ರಾಜಸ್ಥಾನ: ಕಲಿಕೆಗೆ ವಯಸ್ಸಿನ ಹಂಗಿಲ್ಲ ಎಂಬುದಕ್ಕೆ ರಾಜಸ್ಥಾನದ ಬಿಜೆಪಿ ಎಂಎಲ್ಎ ಫೋಲ್ ಸಿಂಗ್ ಮೀನಾ ಸಾಕ್ಷಿಯಾಗಿದ್ದಾರೆ. ಉದಯ್‍ಪುರ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಎಂಎಲ್ಎ ಆಗಿ ಆಯ್ಕೆಯಾಗಿರುವ ಫೂಲ್ ಸಿಂಗ್ ತಮ್ಮ 62 ನೇ ವಯಸ್ಸಿನಲ್ಲಿ ‘ಬಿಎ’ ಪದವಿಯ ಪರೀಕ್ಷೆ ಬರೆದು ಗಮನ ಸೆಳೆದಿದ್ದಾರೆ.
ತಂದೆ ತೀರಿದ ಬಳಿಕ 7ನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿದ ಫೂಲ್ ಸಿಂಗ್, ಮನೆಯ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರಿಂದ ಶಿಕ್ಷಣ ಮುಂದುವರೆಸಲು ಸಾಧ್ಯವಾಗುವುದಿಲ್ಲ. ಜೀವನದಲ್ಲಿ ಹಲವು ಏಳು ಬೀಳುಗಳ ನಡುವೆ ರಾಜಕೀಯದಲ್ಲಿ ಭದ್ರ ನೆಲೆ ಕಂಡುಕೊಂಡ ಫೂಲ್ ಇದೀಗ ರಾಜಕೀಯ ಶಾಸ್ತ್ರದಲ್ಲಿ ಪದವಿ ಪಡೆಯುತ್ತಿದ್ದಾರೆ.
ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ನನ್ನ ಹೆಣ್ಣುಮಕ್ಕಳಿಂದ ಪ್ರೇರಣೆಗೊಂಡು ಮತ್ತೆ ಶಿಕ್ಷಣ ಪಡೆಯುತ್ತಿದ್ದೇನೆ. ಕೇವಲ 7 ನೇ ತರಗತಿ ಪಾಸು ಮಾಡಿ ರಾಜಕೀಯದಲ್ಲಿರುವ ನಿಮಗೆ ಮುಜುಗರ ಎನ್ನಿಸುವುದಿಲ್ಲವೇ ? ಎಂದು ನನ್ನ 5 ಜನ ಹೆಣ್ಣು ಮಕ್ಕಳು ಪ್ರಶ್ನಿಸಿದರು. ಅವರೇ ಉದಯ್ ಪುರ್ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣ ಪಡೆಯಲು ಅರ್ಜಿ ಸಲ್ಲಿಸಿದರು. 2013 ರಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಮುಂದಾದೆ, ಆದರೆ, ಅದು ಚುನಾವಣೆ ಸಮಯವಾಗಿತ್ತು. ಪಕ್ಷದಿಂದ ನನಗೆ ಟಿಕೆಟ್ ಸಿಕ್ಕಿದ್ದರಿಂದ ಎರಡು ವಿಷಯಗಳ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. 2015 ರಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆದು ಉತ್ತೀರ್ಣಗೊಂಡೆ. 2016-2017 ರಲ್ಲಿ ಪಿಯುಸಿ ಪಾಸಾದೆ. ನಂತರ 2018-2019 ರಲ್ಲಿ ‘ಬಿಎ’ ಪ್ರವೇಶ ಪಡೆದು, ಇದೀಗ ಅಂತಿಮ ವರ್ಷದ ಪರೀಕ್ಷೆ ಬರೆಯುತ್ತಿದ್ದೇನೆ. ಇದಕ್ಕೆಲ್ಲ ಕಾರಣ ನನ್ನ ಹೆಣ್ಣು ಮಕ್ಕಳು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಫೂಲ್ ಸಿಂಗ್.