Advertisement

ಡೇಟಿಂಗ್‌ ವೆಬ್‌ಸೈಟ್‌ನಲ್ಲಿ 62 ಲಕ್ಷ ರೂ. ವಂಚನೆ

11:53 AM Jun 27, 2018 | Team Udayavani |

ಬೆಂಗಳೂರು: ಶಾದಿ ಡಾಟ್‌ ಕಾಮ್‌ ಮತ್ತು ಡೇಟಿಂಗ್‌ ವೆಬ್‌ಸೈಟ್‌ಗಳಿಗೆ ಭೇಟಿ ಕೊಡುವ ಮೊದಲು ಸ್ವಲ್ಪ ಎಚ್ಚರಿಕೆ ವಹಿಸಿ. ಇಲ್ಲವಾದರೆ ಲಕ್ಷಾಂತರ ರೂ. ಕಳೆದುಕೊಳ್ಳಬೇಕಾಗುತ್ತದೆ.

Advertisement

ಇದಕ್ಕೆ ತಾಜಾ ಉದಾಹರಣೆ ಎಂದರೆ ಬೆಂಗಳೂರಿನ ಸಾಫ್ಟ್ವೇರ್‌ ಎಂಜಿನಿಯರ್‌ ಒಬ್ಬರಿಗೆ ವೈದ್ಯೆ, ಶಿಕ್ಷಕಿ ಎಂದು ಪರಿಚಯಿಸಿಕೊಂಡ ಪಶಿrಮ ಬಂಗಾಳದ ಮಹಿಳೆಯೊಬ್ಬರು ಬರೋಬರಿ 62 ಲಕ್ಷ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಕೋಲ್ಕತ್ತದ ರೂಪಾಲಿ ಮಜುಂದಾರ್‌ (39) ಹಾಗೂ ಕೃತ್ಯಕ್ಕೆ ಸಹಾಯಕ ಮಾಡಿದ ಆಕೆಯ ಪತಿ ಹಾಗೂ ಬಂಗಾಳಿ ಕಿರುತೆರೆ ನಟ ಕುಶನ್‌ ಮಜುಂದಾರ್‌ (48) ನನ್ನು ಸಿಐಡಿ ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳಿಂದ 44 ಸಾವಿರ ರೂ. ನಗದು, ಎರಡು ಮೊಬೈಲ್‌, ಕೆಲ ಬ್ಯಾಂಕ್‌ ಖಾತೆಗಳ ಪಾಸ್‌ ಪುಸ್ತಕಗಳನ್ನು ವಶಕ್ಕೆ ಪಡೆಯಲಾಗಿದೆ.

2017ರಲ್ಲಿ ಮಿಂಗಲ್‌ ಟು.ಡಾಟ್‌ ಕಾಮ್‌ ಎಂಬ ಡೇಟಿಂಗ್‌ ವೆಬ್‌ಸೈಟ್‌ ಮೂಲಕ ಅರ್ಪಿತಾ ಎಂಬ ಹೆಸರಿನಿಂದ ನಗರದ ಶ್ರೀನಾಥ್‌ ಎಂಬ ಸಾಫ್ಟ್ವೇರ್‌ ಯುವಕನನ್ನು ಪರಿಚಯಸಿಕೊಂಡಿದ್ದ ರೂಪಾಲಿ, ಪೋಷಕರಿಗೆ ಅನಾರೋಗ್ಯವಾಗಿದೆ ಎಂದು ಹೇಳಿ ಹಂತ-ಹಂತವಾಗಿ 62 ಲಕ್ಷ ರೂ. ಹಣ ಪಡೆದುಕೊಂಡಿದ್ದರು.

ರೂಪಾಲಿ ಮಜುಂದಾರ್‌ ಬಿ.ಕಾಂ ಪದವಿಧರೆಯಾಗಿದ್ದು, ಕೆಲ ವರ್ಷಗಳ ಹಿಂದೆ ಕುಶನ್‌ ಮಜುಂದಾರ್‌ನನ್ನು ವಿವಾಹವಾಗಿದ್ದಾರೆ. 2009ರಿಂದ ದಂಪತಿ ಯಾವುದೇ ನಿರ್ದಿಷ್ಟವಾದ ಕೆಲಸಕ್ಕೆ ಹೋಗುತ್ತಿರಲಿಲ್ಲ. ಈ ಮಧ್ಯೆ ರೂಪಾಲಿ ಮಿಂಗಲ್‌ ಟು.ಡಾಟ್‌ ಕಾಮ್‌ ಎಂಬ ಡೇಟಿಂಗ್‌ ವೆಬೈಸೈಟ್‌ನಲ್ಲಿ ನೋಂದಣಿಯಾಗಿದ್ದಾರೆ.

Advertisement

ಬಳಿಕ ಗೂಗಲ್‌ನಿಂದ ಡೌನ್‌ಲೋಡ್‌ ಮಾಡಿಕೊಂಡ ಮಾಡೆಲ್‌ಗ‌ಳ ಫೋಟೋಗಳನ್ನು ತನ್ನ ಖಾತೆಗೆ ಹಾಕಿ ಅಮಾಯಕ ವ್ಯಕ್ತಿಗಳನ್ನು “ವೈದ್ಯೆ ಮತ್ತು ಶಿಕ್ಷಕಿ’ ಹೆಸರಿನಲ್ಲಿ ಪರಿಚಯಿಸಿಕೊಂಡು ಹತ್ತಾರು ಮಂದಿಗೆ ವಂಚಿಸಿದ್ದಾರೆ. ಐಷಾರಾಮಿ ಜೀವನಕ್ಕಾಗಿ ಕೃತ್ಯವೆಸಗಿರುವುದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಸೈಬರ್‌ ಕ್ರೈಂ ಪೊಲೀಸರು ತಿಳಿಸಿದ್ದಾರೆ.

ಏಳು ತಿಂಗಳಿಗೆ 62 ಲಕ್ಷ ವಂಚನೆ: ಬೆಂಗಳೂರಿನ ಶ್ರೀನಾಥ್‌ರನ್ನು ವೆಬ್‌ಸೈಟ್‌ ಮೂಲಕ ಅರ್ಪಿತಾ ಎಂಬ ಹೆಸರಿನಲ್ಲಿ ಪರಿಚಯಸಿಕೊಂಡ ರೂಪಾಲಿ, ಆರಂಭದಲ್ಲಿ ಕೊಲ್ಕತ್ತಾದಲ್ಲಿ ಶಿಕ್ಷಕಿಯಾಗಿದ್ದೇನೆ. ಉತ್ತಮ ಸಂಬಳ ಬರುತ್ತಿದ್ದು, ಮನೆ ಕಡೆಯೂ ಆರ್ಥಿಕವಾಗಿ ಸಬಲವಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಇದನ್ನು ನಂಬಿದ ಶ್ರೀನಾಥ್‌ ತಮ್ಮ ಮೊಬೈಲ್‌ ನಂಬರ್‌ ಕೊಟ್ಟಿದ್ದು, ಇಬ್ಬರು ವಾಟ್ಸ್‌ಆ್ಯಪ್‌ ಚಾಟಿಂಗ್‌ ಮುಂದುವರಿಸಿದ್ದಾರೆ. ಕೆಲ ದಿನಗಳ ಬಳಿಕ ತನ್ನ ತಂದೆ ಅನಾರೋಗ್ಯವಾಗಿದ್ದು, ಇಲ್ಲಿನ ಟಾಟಾ ಬಿರ್ಲಾ ಹಾರ್ಟ್‌ ಸೆಂಟರ್‌ ಎಂಬ ಆಸ್ಪತ್ರೆಗೆ ದಾಖಲಿಸಿದ್ದೇನೆ.

ಚಿಕಿತ್ಸೆಗಾಗಿ ಲಕ್ಷಾಂತರ ರೂ. ಹಣ ಬೇಕಾಗಿದೆ ಎಂದು ಕೇಳಿಕೊಂಡಿದ್ದಾರೆ. ಇದನ್ನು ನಂಬಿದ ಶ್ರೀನಾಥ್‌ ರೂಪಾಲಿ ಖಾತೆಗೆ ಮೊದಲಿಗೆ 30 ಲಕ್ಷ ರೂ. ನಂತರ 18 ಲಕ್ಷ ರೂ. ಹೀಗೆ ನಾಲ್ಕೈದು ಹಂತದಲ್ಲಿ ಒಟ್ಟು 62 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ.

ಅನಂತರ ಕರೆ ಮಾಡಿದರೆ ಮೊಬೈಲ್‌ ಸ್ವಿಚ್‌ ಆಫ್ ಆಗಿದೆ. ಇದರಿಂದ ಆತಂಕಗೊಂಡ ಶ್ರೀನಾಥ್‌ ಮಿಂಗಲ್‌ ಟು.ಡಾಟ್‌ ಕಾಮ್‌ನಲ್ಲಿ ಆಕೆಯ ಖಾತೆ ಪರಿಶೀಲಿಸಿದಾಗ ವಂಚನೆಗೊಳ್ಳಗಾಗಿರುವುದು ತಿಳಿದು ಬಂದಿದೆ. ಸೈಬರ್‌ ಕ್ರೈಂ ಇನ್ಸ್‌ಪೆಕ್ಟರ್‌ ಆನಂದ್‌ ನೇತೃತ್ವದ ತಂಡ ಪಶ್ಚಿಮ ಬಂಗಾಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಸಿಐಡಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ಕಿರುತೆರೆ ನಟ: ರೂಪಾಲಿ ಪತಿ ಕುಶನ್‌ ಆಟೋ ಮೊಬೈಲ್‌ ಇಂಜಿನಿಯರಿಂಗ್‌ ಡಿಪ್ಲೋಮಾ ಪದವೀಧರ. ವಿವಿಧ ಬ್ಯಾಂಕ್‌ಗಳಲ್ಲಿ ಮಾರುಕಟ್ಟೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಜತೆಗೆ ಬಂಗಾಳಿ ಧಾರಾವಾಹಿಗಳಲ್ಲಿ ನಟನೆ ಮಾಡುತ್ತಿದ್ದ. ನಂತರ ಆ ಕೆಲಸ ಬಿಟ್ಟು ಐದು ವರ್ಷಗಳಿಂದ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ.

ಪತ್ನಿಯ ವಂಚನೆ ಕೃತ್ಯಕ್ಕೆ ನೇರವಾಗಿ ಸಹಕಾರ ನೀಡುತ್ತಿದ್ದ. ಶ್ರೀನಾಥ್‌ನಿಂದ ವರ್ಗಾವಣೆಗೊಂಡ 62 ಲಕ್ಷ ರೂ.ನಲ್ಲಿ 47 ಲಕ್ಷ ರೂ. ಹಣ ತನ್ನ ಖಾತೆಗೆ ಜಮೆ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next