Advertisement
2017ರ ಜನವರಿ ತಿಂಗಳಿನಲ್ಲಿ ಮಕರ ಸಂಕ್ರಾಂತಿಯ ಶುಭಾವಸರದಲ್ಲಿ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನಕ್ಕೆ ಕರೆ ನೀಡಿದಾಗ ನಮ್ಮ ಕ್ಷೇತ್ರದ ಭಕ್ತರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಹಾಗೂ ಜಾತಿ-ಮತ ಭೇದವಿಲ್ಲದೆ ಎಲ್ಲ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ನೀಡಿ ಸ್ವತ್ಛತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಸ್ವಚ್ಛತಾ ಅಂದೋಲನದ ಪರಿಣಾಮವಾಗಿ ಎಲ್ಲ ಶ್ರದ್ಧಾ ಕೇಂದ್ರಗಳಲ್ಲಿ ನಿರಂತರ ಸ್ವಚ್ಛತಾ ಕಾರ್ಯಕ್ರಮಗಳು ನಡೆದು ಜನರಲ್ಲಿ ಅರಿವು ಜಾಗೃತಿ ಉಂಟಾಗಿದೆ. ಶ್ರದ್ಧಾ ಕೇಂದ್ರಗಳ ಸಾನ್ನಿಧ್ಯ ವೃದ್ಧಿಯಾಗಿದೆ. ದರ್ಶನಕ್ಕೆ ಬರುವ ಭಕ್ತರಲ್ಲಿ ಭಕ್ತಿಯೊಂದಿಗೆ ಪವಿತ್ರ ಮನೋಭಾವ ಮೂಡಿ ಬಂದಿದೆ. ಶ್ರದ್ಧಾ ಕೇಂದ್ರಗಳ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಜನ ಜಾಗೃತಿ ಉಂಟಾಗಿದೆ ಎಂದು ಡಾ| ಹೆಗ್ಗಡೆ ಅವರು ಹೇಳಿದ್ದಾರೆ.
ಇದು ನಿರಂತರವಾಗಿ ನಡೆಯಬೇಕಾದ ಕರ್ತವ್ಯ ರೂಪದ, ಸೇವಾ ರೂಪದ ಸಮರ್ಪಣಾ ಕಾರ್ಯಕ್ರಮವಾಗಿದೆ. ಯಾವುದೇ ಕಾರಣಕ್ಕೂ ಕ್ಷೇತ್ರಗಳನ್ನು ಅಪವಿತ್ರಗೊಳಿಸಿ ಮತ್ತೆ ಮಾಲಿನ್ಯಕ್ಕೆ ಅವಕಾಶ ನೀಡಬೇಡಿ. ಎಲ್ಲ ಪವಿತ್ರ ಶ್ರದ್ಧಾ ಕೇಂದ್ರಗಳು ಸದಾ ನಿಮ್ಮೆಲ್ಲರ ಕಣ್ಗಾವಲಿನಲ್ಲಿ ಮತ್ತು ಸೇವೆಯಲ್ಲಿ ರಕ್ಷಿಸಲ್ಪಡಲಿ ಎಂದು ಅವರು ಆಶಿಸಿದ್ದಾರೆ. ಸ್ವಚ್ಛತಾ ಅಭಿಯಾನದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ ಹಾಗೂ ಶ್ರದ್ಧಾ ಕೇಂದ್ರಗಳ ಭಗವತ್ ಸಾನ್ನಿಧ್ಯಗಳು ಸಂತೃಪ್ತರಾಗಿ ಹರಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಾ| ಹೆಗ್ಗಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.