Advertisement

ರಾಜ್ಯ 6 ಸಾವಿರ ಗ್ರಾಮಗಳಿಗೆ ಸ್ಮಶಾನವಿಲ್ಲ​​​​​​​

06:15 AM Dec 06, 2018 | Team Udayavani |

ಬೆಂಗಳೂರು: ರಾಜ್ಯದ 6 ಸಾವಿರ ಗ್ರಾಮಗಳು ಮತ್ತು ಎರಡು ನೂರಕ್ಕೂ ಹೆಚ್ಚು ಪಟ್ಟಣ ಪ್ರದೇಶಗಳಲ್ಲಿ ಸ್ಮಶಾನಗಳಿಲ್ಲ ಎಂದು ರಾಜ್ಯ ಸರ್ಕಾರ ಬುಧವಾರ ಹೈಕೋರ್ಟ್‌ಗೆ ಅಧಿಕೃತ ಮಾಹಿತಿ ನೀಡಿದೆ.

Advertisement

ಸ್ಮಶಾನ ಇಲ್ಲದ ಗ್ರಾಮಗಳಲ್ಲಿ ಸ್ಮಶಾನಕ್ಕಾಗಿ ಅಗತ್ಯ ಜಮೀನು ಗುರುತಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮೊಹಮ್ಮದ್‌ ಇಕ್ಬಾಲ್‌ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾ. ಎಸ್‌. ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ಈ ಮಾಹಿತಿ ಸಲ್ಲಿಸಿತು.

ವಿಚಾರಣೆ ವೇಳೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪರವಾಗಿ ಸರ್ಕಾರಿ ವಕೀಲರು ನ್ಯಾಯಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿದರು. ರಾಜ್ಯದಲ್ಲಿ ಸ್ಮಶಾನಗಳ ಸಮಸ್ಯೆ ನಿವಾರಿಸಲು ಸರ್ಕಾರದಿಂದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 2018 19ನೇ ಸಾಲಿನ ಬಜೆಟ್‌ನಲ್ಲಿ ಸ್ಮಶಾನಗಳ ನಿರ್ಮಾಣಕ್ಕಾಗಿ 10 ಕೋಟಿ ಮೀಸಲಿರಿಸಿದೆ. ಪ್ರಸ್ತುತ ರಾಜ್ಯದ 6,053 ಗ್ರಾಮಗಳಲ್ಲಿ ಹಾಗೂ 281 ಪಟ್ಟಣಗಳಲ್ಲಿ ಸ್ಮಶಾನಕ್ಕೆ ಜಾಗ ಲಭ್ಯವಿಲ್ಲ. ಹೀಗಾಗಿ ಎಲ್ಲ  ಜಿಲ್ಲಾಧಿಕಾರಿಗಳಿಗೆ ಅಗತ್ಯ ಜಾಗ ಖರೀದಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಸರ್ಕಾರಿ ವಕೀಲರು  ವಿವರಿಸಿದರು.

ಅಲ್ಲದೇ ಕಳೆದ ಎರಡು ವರ್ಷಗಳಲ್ಲಿ 1,123 ಗ್ರಾಮಗಳಲ್ಲಿ ಸ್ಮಶಾನ ನಿರ್ಮಿಸಲಾಗಿದೆ. ಪ್ರತಿವರ್ಷ ಎಲ್ಲ ಗ್ರಾಮಗಳಿಗೂ ಅವುಗಳ ಜನಸಂಖ್ಯೆ ಆಧರಿಸಿ ಎಲ್ಲ ಧರ್ಮವರಿಗೂ ಅನುಕೂಲವಾಗುವಂತೆ ಸ್ಮಶಾನ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

ಬಜೆಟ್‌ನಲ್ಲಿ ಹಣ ಇಟ್ಟರೆ ಸಾಕೇ?: ಸರ್ಕಾರದ ಪ್ರಮಾಣಪತ್ರ ಪರಿಶೀಲಿಸಿದ ನ್ಯಾಯಪೀಠ, ಈ ಪ್ರಮಾಣಪತ್ರ ಅಪೂರ್ಣವಾಗಿದೆ. ರಾಜ್ಯದ 29,518 ಗ್ರಾಮಗಳ ಪೈಕಿ 6,053 ಗ್ರಾಮಗಳಲ್ಲಿ ಸ್ಮಶಾನವಿಲ್ಲ ಎಂದು ಹೇಳಿದ್ದೀರಿ, ಆದರೆ ಈ ನಿಟ್ಟಿನಲ್ಲಿ ಏನು ಕ್ರಮ ಕೈಗೊಳ್ಳುತ್ತೀರಿ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಬಜೆಟ್‌ನಲ್ಲಿ 10 ಕೋಟಿ ತೆಗೆದಿರಿಸಿದರೆ ಸಾಕೇ? ಎಂದು ಪ್ರಶ್ನಿಸಿ, ಇದೊಂದು ಗಂಭೀರ ವಿಚಾರವಾಗಿದೆ. ಕೇವಲ ಅಂಕಿ ಅಂಶ ಸಲ್ಲಿಸಿದರೆ ಸಾಲದು. ಸ್ಮಶಾನ ನಿರ್ಮಾಣಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ. ವ್ಯವಸ್ಥಿತ ರೀತಿಯಲ್ಲಿ ಸಮಸ್ಯೆ ಬಗೆಹರಿಸಲು ಏನು ಮಾಡುತ್ತೀರಿ ಎಂಬ ಬಗ್ಗೆ ಸಮಗ್ರ ಕಾರ್ಯನೀತಿ ವರದಿ ಸಲ್ಲಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಜ.16ಕ್ಕೆ ಮುಂದೂಡಿತು.

Advertisement

ಅರ್ಜಿದಾರರ ದೂರೇನು?
ರಾಜ್ಯದ ಅನೇಕ ಗ್ರಾಮಗಳಲ್ಲಿ ಸ್ಮಶಾನವೇ ಇಲ್ಲ. ಅಲ್ಲಿ ಜನ ಮೃತಪಟ್ಟರೆ ಅವರ ಅಂತ್ಯಕ್ರಿಯೆ ನಡೆಸುವುದೇ ದೊಡ್ಡ ಸಮಸ್ಯೆಯಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ 2016ರಲ್ಲೇ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಆಗ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next