Advertisement

Karnataka ರಾಜ್ಯದ ಮೊದಲ ಸೈನಿಕ ಶಾಲೆಗೆ 60ರ ಸಂಭ್ರಮ

11:23 PM Jul 17, 2023 | Team Udayavani |

ರಾಜ್ಯದ ಮೊದಲ ಸೈನಿಕ ಶಾಲೆಗೆ ಈಗ 60ರ ಹರೆಯ. ವಿಜಯಪುರದಲ್ಲಿ ಆರಂಭವಾದ ಈ ಶಾಲೆ ಹಲವು ಮೈಲುಗಲ್ಲುಗಳಿಗೆ ಸಾಕ್ಷಿಯಾಗಿದೆ. ನೂರಾರು ವೀರ ಯೋಧರ ಸೃಷ್ಟಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಕ್ಷರದ ಜತೆಗೆ ಶಿಸ್ತು, ಕಠಿನ ಶ್ರಮ, ಏಕತೆ, ದೇಶಾಭಿಮಾನದ ಪಾಠ ಮಾಡಲಾಗುತ್ತದೆ. ಹಲವು ಸಮರ ಕಲೆಗಳನ್ನು ಶಾಲಾ ಹಂತದಲ್ಲೇ ಕರಗತ ಮಾಡಲಾಗುತ್ತದೆ. ಸೈನಿಕ ಶಾಲೆಯ ರೋಚಕತೆಯ ವಿವರ ಇಲ್ಲಿದೆ.

Advertisement

ಸೈನಿಕ ಶಾಲೆ ಹುಟ್ಟಿದ್ದು ಹೇಗೆ?
ಸೈನಿಕ ಶಾಲೆ ಎಂಬ ಪರಿಕಲ್ಪನೆ ಹುಟ್ಟಿದ್ದೇ ಒಂದು ರೋಚಕ. ಸ್ವಾತಂತ್ರ್ಯ ಅನಂತರ ಸಶಕ್ತ ಸೈನಿಕರನ್ನು ರೂಪಿಸಲು ಚಿಂತನೆ ಹೊಂದಿದ್ದ ಆಗಿನ ರಕ್ಷಣ ಸಚಿವ ವೆಂಗಲಿಲ ಕೃಷ್ಣನ್‌ ಮೆನನ್‌ ಸೈನಿಕ ಶಾಲೆ ಆರಂಭಿಸುವ ಕಲ್ಪನೆ ಹರಿಬಿಟ್ಟರು. ಇದಕ್ಕಾಗಿಯೇ 1961ರಲ್ಲಿ ರಕ್ಷಣ ಇಲಾಖೆ ಅಧೀನದಲ್ಲಿ ಸೈನಿಕ ಶಾಲಾ ಸಂಸ್ಥೆ ಸ್ಥಾಪಿಸಿದರು. ಅಲ್ಲದೇ ಅದೇ ವರ್ಷ ದೇಶದ ಮೊಟ್ಟ ಮೊದಲ ಸೈನಿಕ ಶಾಲೆಯನ್ನು ಮಹಾರಾಷ್ಟ್ರದ ಸತಾರದಲ್ಲಿ ಆರಂಭಿದಸಿದರು. ಅನಂತರ ಎರಡೇ ವರ್ಷದಲ್ಲಿ ರಾಷ್ಟ್ರದ ಹಲವು ರಾಜ್ಯಗಳಲ್ಲಿ 12 ಸೈನಿಕ ಶಾಲೆ ಆರಂಭಿಸಿದರು. ವಿಜಯಪುರ ಸೇರಿ ಈಗ ದೇಶಾದ್ಯಂತ ಒಟ್ಟು 13 ಸೈನಿಕ ಶಾಲೆಗಳಿವೆ.

ಯಾರು ಈ ಕೃಷ್ಣ ಮೆನನ್‌?
ಕೇರಳ ಮೂಲದ ಕೃಷ್ಣ ಮೆನನ್‌ ವಿದೇಶಾಂಗ ನಿಪುಣ, ಶ್ರೇಷ್ಠ ರಾಜನೀತಿ ತಜ್ಞ. ಸ್ವತಂತ್ರ ಭಾರತದ ಇಂಗ್ಲೆಂಡ್‌ನ‌ ಹೈಕಮಿಷನರ್‌ ಆಗಿದ್ದರು. ಈ ವೇಳೆ ಅವರು ಸಂಬಳ ಪಡೆಯದೇ ಕೇವಲ ಒಂದೇ ಒಂದು ರೂ. ಸಾಂಕೇತಿಕ ಗೌರವ ಧನ ಪಡೆದಿದ್ದರು! 1957, ಎ.17ರಿಂದ 1962, ಅ.31ರವರೆಗೆ ಭಾರತದ ರಕ್ಷಣ ಸಚಿವರಾಗಿದ್ದರು. ಉತ್ತರ ಮುಂಬಯಿ ಕ್ಷೇತ್ರದಿಂದ ಎರಡು ಬಾರಿ, ಪಶ್ಚಿಮ ಬಂಗಾಲದ ಮಿಡ್ನಾಪುರ, ತವರು ರಾಜ್ಯ ಕೇರಳದ ತ್ರಿವೇಂಡ್ರಂ ಕ್ಷೇತ್ರದಿಂದ ಸ್ಪ ರ್ಧಿಸಿ ಲೋಕಸಭೆ ಪ್ರವೇಶಿಸಿ ರಕ್ಷಣ ಸಚಿವರಾಗಿದ್ದರು.

ರಾಜ್ಯದಲ್ಲಿ ಆರಂಭವಾಗಿದ್ದು ಯಾವಾಗ?
ಕರ್ನಾಟಕಕ್ಕೆ ಮಂಜೂರಾಗಿದ್ದ ಸೈನಿಕ ಶಾಲೆ ಮೊದಲು ಮೈಸೂರು ಜಿಲ್ಲೆಯಲ್ಲಿ ಸ್ಥಾಪಿಸಲು ನಿಗದಿಯಾಗಿತ್ತು. ಆಗಿನ ಸಿಎಂ ಎಸ್‌.ಆರ್‌.ಕಂಠಿ ಹಾಗೂ ಬಿ.ಡಿ.ಜತ್ತಿ, ಎಸ್‌.ನಿಜಲಿಂಗಪ್ಪ ಅವರ ಒತ್ತಾಸೆಯಿಂದ ವಿಜಯಪುರಕ್ಕೆ ಲಭಿಸಿತು. 1963, ಸೆ.16ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಶಿಲಾನ್ಯಾಸ ನೆರವೇರಿಸಿದ್ದರು. ಬಳಿಕ ಅದೇ ವರ್ಷ ಡಿ.13ರಂದು ಅಂದಿನ ಉಪ ರಾಷ್ಟ್ರಪತಿ ಜಾಕೀರ್‌ ಹುಸೇನ್‌ ಅವರಿಂದ ಸ್ವಂತ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿತು. ಆರಂಭದಲ್ಲಿ ನಗರದ ವಿಜಯ ಕಾಲೇಜಿನ ಪರಿಸರದಲ್ಲಿದ್ದ ಸೈನಿಕ ಶಾಲೆ 1966ರಲ್ಲಿ 408 ಎಕ್ರೆ ವಿಸ್ತಾರದ ತನ್ನ ಶಾಶ್ವತ ನೆಲೆಗೆ ಸ್ಥಳಾಂತರಗೊಂಡಿದೆ. ಅಲ್ಲದೇ ರಾಜ್ಯದ ಮತ್ತೊಂದು ಸೈನಿಕ ಶಾಲೆ ಕೊಡಗಿನಲ್ಲಿ 2007, ಅ.10ರಂದು ಜನ್ಮ ತಳೆದಿದೆ.

ಈಗ ವಿದ್ಯಾರ್ಥಿನಿಯರಿಗೂ ಅವಕಾಶ
ಸೈನಿಕ ಶಾಲೆಯಲ್ಲಿ ಕೇವಲ ಬಾಲಕರಿಗೆ ಮಾತ್ರ ಅವಕಾಶವಿತ್ತು. 3 ವರ್ಷಗಳ ಹಿಂದೆ ಬಾಲಕಿಯರ ಪ್ರವೇಶಕ್ಕೂ ಅವಕಾಶ ಕಲ್ಪಿಸುವ ಮೂಲಕ ಸೈನಿಕ ಶಿಕ್ಷಣ ನೀಡುವಲ್ಲಿ ಸಮಾನತೆ ಅನುಸರಿಸಲಾಗಿದೆ. ಪ್ರತೀ ವರ್ಷ 10 ವಿದ್ಯಾರ್ಥಿನಿಯರಂತೆ ಇದೀಗ 30 ವಿದ್ಯಾರ್ಥಿನಿಯರಿದ್ದಾರೆ. 6ನೇ ತರಗತಿಗೆ ಪ್ರವೇಶ ಪಡೆದ ಬಳಿಕ 9ನೇ ತರಗತಿ ಅವ ಧಿಯಲ್ಲಿ ಎರಡು ಬಾರಿ ಅನುತ್ತೀರ್ಣರಾದರೆ ಮುಂದಿನ ತರಗತಿಗೆ ಪ್ರವೇಶವಿಲ್ಲ. 10ನೇ ತರಗತಿ ಬಳಿಕ ಒಂದು ಬಾರಿ ಫೇಲಾದರೆ ಶಾಲೆಯಿಂದ ವಿದ್ಯಾರ್ಥಿ ಬಿಡುಗಡೆ ಆಗುತ್ತಾನೆ.

Advertisement

ಕರ್ನಲ್‌ ದರ್ಜೆಯ ಪ್ರಾಚಾರ್ಯರು
ಭೂಸೇನೆ, ವಾಯು ಸೇನೆ ಹಾಗೂ ನೌಕಾದಳದ ಯಾವುದಾರೂ ಒಂದು ವಿಭಾಗದ ಕರ್ನಲ್‌ ದರ್ಜೆಯ ಓರ್ವ ಅಧಿ ಕಾರಿ ಶಾಲೆಯ ಪ್ರಾಚಾರ್ಯರಾಗಿರುತ್ತಾರೆ. ಪ್ರತೀ ಮೂರು ವರ್ಷಕ್ಕೊಮ್ಮೆಪ್ರಾಚಾರ್ಯರು ವರ್ಗವಾಗಿ ಸೇನಾ ಮುಖ್ಯ ವಾಹಿನಿಗೆ ಮರಳುತ್ತಾರೆ. ಹಾಲಿ ಪ್ರಾಚಾರ್ಯೆ ಗ್ರೂಪ್‌ ಕ್ಯಾಪ್ಟನ್‌ ಪ್ರತಿಭಾ ಭಿಷ್ಟ ಸೇರಿದಂತೆ 1963- 2023ರವರೆಗೆ 19 ಪ್ರಾಚಾರ್ಯರು ಸೇವೆ ಸಲ್ಲಿಸಿದ್ದಾರೆ. ಕರ್ನಲ್‌ ದರ್ಜೆಯ ಓರ್ವ ಕಿರಿಯ ಅಧಿ ಕಾರಿ ಮುಖ್ಯೋಪಾಧ್ಯಾಯರಾಗಿ, ಲೆಫ್ಟಿನೆಂಟ್‌ ಕರ್ನಲ್‌ ದರ್ಜೆಯ ಸೇನಾ ಧಿಕಾರಿ ರಿಜಿಸ್ಟ್ರಾರ್‌ ಆಗಿ ಸೇವೆ ಸಲ್ಲಿಸುತ್ತಾರೆ. ಇವರನ್ನು ಹೊರತುಪಡಿಸಿ ಸ್ಥಳೀಯವಾಗಿ ಬೋಧಕ ಹಾಗೂ ಬೋಧಕೇತರ ಸಿಬಂದಿಗಳನ್ನು ಪ್ರಾಚಾರ್ಯರ ನೇತೃತ್ವದ ನೇಮಕಾತಿ ಪ್ರಾ ಧಿಕಾರವೇ ಭರ್ತಿ ಮಾಡಿಕೊಳ್ಳುತ್ತದೆ. ವಿಜಯಪುರ ಸೈನಿಕ ಶಾಲೆಯಲ್ಲಿ 34 ಬೋಧಕ ಸಿಬಂದಿ, 18 ಜನ ಆಡಳಿತ ವಿಭಾಗದ ಸಿಬಂದಿ ಸಹಿತ ಒಟ್ಟು 93 ಸಿಬಂದಿ ಇದ್ದಾರೆ.

ಕುದುರೆ ಸವಾರಿ, ಈಜು, ಶೂಟಿಂಗ್‌ ತರಬೇತಿ
ಸೈನಿಕ ಶಾಲೆಯಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ವಿದ್ಯಾರ್ಥಿಗಳನ್ನು ದೈಹಿಕವಾಗಿ, ಮಾನಸಿಕವಾಗಿ, ಸಿದ್ಧಗೊಳಿಸಲು ತರಬೇತಿ ನೀಡಲಾಗುತ್ತದೆ. ಕುದುರೆ ಸವಾರಿಗಾಗಿ ಈ ಶಾಲೆಯಲ್ಲಿ ಅಮೆರಿಕನ್‌ ವೆಸ್ಟರ್ನ್ ರಾಯಲ್‌ ತಳಿಯ 2 ಹೆಣ್ಣು ಕುದುರೆ ಸೇರಿ 11 ರೇಸ್‌ ಹಾರ್ಸ್‌ಗಳಿವೆ. ಈಜುವ ಕಲೆ ಕರಗತ ಮಡಿಕೊಳ್ಳಲು ಈಜು ಕೊಳವೂ ಇದೆ. ಶೂಟಿಂಗ್‌, ಸೈಕ್ಲಿಂಗ್‌ನಂಥ ಕಸರತ್ತಿನ ಶಿಕ್ಷಣ ತರಬೇತಿ ನೀಡಲಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ಎಲ್ಲ ತರಬೇತಿಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ನೆಹರು ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್‌ನ ಕಿರಿಯರ ವಿಭಾಗದಲ್ಲಿ ವಿಜಯಪುರ ಸೈನಿಕ ಶಾಲೆ ಈವರೆಗೆ ಎಂಟಕ್ಕೂ ಹೆಚ್ಚು ಬಾರಿ ಪಾಲ್ಗೊಳ್ಳುವ ಅರ್ಹತೆ ಪಡೆದಿದೆ.

ಗಂಟೆಗೆ 900 ಚಪಾತಿ ಮಾಡುವ ಯಂತ್ರ
ಪ್ರತಿದಿನ ಪ್ರತೀ ವಿದ್ಯಾರ್ಥಿಗೆ 200 ಎಂಎಲ್‌ ಹಾಲು ಕೊಡಲಾಗುತ್ತದೆ. ಬೆಳಗಿನ ಉಪಾಹಾರ ಮಧ್ಯಾಹ್ನ ಹಾಗೂ ರಾತ್ರಿ ಊಟ ವಿಭಿನ್ನವೇ ಆಗಿ ರುತ್ತದೆ. ವಾರದಲ್ಲಿ ನಾಲ್ಕು ಬಾರಿ ಮಾಂಸಾಹಾರವೂ ನೀಡಲಾಗುತ್ತದೆ. ಮಾಂಸಾಹಾರಿಗಳಲ್ಲದ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ 200 ಎಂಎಲ್‌ ಹಾಲು ನೀಡಿ ಸಮತೋಲನ ಕಾಯ್ದುಕೊಳ್ಳಲಾಗುತ್ತದೆ. ಅಡುಗೆ ತಯಾರಿಕೆ ವಿಭಾಗದಲ್ಲಿ ಓರ್ವ ಮುಖ್ಯಸ್ಥ ಸೇರಿ 13 ಜನರು ಅಡುಗೆ ತಯಾರಕರಿದ್ದಾರೆ. ಒಂದು ಅವ ಧಿಯ ಊಟಕ್ಕೆ 2,300 ಚಪಾತಿ ಬೇಕಾಗುತ್ತದೆ. ಆಹಾರ ತಯಾರಿಕೆಗೆ ಆಧುನಿಕ ಯಂತ್ರಗಳನ್ನು ಬಳಸುತ್ತಿದ್ದು, ಗಂಟೆಗೆ 900 ಚಪಾತಿ ಮಾಡುವ ಯಂತ್ರವಿದೆ. ಕ್ಯಾಂಪಸ್‌ನಲ್ಲೇ ಕಿರು ಆಸ್ಪತ್ರೆ, ಆಂಬ್ಯುಲೆನ್ಸ್‌ ಕೂಡ ಇದೆ.

ಹೈನುಗಾರಿಕೆಗೆ 45 ಜಾನುವಾರು, 50 ಎಕ್ರೆ ತೋಟ
408 ಎಕ್ರೆ ಪ್ರದೇಶದಲ್ಲಿ ಕೃಷಿಗಾಗಿ 150 ಎಕ್ರೆ ಜಮೀನು ಮೀಸಲಿದ್ದು, 50 ಎಕ್ರೆಯಲ್ಲಿ ತೋಟಗಾರಿಕೆಯೂ ಇದೆ. ಇದರಲ್ಲಿ 500 ಮಾವು, 250 ಸಪೋಟಾ, 650 ಹುಣಸೆ, 70 ಲಿಂಬೆ ಮರಗಳಿವೆ. ತರಕಾರಿ ಬೆಳೆಯಲು ಗ್ರೀನ್‌ ಹೌಸ್‌ ಸ್ಥಾಪನೆಗಾಗಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 1991 ಮೇ ತಿಂಗಳಲ್ಲಿ ಸೈನಿಕ ಶಾಲೆಯಲ್ಲಿ ಹೈನುಗಾರಿಕೆ ಆರಂಭಗೊಂಡಿದ್ಧು, 19 ಜರ್ಸಿ ಆಕಳು, 26 ಎಮ್ಮೆಗಳಿಂದ ಪ್ರತಿದಿನ ಸರಾಸರಿ 300 ಲೀಟರ್‌ ಹಾಲು ಉತ್ಪಾದನೆ ಮಾಡಲಾಗುತ್ತದೆ.

2ನೇ ವಿಶ್ವಯುದ್ಧದ ವಿಮಾನವೂ ಇದೆ!
ಸೇನೆಯ ಉನ್ನತ ದರ್ಜೆಯ ಅ ಧಿಕಾರಿಗಳನ್ನು ರೂಪಿಸುವ ಸೈನಿಕ ಶಾಲೆಯಲ್ಲಿ ಸೇನೆಯಲ್ಲಿ ಬಳಕೆ ಮಾಡುವ ಹಲವು ಶಸ್ತ್ರಾಸ್ತ್ರಗಳ ಪರಿಚಯಿಸಲು ಶಾಲಾ ಆವರಣದಲ್ಲಿ ಹಲವು ಯುದ್ಧ ವಿಮಾನ, ಟ್ಯಾಂಕರ್‌ ಪ್ರದರ್ಶನಕ್ಕಿಡಲಾಗಿದೆ. ಎರಡನೇ ವಿಶ್ವಯುದ್ಧದಲ್ಲಿ ಬ್ರಿಟಿಷರು ಬಳಸಿದ ವಿಮಾನ, 1971ರಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ ವಿಜಯ ಪತಾಕೆ ಹಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ಧ ವಿಜಯಂತ ಸೇರಿ 2 ಯುದ್ಧ ಟ್ಯಾಂಕರ್‌, ಬಾಂಬರ್‌, ಮಹಾತ್ಮ ಗಾಂಧಿಧೀಜಿ ಚಿತಾಭಸ್ಮ ಹೊತ್ತು ಮೆರವಣಿಗೆಯಲ್ಲಿ ಸಾಗಿದ್ದ ಹೆವಿಟ್ಜರ್‌ ಗನ್‌ ಮಾದರಿ, ಯುದ್ಧದಲ್ಲಿ ಬಳಸುವ ಎರಡು ಮಾದರಿ ಮಿಸೈಲ್‌, ಮಿಗ್‌-27 ಕಿರು ಯುದ್ಧ ವಿಮಾನ, ಎರಡು ಯುದ್ಧ ತರಬೇತಿಯ ಕಿರು ವಿಮಾನ, ಮೂರು ಗನ್‌ ಪ್ರದರ್ಶನಕ್ಕೆ ಇಡಲಾಗಿದೆ.

ಹಲವು ರಂಗಗಳಲ್ಲಿ ಸೈನಿಕ ವಿದ್ಯಾರ್ಥಿಗಳ ಮಿಂಚು
ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ರಕ್ಷಣ ವ್ಯವಸ್ಥೆ ಮಾತ್ರವಲ್ಲದೇ ಇತರೆ ರಂಗದಲ್ಲೂ ಅತ್ಯುತ್ತಮ ಹುದ್ದೆಯಲ್ಲಿದ್ದಾರೆ. ಪುಣೆಯಲ್ಲಿ ಸೇನಾ ಅಕಾಡೆಮಿಗೆ ಆಯ್ಕೆಯಾಗಲು ಅಲ್ಲಿಂದ ಭಾರತೀಯ ಸೇನೆಯ ಉನ್ನತ ಹುದ್ದೆಗೆ ನೇರ ಪ್ರವೇಶ ಪಡೆಯಲು ಸೈನಿಕ ಶಾಲೆಯೇ ವೇದಿಕೆ. ಈಚೆಗಷ್ಟೇ ಸೇವಾ ನಿವೃತ್ತಿ ಹೊಂದಿದ ಭೂಸೇನೆಯ ಉಪ ದಂಡ ನಾಯಕರಾಗಿದ್ದ ಲೆಫ್ಟಿನೆಂಟ್‌ ಜನರಲ್‌ ರಮೇಶ ಹಲಗಲಿ, ಲೆಫ್ಟಿನೆಂಟ್‌ ಜನರಲ್‌ ಬಿ.ರಾಜು, ಏರ್‌ ಮಾರ್ಷಲ್‌ ಶ್ರೀರಾಮ ಸುಂದರಂ, ರೇರ್‌ ಅಡ್ಮಿರಲ್‌ ಅವಿನಾಶ ಪುರಂದರೆ, ಜನರಲ್‌ ಅರ್ಜುನ ಮುತ್ತಣ್ಣ, ಜನರಲ್‌ ಕೆ.ಎನ್‌.ಮಿರ್ಜಿ, ಏರ್‌ ಮಾರ್ಷಲ್‌ ಯಜುರ್ವೇದಿ ಹೀಗೆ ದೇಶದ ಸೇನೆಯ ವಿವಿಧ ವಿಭಾಗಗಳಲ್ಲಿ ಉನ್ನತ ಹುದ್ದೆಗೇರಿದ ದಕ್ಷ ಅಧಿಕಾರಿಗಳನ್ನು ನೀಡಿದ ಕೀರ್ತಿ ವಿಜಯಪುರ ಸೈನಿಕ ಶಾಲೆಗಿದೆ. ಇದಲ್ಲದೇ ಕ್ಯಾ|ಗೋಪಿನಾಥ, ಐಪಿಎಸ್‌ ಅಧಿಕಾರಿಗಳಾದ ಗೋಪಾಲ ಹೊಸೂರ, ಐಎಎಸ್‌ ಅ ಧಿಕಾರಿಗಳಾದ ಅರವಿಂದ ಜನ್ನು, ಶಿವಯೋಗಿ ಕಳಸದ, ಎಸ್‌.ಎಸ್‌.ಪಟ್ಟಣಶಟ್ಟಿ, ಡಾ|ವಿ.ಬಿ.ದಾನಮ್ಮನವರ, ಪ್ರಭಾಕರ ಚಿನ್ನಿ, ಪಿ.ಎಸ್‌.ವಸ್ತ್ರದ, ಸುರತ್ಕಲ್‌ನ ಎನ್‌ಐಟಿ ಸಂಸ್ಥೆಯಿಂದ ಯುವ ವಿಜ್ಞಾನಿ ಪ್ರಶಸ್ತಿ ಪಡೆದಿರುವ ಡಾ| ಸುಭಾಷ್‌ ಯರಗಲ್‌, ವೀರಚಕ್ರ ಪ್ರಶಸ್ತಿ ಪುರಸ್ಕೃತ, 1999ರಲ್ಲಿ ಕಾರ್ಗಿಲ್‌ ಯುದ್ಧದಲ್ಲಿ ವಿಜಯ ತಂದು ಕೊಟ್ಟ ಕರ್ನಲ್‌ ಎಂ.ಬಿ.ರವೀಂದ್ರ, ಹಾವೇರಿ ಸಂಸದ ಶಿವಕುಮಾರ ಉದಾಸಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವ ಅಜಯಕುಮಾರ ಸರನಾಯಕ ಇದೇ ಶಾಲೆಯ ಪ್ರತಿಭಾನ್ವಿತರು.

12 ಸೇನಾಧಿಕಾರಿಗಳು ಹುತಾತ್ಮ
ವಿಜಯಪುರ ಸೈನಿಕ ಶಾಲೆಯಲ್ಲಿ ಅಧ್ಯಯನ ಮಾಡಿದ್ದ 12 ವಿದ್ಯಾರ್ಥಿಗಳು ಸೇನೆಯ ವಿವಿಧ ಉನ್ನತ ಹುದ್ದೆಯಲ್ಲಿದ್ದಾಗಲೇ ಹುತಾತ್ಮರಾಗಿದ್ಧಾರೆ. 1983ರಲ್ಲಿ ಅವಿನಾಶ ಗಾಡ್ಗಿàಳ, 1984ರಲ್ಲಿ ದಿಲೀಪ, 1987ರಲ್ಲಿ ಸುರೇಶ ಭಟ್‌, 1989ರಲ್ಲಿ ಎಂ.ಬಿ.ಚಿಟಿಯಪ್ಪ, 1990ರಲ್ಲಿ ಕೆ.ನರೇಶ, 1990ರಲ್ಲಿ ಮದನ್‌ ಘಾಟೆY, 1991ರಲ್ಲಿ ಅಜಿತ ಭಂಡಾರಕರ, 1992ರಲ್ಲಿ ಉಮೇಶ ಉಮರಾಣಿ. 1995ರಲ್ಲಿ ಜಸ್ಪಾಲ್‌ಸಿಂಗ್‌ ಗಿಲ್‌, 1995ರಲ್ಲಿ ನೀಲಕಂಠ ಹಿರೇಮಠ, 1998ರಲ್ಲಿ ಪಿ.ಬಿ.ಗೋಳೆ, 2002ರಲ್ಲಿ ಅಶೋಕ ಕರಡಿ ಸೇನೆಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಹುತಾತ್ಮರಾಗಿದ್ದಾರೆ.

ಸದ್ಯ 700 ವಿದ್ಯಾರ್ಥಿಗಳ ವ್ಯಾಸಂಗ
ವಿಜಯಪುರ ಸೈನಿಕ ಶಾಲೆಯಲ್ಲಿ 6ರಿಂದ 12ನೇ ತರಗತಿವರೆಗೆ 700 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ವಿದ್ಯಾರ್ಥಿ ಗಳ ವಸತಿಗಾಗಿ 6 ಹಾಸ್ಟೆಲ್‌ ಕಟ್ಟಡಗಳಿದ್ದು ಪ್ರತೀ ಹಾಸ್ಟೆಲ್‌ನಲ್ಲಿ ಜ್ಯೂನಿಯರ್‌-ಸೀನಿಯರ್‌ ವಿಭಾಗದಲ್ಲಿ ಹಂಚಿಕೆ ಮಾಡಲಾ ಗಿದೆ. ಸದರಿ ಹಾಸ್ಟೆಲ್‌ಗ‌ಳಿಗೆ ರಾಜ್ಯವನ್ನಾಳಿದ ಚಾಲುಕ್ಯ, ಹೊಯ್ಸಳ, ಆದಿಲ್‌ ಶಾಹಿ, ವಿಜಯನಗರ, ಒಡೆಯರ ಹಾಗೂ ರಾಷ್ಟ್ರಕೂಟ ಎಂದು ಅರಸು ಮನೆತನಗಳ ಹೆಸರಿಡಲಾಗಿದೆ.

ನಮ್ಮ ಸೈನಿಕ ಶಾಲೆಯ ಮಕ್ಕಳಲ್ಲಿ ಕೇವಲ ಅಕ್ಷರ ಬೀಜ ಬಿತ್ತದೆ ರಾಷ್ಟ್ರೀಯ ಏಕತೆ, ಸಮಗ್ರತೆ, ದೇಶಭಕ್ತಿ, ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವು ದನ್ನೂ ಕಲಿಸಿಕೊಡಲಾಗುತ್ತದೆ. ಹಾಗೆಯೇ ಇತರರತ್ತ ಬೆರಳು ಮಾಡದೆ ತನ್ನ ಬದ್ಧತೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂಥ ಶಿಕ್ಷಣ ನೀಡಲಾಗುತ್ತದೆ. ಭಾರತೀಯ ಸೇನೆಯ ಎಲ್ಲ ವಿಭಾಗಕ್ಕೂ ಗರಿಷ್ಠ ದಕ್ಷತೆಯ ಸೇನಾಧಿ ಕಾರಿಗಳನ್ನು ನೀಡುವುದೇ ನಮ್ಮ ಸೇನಾ ಶಾಲೆಯ ಉದ್ದೇಶವನ್ನು ಇಲ್ಲಿ ಸಾಫಲ್ಯಗೊಳಿಸಿದ್ದೇವೆ.
-ಗ್ರೂಪ್‌ ಕ್ಯಾಪ್ಟನ್‌ ಪ್ರತಿಭಾ ಭಿಷ್ಟ,
ಪ್ರಾಚಾರ್ಯರು, ಸೈನಿಕ ಶಾಲೆ, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next