Advertisement
ಮುದ್ದೇಬಿಹಾಳ ತಾಲೂಕಿನ ಲೊಟಗೇರಿ ಗ್ರಾಮದ ಯಲ್ಲಾಲಿಂಗನ ಕುಟುಂಬಕ್ಕೆ ಎರಡು ಎಕರೆ ಜಮೀನಿ ಹೊರತಾಗಿ ಮತ್ತೇನೂ ಇಲ್ಲ. ಹೀಗಾಗಿ ಬದುಕಿನ ಬಂಡಿ ಎಳೆಯಲು ಯಲ್ಲಾಲಿಂಗನ ತಂದೆ ಬಸಪ್ಪ ಪತ್ನಿ ಲಕ್ಷ್ಮೀ ಜತೆ ಮಕ್ಕಳನ್ನು ಕರೆದುಕೊಂಡು ಅದೇ ತಾಲೂಕಿನ ನಾಲತವಾಡಕ್ಕೆ ಬಂದರು. ಬಾಡಿಗೆ ಮನೆಯಲ್ಲಿ ಇರುವಷ್ಟು ಆರ್ಥಿಕ ಶಕ್ತಿ ಇಲ್ಲದ ಕಾರಣ ಅನ್ಯರ ನಿವೇಶನದಲ್ಲಿ ಗುಡಿಸಲು ಹಾಕಿಕೊಂಡು ಕೂಲಿ ಜೀವನ ನಡೆಸುತ್ತಿದ್ದಾರೆ.
Related Articles
Advertisement
ಯಲ್ಲಾಲಿಂಗನಲ್ಲಿ ಇದ್ದ ಪ್ರತಿಭಾವಂತಿಕೆ ಗುರುತಿಸಿದ ಮುಖ್ಯೋಪಾಧ್ಯಾಯ ಇಸ್ಮಾಯಿಲ್ ನೇತೃತ್ವದ ಶಿಕ್ಷಕರು ಉತ್ತಮ ಮಾರ್ಗದರ್ಶನ ಮಾಡಿದರು. ಪರಿಣಾಮ ಯಲ್ಲಾಲಿಂಗ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯದ ಟಾಪರ್ ಗಳಲ್ಲಿ ಒಬ್ಬನಾಗುವ ಮೂಲಕ ಶಾಲೆಗೆ ಹಾಗೂ ಜಿಲ್ಲೆಗೂ ಕೀರ್ತಿ ತಂದಿದ್ದಾನೆ.
ನಾಗರಬೆಟ್ಟದ ಆಕ್ಸ್‌ಫರ್ಡ್ ಶಾಲೆಯಲ್ಲಿ ಶಿಕ್ಷಕರು ನೀಡುವ ಗುಣಮಟ್ಟದ ಶಿಕ್ಷಣ, ಪ್ರತಿ ಮಗುವಿನ ಬಗ್ಗೆ ತೋರುವ ಶೈಕ್ಷಣಿಕ ವಿಶೇಷ ಕಾಳಜಿ ನನ್ನ ಟಾಪರ್ ಸಾಧನೆ ಸಾಧ್ಯವಾಗಿಸಿದೆ ಎಂದು ಯಲ್ಲಾಲಿಂಗ ಸ್ಮರಿಸುತ್ತಾನೆ.
ಕುಟುಂಬದ ಬಡತನ ನೀಗಲು ಶಿಕ್ಷಣದಲ್ಲಿ ಸಾಧನೆ ಮಾಡಬೇಕೆಂದು ನಿತ್ತವೂ ರಾತ್ರಿ 3 ಗಂಟೆ ವರೆಗೆ ಓದುತ್ತಿದ್ದೆ. ಶಿಕ್ಷಕರು ತಡರಾತ್ರಿ ಸಂದರ್ಭದಲ್ಲೂ ನನ್ನ ಸಮಸ್ಯೆಗೆ ಪರಿಹಾರ ಸೂಚಿಸುತ್ತಿದ್ದರು. ಶಾಲೆಯ ಆಡಳಿತ ಮಂಡಳಿಯವರು ಶುಲ್ಕಕ್ಕೆ ಪೀಡಿಸದೇ ಸಹಕರಿಸಿದರು. ಹೀಗಾಗಿ ಸತತ ಪರಿಶ್ರಮದಿಂದ ಓದಿದಕ್ಕೆ ಟಾಪರ್ ಆಗಲು ಸಾಧ್ಯವಾಯ್ತು ಎಂದು ಯಲ್ಲಾಲಿಂಗ ತನಗೆ ಸಹಾಯ ನೀಡಿದವರನ್ನು ನೆನೆಯುತ್ತಾನೆ.ಎಂಜಿನಿಯರ್ ಆಗುವ ಕನಸು ಕಂಡಿರುವ ಯಲ್ಲಾಲಿಂಗ ಅದೇ ಸಂಸ್ಥೆಯ ವಿಜ್ಞಾನ ಕಾಲೇಜಿನಲ್ಲಿ ಪ್ರವೇಶಕ್ಕೆ ಮುಂದಾಗಿದ್ದಾನೆ. ಊರ ಜಾತ್ರೆಗಾಗಿ ಗೋವಾದಿಂದ ತವರಿಗೆ ಮರಳಿರುವ ಬಸಪ್ಪ ಸುಳಿಭಾವಿ, ಮಗ ಯಲ್ಲಾಲಿಂಗನ ಸಾಧನೆಯ ಸಂಭ್ರಮದಲ್ಲಿ ಬಡತನದ ನೋವು ಮರೆತಿದ್ದಾರೆ. ದುಡಿಮೆಯ ಬೆವರಿನ ಪರಿಶ್ರಮಕ್ಕೆ ಮಗ ತಕ್ಕ ಪ್ರತಿಫಲ ತಂದುದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.