ಮುಂಬಯಿ: ಹಿರಿಯರ ದೂರ ದೃಷ್ಠಿ, ಕಠಿಣ ಪರಿಶ್ರಮ, ಸಮರ್ಪಣಾ ಭಾವದ ಸೇವೆಯಿಂದಾಗಿ ಸಂಘವು ಸದೃಢವಾಗಿ ಮುನ್ನಡೆಯುಂತಾಗಿದೆ. ಹಿರಿಯರು ಉತ್ತಮ ಭಾವನೆಗಳಿಂದ ಪ್ರಾರಂಭಿಸಿದ ಈ ಸಂಸ್ಥೆಯನ್ನು ಜನಪರ ಚಟುವಟಿಕೆಗಳೊಂದಿಗೆ ಕ್ರಿಯಾಶೀಲ ಸಂಸ್ಥೆಯನ್ನಾಗಿಸುವಲ್ಲಿ ಕಾರ್ಯಪ್ರಾಪ್ತವಾದ ಪ್ರೇಮಬಿಂದು ಕಟ್ಟಡವೂ, ಈಗ ಸುಸಜ್ಜಿತಗೊಳ್ಳುತ್ತಾ ಸಂಘಕ್ಕೆ ಹೆಚ್ಚುವರಿ ಸ್ಥಳಾವಕಾಶ ಒದಗುತ್ತಿರುವುದು ನಮ್ಮ ಹೆಮ್ಮೆಯಾಗಿದೆ. ಪ್ರಸಕ್ತ ಕಾರ್ಯಕಾರಿ ಸಮಿತಿಯಿಂದ ತಯಾರಿಸಲ್ಪಡುವ ಸುಸಜ್ಜಿತ ಸಭಾಗೃಹ, ಗ್ರಂಥಾಲಯ, ಕಚೇರಿ ಇತ್ಯಾದಿಗಳ ಫಲಾನುಭಕ್ಕೆ ನಾವೆಲ್ಲರೂ ಸಹಭಾಗಿಗಳಾಗಬೇಕು. ಸಂಸ್ಥೆಯ ಮುನ್ನಡೆಗೆ ನಮ್ಮಲ್ಲಿಯ ಯುವ ಜನತೆಯನ್ನೂ ಮುಖ್ಯವಾಹಿನಿಯ ಕಾರ್ಯಕರ್ತರಾಗಿ ರೂಪಿಸುವಂತೆ ಶ್ರಮಿಸೋಣ ಎಂದು ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ತಿಳಿಸಿದರು.
ರವಿವಾರ ಸಂಜೆ ಸಂಘದ ಬಾರ್ಕೂರು ರುಕ್ಮಿಣಿ ಶೆಟ್ಟಿ ಸ್ಮಾರಕ ಕಿರು ಸಭಾಗೃಹದಲ್ಲಿ ಗೋರೆಗಾಂವ್ ಕರ್ನಾಟಕ ಸಂಘದ 64ನೇ ವಾರ್ಷಿಕ ಮಹಾಸಭೆ ನಡೆಸಲಾಗಿದ್ದು, ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ನಿತ್ಯಾನಂದ ಕೋಟ್ಯಾನ್ ಅವರು, ಸಂಘದ 64 ವರ್ಷಗಳ ಇತಿಹಾಸದಲ್ಲಿ 22 ಮಂದಿ ಅಧ್ಯಕ್ಷರಾಗಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಇಂತಹ ನಿಸ್ವಾರ್ಥ, ಸಾರ್ಥಕ ಸೇವೆಯ ಫಲವೇ ಸಂಘದ ಮುನ್ನಡೆಯಾಗಿದೆ. ರಜತ ಮಹೋತ್ಸವದ ಸ್ಮರಣಾರ್ಥ ಸಂಘವು ಮಧುಬನದಿಂದ ಸ್ಥಳಾಂತರಗೊಂಡು ಪ್ರೇಮಬಿಂದು ಕಟ್ಟಡದಲ್ಲಿ ಕಾರ್ಯಚರಿಸಿದ ಕಾರಣ ಸಂಘದ ಸವೊìàನ್ನತಿ ಮತ್ತಷ್ಟು ಸಾಧ್ಯವಾಗಿದೆ. ಆ ಮೂಲಕ ವಿವಿಧ ವಿಭಾಗಗಳ ಅಸ್ತಿತ್ವ ಹತ್ತಾರು ಚಟುವಟಿಕೆಗಳಿಗೆ ಅವಕಾಶಗಳು ಒದಗಿ ಬಂದವು. ಆಗ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸೇವೆ ಸಲ್ಲಿಸುವ ಅವಕಾಶ ಒದಗಿದ್ದೂ ನನ್ನ ಸೌಭಾಗ್ಯ. ಸದ್ಯ ಸಂಘದ 23ನೇ ಅಧ್ಯಕ್ಷನಾಗುವ ಭಾಗ್ಯವನ್ನೂ ಒದಗಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದರು.
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ವಾಣಿ ಎಸ್.ಶೆಟ್ಟಿ, ಗೌರವ ಕೋಶಾಧಿಕಾರಿ ಆನಂದ್ ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ಸಹನಿ ಶೆಟ್ಟಿ ಮತ್ತು ಉಷಾ ಬಿ.ಶೆಟ್ಟಿ, ಜತೆ ಕೋಶಾಧಿಕಾರಿ ಸುಚಲತಾ ಪೂಜಾರಿ, ವಾಚನಾಲಯ ಮುಖ್ಯಸ್ಥೆ ವಸಂತಿ ಕೋಟೆಕಾರ್ ವೇದಿಕೆಯಲ್ಲಿ ಆಸೀನರಾಗಿದ್ದರು.
ಸಂಘದ ಪಾರುಪತ್ಯಗಾರರಾದ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಜಿ.ಟಿ ಆಚಾರ್ಯ, ಪಯ್ನಾರು ರಮೇಶ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ನಾರಾಯಣ ಆರ್.ಮೆಂಡನ್, ಗುಣೋದಯ ಎಸ್.ಐಲ್, ಪದ್ಮಜಾ ಮೆಂಡನ್, ವಿಶಾಲಕ್ಷಿ ವೂಲ್‌ವರ, ಸರಿತಾ ಕೆ.ನಾಯಕ್, ಶಿವಾನಂದ ಶೆಟ್ಟಿ, ವಿಶೇಷ ಆಮಂತ್ರಿತ ಸದಸ್ಯರುಗಳಾದ ದೇವಲ್ಕುಂದ ಭಾಸ್ಕರ್ ಶೆಟ್ಟಿ, ವಸಂತಿ ಶೆಟ್ಟಿ, ಹರೀಶ್ಚಂದ್ರ ಆಚಾರ್ಯ ಸೇರಿದಂತೆ ಸದಸ್ಯರು ಹಾಜರಿದ್ದರು.
ಸಭೆಯಲ್ಲಿ 2022-25ರ ಅವಧಿಗೆ ಪಾರುಪತ್ಯಗಾರರನ್ನಾಗಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಜಿ.ಟಿ ಆಚಾರ್ಯ, ದೇವಲ್ಕುಂದ ಭಾಸ್ಕರ್ ಶೆಟ್ಟಿ ಅವರನ್ನು ಮರುನೇಮಕ ಗೊಳಿಸಲಾಗಿದ್ದು, 2022-23ರ ಸಾಲಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಸಲಾಗಿದೆ. ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ.ಕೋಟ್ಯಾನ್ ಹಾಗೂ ಉಪಾಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಅವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು.
ಸಭಿಕರ ಪರವಾಗಿ ಪ್ರೇಮನಾಥ್ ಸುವರ್ಣ, ಪ್ರಕಾಶ್ ಶೆಟ್ಟಿ ಪೇಟೆಮನೆ ಮಾತನಾಡಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಲಹೆ ಸೂಚನೆಗಳನ್ನಿತ್ತರು.
ಸುಚಿತಾ ಶೆಟ್ಟಿ ಮತ್ತು ನಂದಿತಾ ಶೆಟ್ಟಿಗಾರ್ ಪ್ರಾರ್ಥನೆಗೈದರು. ಗೌರವ ಪ್ರಧಾನ ಕಾರ್ಯದರ್ಶಿ ವಾಣಿ ಎಸ್.ಶೆಟ್ಟಿ ಸ್ವಾಗತಿಸಿ, ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿ, ಸಂಘದ ವಾರ್ಷಿಕ ಚಟುವಟಿಗಳ ಮಾಹಿತಿಯನ್ನಿತ್ತರು. ಗೌರವ ಕೋಶಾಧಿಕಾರಿ ಆನಂದ್ ಶೆಟ್ಟಿ ಗತ ಸಾಲಿನ ಲೆಕ್ಕಪತ್ರಗಳನ್ನು ಸಭೆಯ ಮುಂದಿರಿಸಿದರು. ಜತೆ ಕಾರ್ಯದರ್ಶಿ ಸಹನಿ ಶೆಟ್ಟಿ ಕೃತಜ್ಞತೆಗೈದರು.
-ಚಿತ್ರ-ವರದಿ: ರೋನ್ಸ್ ಬಂಟ್ವಾಳ್