Advertisement

ಸುಗಂಧ ದ್ರವ್ಯದ ಜತೆ ಬಂತು 61ಕೆ.ಜಿ ಗಾಂಜಾ!

09:56 AM Sep 06, 2019 | Suhan S |

ಬೆಂಗಳೂರು: ಗಾಂಜಾ ಸರಬರಾಜು ದಂಧೆಯ ಅಂತಾರಾಜ್ಯ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಕೇಂದ್ರ ಅಪರಾಧ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ತಮಿಳುನಾಡಿನ ಸೌಂದರ್‌ (29) ಬಂಧಿತ. ಆರೋಪಿಯಿಂದ ಮೂವತ್ತು ಲಕ್ಷ ರೂ. ಮೌಲ್ಯದ 61 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಸೌಂದರ್‌ನಿಂದ ಗಾಂಜಾ ತರಿಸಿಕೊಳ್ಳುತ್ತಿದ್ದ ಮತ್ತೂಬ್ಬ ಆರೋಪಿ ರೈಸ್‌ ರಜಾಕ್‌ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸೌಂದರ್‌ನಿಂದ ಗಾಂಜಾ ಇರಿಸುತ್ತಿದ್ದ ರಜಾಕ್‌, ಅದನ್ನು ಯಾರಿಗೆ ಹಂಚುತ್ತಿದ್ದ, ದಂಧೆಯಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೌಂದರ್‌ ತಮಿಳುನಾಡು, ಕೇರಳ, ಕರ್ನಾಟಕಕ್ಕೆ ಆಂಧ್ರದಿಂದ ಗಾಂಜಾ ಸರಬರಾಜು ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಕಳೆದ ವರ್ಷ ತಮಿಳುನಾಡಿಗೆ 106 ಕೆ.ಜಿ ಗಾಂಜಾ ಸರಬರಾಜು ಮಾಡುವಾಗ ವೆಲ್ಲೂರು ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದ. ಈ ವೇಳೆ ಗಾಂಜಾ ಸರಬರಾಜು ಪ್ರಕರಣದಲ್ಲಿ ಅದೇ ಜೈಲಿನಲ್ಲಿದ್ದ ಬೆಂಗಳೂರಿನ ರಜಾಕ್‌ ಪರಿಚಿತನಾಗಿದ್ದ. ನವೆಂಬರ್‌ನಲ್ಲಿ ಜೈಲಿನಿಂದ ಬಿಡುಗಡೆಗೊಂಡಿದ್ದ ಇಬ್ಬರೂ, ಪುನಃ ಅಂತಾರಾಜ್ಯ ಗಾಂಜಾ ಸರಬರಾಜು ದಂಧೆಯಲ್ಲಿ ತೊಡಗಿಸಿಕೊಂಡಿದ್ದರು.

ಗುರುವಾರ ಆರೋಪಿ ಸೌಂದರ್‌ ಕಾರಿನಲ್ಲಿ ಗಾಂಜಾ ತೆಗೆದುಕೊಂಡು ಬರುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಎಸಿಪಿ ವೆಂಕಟೇಶ ಪ್ರಸನ್ನ, ಇನ್ಸ್‌ಪೆಕ್ಟರ್‌ಗಳಾದ ನಾರಾಯಣ ಗೌಡ, ಆಯಿಷಾ ಮತ್ತಿತರ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡ ಮಡಿವಾಳದಲ್ಲಿ ಕಾರ್ಯಾಚರಣೆ ನಡೆಸಿ ಗಾಂಜಾ ಸಮೇತ ಆರೋಪಿಯನ್ನು ಬಂಧಿಸಿದೆ.

Advertisement

ಸುಗಂಧ ದ್ರವ್ಯದ ಜತೆ ಗಾಂಜಾ: ರೈಸ್‌ ರಜಾಕ್‌ ಸೂಚನೆ ಮೇರೆಗೆ ರಾಜಮಂಡ್ರಿಯಲ್ಲಿ 61 ಕೆ.ಜಿ ಗಾಂಜಾ ತೆಗೆದುಕೊಂಡಿದ್ದ ಆರೋಪಿ ಸೌಂದರ್‌, ಅದನ್ನು ಪ್ಯಾಕೆಟ್‌ಗಳಲ್ಲಿ ತುಂಬಿ ಕಾರಿನಲ್ಲಿ ತುಂಬಿಸಿಕೊಂಡು ತಾನೇ ಕಾರು ಚಾಲನೆ ಮಾಡಿಕೊಂಡು ಬರುತ್ತಿದ್ದ. ಟೋಲ್ ಗೇಟ್‌ಗಳಲ್ಲಿ ಹಾಗೂ ಪೊಲೀಸರಿಗೆ ಸಿಕ್ಕಿಬೀಳಬಾರದು ಎಂದು ಕಾರಿನ ನಂಬರ್‌ ಪ್ಲೇಟ್‌ಗಳನ್ನು ಬದಲಿಸುತ್ತಿದ್ದ. ಗಾಂಜಾದ ವಾಸನೆ ಬಾರದಂತೆ ಕಾರಿನ ತುಂಬಾ ಘಮಘಮಿಸುವ ಸುಗಂಧದ್ರವ್ಯ ಸಿಂಪಡಿಸಿದ್ದ ಎಂದು ಪೊಲೀಸರು ಹೇಳಿದರು.

ಆಂಧ್ರದಲ್ಲಿ ಐದು ಸಾವಿರ, ಇಲ್ಲಿ 50 ಸಾವಿರ: ಆಂಧ್ರದ ವಿಶಾಖಪಟ್ಟಣ ಹಾಗೂ ರಾಜಮಂಡ್ರಿಯಲ್ಲಿ ಒಂದು ಕೆ.ಜಿ ಗಾಂಜಾಗೆ ಐದು ಸಾವಿರ ರೂ. ನೀಡಿ ಖರೀದಿಸುತ್ತಿದ್ದ ಆರೋಪಿ, ಬೆಂಗಳೂರಿನಲ್ಲಿ ಅದನ್ನು 50 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಅಧಿಕಾರಿ ಹೇಳಿದರು.

ಸುದ್ದಗುಂಟೆ ಪಾಳ್ಯ ಠಾಣೆ ಪೊಲೀಸರ ಕಾರ್ಯಾಚರಣೆ:

ಮತ್ತೂಂದು ಪ್ರಕರಣದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆಂಧ್ರ ಮೂಲದ ಇಬ್ಬರು ಸೇರಿ ಮೂವರು ಆರೋಪಿಗಳನ್ನು ಸುದ್ದ ಗುಂಟೆ ಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಶಾಖಪಟ್ಟಣ ಮೂಲದ ಗಂಗಾಧರ್‌ ಗುಲ ಪಲ್ಲಿ (22) ಸಾರಥಿ ಜಿತೇಂದ್ರ (27) ಗೊರಗುಂಟೆ ಪಾಳ್ಯದ ಸಿರಾಜುದ್ದೀನ್‌ (34) ಬಂಧಿತರು.

ಮೂವರು ಆರೋಪಿಗಳು ಸೆ.1ರಂದು ಬೆಳಗ್ಗೆ 11 ಗಂಟೆಗೆ ಮುಖ್ಯರಸ್ತೆಯಲ್ಲಿ ಗಾಂಜಾ ಮಾರುತ್ತಿ ರುವ ಬಗ್ಗೆ ದೊರೆತ ಮಾಹಿತಿ ಆಧರಿಸಿ ಪಿಎಸ್‌ಐ ಪ್ರಭುಗೌಡ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಆರೋಪಿಗಳ ಬಳಿ ಕೊರಿಯರ್‌ ಕವರ್‌ನಲ್ಲಿಟ್ಟಿದ್ದ 18 ಲಕ್ಷ ರೂ. ಮೌಲ್ಯದ 6 ಕೆ.ಜಿ ಗಾಂಜಾ ಜಪ್ತಿ ಮಾಡಿಕೊಂಡಿದೆ. ಈ ಕುರಿತು ತನಿಖೆ ಮುಂದು ವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next