಅನೀಲಕುಮಾರ, ಮಲ್ಲಿಕಾರ್ಜುನ, ಚಾಂದಪಾಶಾ, ಮಹಾದೇವಿ, ಹಿರಿಯ ಆರೋಗ್ಯ ಸಹಾಯಕಿ ಸವಿತಾ, ಗುಂಡಪ್ಪ ಸರಸ್ವತಿ ಅಲ್ಲದೇ ಆಶಾ ಕಾರ್ಯಕರ್ತೆ ಕಲ್ಲಮ್ಮ ಬಿಡಾರ ಹೂಡಿ ಚಿಕಿತ್ಸೆ ನೀಡುತ್ತಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ|ಅಂಬಾರಾಯ ರುದ್ರವಾಡಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ| ಶಿವಶರಣಪ್ಪ, ಸುಲೇಪೇಟ ಪ್ರಾಥಮಿಕ ಕೇಂದ್ರ ಆರೋಗ್ಯಾಧಿಕಾರಿ ಡಾ| ಲಕ್ಷ್ಮಣ ಜಾಧವ ಭೇಟಿ ನೀಡಿದ್ದಾರೆ. ಗ್ರಾಮದಲ್ಲಿ ಮುಂಜಾಗ್ರತಾ ಕ್ರಮ ಕೈಕೊಳ್ಳಲಾಗಿದೆ ಎಂದು ತಿಳಿಸಿದರು.