Advertisement

61ದಿನ ಯಾಂತ್ರಿಕ ಮೀನುಗಾರಿಕೆ ಸ್ಥಗಿತ

02:11 PM Jun 01, 2019 | Team Udayavani |

ಹೊನ್ನಾವರ: ಇಂದಿನಿಂದ ಜು.31ರವರೆಗೆ 61ದಿನಗಳ ಕಾಲ ಸಮುದ್ರದಲ್ಲಿ ಯಾಂತ್ರಿಕ ಮೀನುಗಾರಿಕೆ ಸ್ಥಗಿತವಾಗಲಿದೆ. ಕೇವಲ 2-10ಅಶ್ವಶಕ್ತಿಯ ನಾಡದೋಣಿಗಳನ್ನು ಬಳಸಿ ಮೀನುಗಾರಿಕೆ ಮಾಡಲು ಪರವಾನಗಿ ಇದೆ. ಕಳೆದ 3ತಿಂಗಳಿಂದ ಮೀನಿಗೆ ಬರ ಬಂದ ಕಾರಣ ಮೀನುಗಾರಿಕೆ ಕಡಿಮೆಯಾಗಿತ್ತು. ಇಂದು ಸ್ಥಗಿತವಾಗಬೇಕಾಗಿದ್ದ ಮೀನುಗಾರಿಕೆ ತಿಂಗಳು ಮೊದಲೇ ಕಡಿಮೆಯಾಗಿತ್ತು. ಬೋಟ್‌ಗಳನ್ನು ದಡ ಸೇರಿಸಿ ಮೀನುಗಾರರು ಬಲೆ ದುರಸ್ತಿ ಮತ್ತು ಲಾಂಚ್ ದುರಸ್ತಿ ಆರಂಭಿಸಿದ್ದರು.

Advertisement

18-20ಸಾವಿರ ಮೆಟ್ರಿಕ್‌ ಟನ್‌ ಮೀನು ಸಂಗ್ರಹವಾಗಬೇಕಿದ್ದ ಹೊನ್ನಾವರ ಕಾಸರಕೋಡ ಮೀನುಗಾರಿಕಾ ಬಂದರಿನಲ್ಲಿ ಕಳೆದ ವರ್ಷ 18ಸಾವಿರ ಮೆಟ್ರಿಕ್‌ ಟನ್‌ ಸಂಗ್ರಹವಾಗಿತ್ತು, ಈ ವರ್ಷ ಇನ್ನೂ ಕುಸಿದಿದೆ. ಹೊನ್ನಾವರ ಭಾಗದಲ್ಲಿ ಹೆಚ್ಚಾಗಿ ಬರುತ್ತಿದ್ದ ತರ್ಲೆ ಮೀನಿಗೆ ಬರಗಾಲ ಬಂದಿತ್ತು. ಇಲ್ಲಿಂದ ಟ್ರಾಲರ್‌, ಪರ್ಸಿನ್‌ ಸೇರಿ ವಿವಿಧ ವರ್ಗದ 200ಕ್ಕೂ ಹೆಚ್ಚು ಬೋಟ್‌ಗಳು ಕಾರ್ಯಾಚರಿಸುತ್ತಿದ್ದವು. ಮೀನುಗಾರಿಕಾ ಬಂದರಿನ ಕಾಮಗಾರಿ ಎಂದಿನಂತೆ ಮುಂದುವರಿದಿದೆ ಎಂದು ಬಂದರು ಇಲಾಖೆಯ ಇಂಜಿನಿಯರ್‌ ತಾರಕೇಶ ಫಾಯ್ದೆ ಹೇಳಿದ್ದಾರೆ. ಮೀನಿನ ಆವಕಕ್ಕೆ ಹಲವು ಕಾರಣಗಳಿದ್ದು ಮೀನುಗಾರರು ಸಮುದ್ರದಲ್ಲಿ ಮೀನು ಸಂತತಿ ಉಳಿದು, ಬೆಳೆಯಲು ಕಾಳಜಿ ವಹಿಸಬೇಕಾಗಿದೆ ಎಂದು ಇಲಾಖೆಯ ಅಧಿಕಾರಿ ಚಳ್ಳಜ್ಜಿಮನೆ ಹೇಳಿದ್ದು ಮೀನು ಸಂತತಿ ಬೆಳೆಯಲು ಬಿಡುವು ನೀಡಿದರೆ ಮುಂದಿನ ಹಂಗಾಮಿನಲ್ಲಿ ಚೆನ್ನಾಗಿ ಬರಬಹುದು ಎಂದು ಹೇಳಿದರು.

ಇಲಾಖೆಯಿಂದ 4ಚಕ್ರ ವಾಹನ ಕೊಳ್ಳಲು 3ಜನರಿಗೆ, 1 ಬಲೆಗೆ, 21 ಇಂಜಿನ್‌ ಕೊಳ್ಳಲು ಸಹಾಯಧನ ನೀಡಲಾಗಿದೆ. ಈ ವರ್ಷವೂ ಮೀನುಗಾರರಿಗೆ ವಸತಿ ನಿರ್ಮಿಸಲು ಪರವಾನಗಿ ಬಂದಿದೆ. ನೀಲಿಕ್ರಾಂತಿ ಯೋಜನೆ ಅನ್ವಯ ಹಲವು ಯೋಜನೆಗಳು ಮೀನುಗಾರರಿಗೆ ಪ್ರಯೋಜನ ತರಲಿದೆ ಎಂದು ಇಲಾಖೆಯ ಅಧಿಕಾರಿ ತಿಮ್ಮಪ್ಪ ಹೇಳಿದ್ದಾರೆ.

ಬಂದರು ಪ್ರದೇಶದ ಭೂಮಿ ಮತ್ತು ಅಳವೆಯನ್ನು ಗುತ್ತಿಗೆ ಪಡೆದ ಹೊನ್ನಾವರ ಪೋರ್ಟ್‌ ಕಂಪನಿ ನಿರ್ಮಾಣ ಕಾಮಗಾರಿ ಆರಂಭಿಸಿದೆ. ವಾಣಿಜ್ಯ ಬಂದರು ನಿರ್ಮಾಣದಿಂದ ಮೀನುಗಾರಿಕೆ ಭವಿಷ್ಯ ಏನಾದೀತು ಎಂದು ಮೀನುಗಾರರು ಚಿಂತಿತರಾಗಿದ್ದಾರೆ. ನೇರ ಮತ್ತು ಪರ್ಯಾಯವಾಗಿ ನಾಲ್ಕೈದು ಸಾವಿರ ಜನಕ್ಕೆ ಉದ್ಯೋಗ ನೀಡಿದ ಹೊನ್ನಾವರ ಮೀನುಗಾರಿಕಾ ಬಂದರಿನ ನಿತ್ಯ ಚಟುವಟಿಕೆಗಳು ಬಹುಪಾಲು ಸ್ಥಗಿತವಾಗಿದೆ. ಯಾವುದೇ ಅಪಘಾತ, ಹೆಚ್ಚಿನ ಹಾನಿ ಇಲ್ಲದೆ ಮೀನುಗಾರಿಕಾ ಹಂಗಾಮು ಮುಗಿದಿದೆ. ಮೀನುಗಾರ ಕುಟುಂಬಗಳಲ್ಲಿ ಮದುವೆ ಹಂಗಾಮು ಆರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next