ಬೆಂಗಳೂರು: ಪ್ರವಾಸೋದ್ಯಮದಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ಮೂಲಸೌಕರ್ಯಕ್ಕೆ ಆದ್ಯತೆ ನೀಡುವ ಮೂಲಕ 2025ರ ವೇಳೆಗೆ ನೇರ ಅಥವಾ ಪರೋಕ್ಷವಾಗಿ 65 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಂ ಸೊಸೈಟಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಕರ್ನಾಟಕ ಇಂಟರ್‌ನ್ಯಾಷನಲ್ ಟ್ರಾವೆಲ್ ಎಕ್ಸ್‌ಪೋ-2019 ಉದ್ಘಾಟಿಸಿ ಅವರು ಮಾತನಾಡಿದರು. ಪ್ರವಾಸೋದ್ಯಮ ವಲಯದಲ್ಲಿ ಸದ್ಯ 18 ಲಕ್ಷ ಮಂದಿ ಉದ್ಯೋಗ ಮಾಡುತ್ತಿದ್ದಾರೆ. ಈ ಕ್ಷೇತ್ರಕ್ಕೆ ಇನ್ನಷ್ಟು ಶಕ್ತಿ ತುಂಬಿ, ಸುಸ್ಥಿರತೆ ಕಾಯ್ದುಕೊಳ್ಳುವ ಮೂಲಕ 2025ರ ವೇಳೆ 65 ಲಕ್ಷ ನೇರ ಅಥವಾ ಪರೋಕ್ಷ ಉದ್ಯೋಗ ಸೃಷ್ಟಿಸಲಿದ್ದೇವೆ ಎಂದು ಹೇಳಿದರು.
ಪ್ರವಾಸೋದ್ಯಮಕ್ಕೆ ಆದ್ಯತೆಯಾಗಿ ರಾಜ್ಯದಲ್ಲಿ 41 ಪ್ರವಾಸೋದ್ಯಮ ಅಭಿವೃದ್ಧಿ ಪ್ರದೇಶಗಳನ್ನು ಗುರುತಿಸಿದ್ದೇವೆ. ಅದರಲ್ಲಿ 20 ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾಸ್ಟರ್ ಪ್ಲಾನ್ ಸಿದ್ಧವಾಗಿದೆ. ಅಭಿವೃದ್ಧಿ ಕಾರ್ಯ ಅತಿ ಶೀಘ್ರದಲ್ಲಿ ಅನುಷ್ಠಾಗೊಳ್ಳಲಿದೆ. ವಿಶ್ವದ ಪ್ರವಾಸೋದ್ಯಮ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆಯುವ ನಿಟ್ಟಿನಲ್ಲಿ ಬೇಕಾದ ಸೌಲಭ್ಯ ಹಾಗೂ ಸಹಕಾರ ಸರ್ಕಾರದಿಂದ ನೀಡಲಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯದ ಒಟ್ಟಾರೆ ಜಿಡಿಪಿಯಲ್ಲಿ ಪ್ರವಾಸೋದ್ಯಮದ ಕೊಡುಗೆ ಶೇ.14.8ರಷ್ಟಿದೆ. ವಿಶ್ವದರ್ಜೆಯ ಪ್ರವಾಸಿ ತಾಣಗಳಾಗುವ ಎಲ್ಲ ಅರ್ಹತೆ ಕರ್ನಾಟಕಕ್ಕಿದೆ. 320 ಕಿ.ಮೀ. ವ್ಯಾಪ್ತಿಯ ಕರಾವಳಿ ಪ್ರದೇಶ, ಪಶ್ಚಿಮ ಘಟ್ಟದ ಪರ್ವತ ಶ್ರೇಣಿಗಳು, ಧಾರ್ಮಿಕ ಕೇಂದ್ರಗಳು, ಹಂಪಿ, ಪಟ್ಟದಕಲ್ಲು ಹೀಗೆ ಅನೇಕ ಐತಿಹಾಸಿಕ ಮತ್ತು ಜಗತ್ತಿನ ಪ್ರಸಿದ್ಧ ತಾಣಗಳು ಇಲ್ಲಿವೆ ಎಂದು ಬಣ್ಣಿಸಿದರು. ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ, ಸಚಿವ ಗೋವಿಂದ ಕಾರಜೋಳ, ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್, ಟೂರಿಸಂ ಸೊಸೈಟಿ ಅಧ್ಯಕ್ಷ ಕೆ.ಶ್ಯಾಮರಾಜು ಮೊದಲಾದವರು ಇದ್ದರು.
100ಕ್ಕೂ ಅಧಿಕ ಪ್ರದರ್ಶಕರು: ಕರ್ನಾಟಕದ ಸಾಹಸಿ ಸ್ಥಳಗಳು, ವನ್ಯಜೀವಿ, ಉದ್ದಿಮೆ ಉದ್ದೇಶಿತ ಪ್ರಯಾಣ, ಹೋಟೆಲ್, ಯಾತ್ರಾಸ್ಥಳ, ವಿಶ್ವ ಪಾರಂಪರಿಕ ತಾಣಗಳು ಸೇರಿ ಪ್ರವಾಸೋದ್ಯಮದ ಎಲ್ಲ ಮಾಹಿತಿಗಳು ಈ ಎಕ್ಸ್ ಪೋ ದಲ್ಲಿ ಸಿಗಲಿದೆ. 15ಕ್ಕೂ ಹೆಚ್ಚು ಪ್ರವಾಸಿ ಉದ್ದಿಮೆಗಳು, 100ಕ್ಕೂ ಅಧಿಕ ಪ್ರದರ್ಶಕರು ಭಾಗವಹಿಸಿದ್ದಾರೆ. ನಗರದ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಆ.27ಕ್ಕೆ ಮುಕ್ತಾಯಗೊಳ್ಳಲಿದೆ.