Advertisement

Test  ಸರಣಿಯಲ್ಲಿ 600 ಪ್ಲಸ್‌ ರನ್‌: ಜೈಸ್ವಾಲ್‌ ಭಾರತದ 5ನೇ ಆಟಗಾರ

11:45 PM Feb 24, 2024 | Team Udayavani |

ರಾಂಚಿ: ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್‌ ಮೇಲುಗೈ ಸಾಧಿಸಿದೆ. ಯುವ ಆಫ್ಸ್ಪಿನ್ನರ್‌ ಶೋಯಿಬ್‌ ಬಶೀರ್‌ ಅವರ ದಾಳಿಗೆ ಕುಸಿದ ಭಾರತ ತಂಡವು ದ್ವಿತೀಯ ದಿನದಾಟದ ಅಂತ್ಯಕ್ಕೆ ಏಳು ವಿಕೆಟಿಗೆ 219 ರನ್‌ ಗಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಭಾರತ ಇನ್ನೂ 134 ರನ್‌ ಗಳಿಸಬೇಕಾಗಿದೆ.

Advertisement

ಕೇವಲ ಎರಡನೇ ಟೆಸ್ಟ್‌ನಲ್ಲಿ ಆಡುತ್ತಿರುವ 20ರ ಹರೆಯದ ಬಶೀರ್‌ ಬೌಲಿಂಗ್‌ಗೆ ಬಹಳಷ್ಟು ನೆರವು ನೀಡುತ್ತಿದ್ದ ಈ ಪಿಚ್‌ನ ಲಾಭ ಪಡೆದು ಗಿಲ್‌, ಪಾಟಿದಾರ್‌ ಮತ್ತು ರವೀಂದ್ರ ಜಡೇಜ ಅವರ ವಿಕೆಟನ್ನು ಉರುಳಿಸಿ ಭಾರತಕ್ಕೆ ಪ್ರಬಲ ಹೊಡೆತ ನೀಡಿದರು. ಟೀ ವಿರಾಮದ ಬಳಿಕ ಮತ್ತೆ ದಾಳಿಗೆ ಇಳಿದ ಅವರು ಉತ್ತಮ ಫಾರ್ಮ್ನಲ್ಲಿದ್ದ ಜೈಸ್ವಾಲ್‌ ಅವರ ವಿಕೆಟನ್ನು ಹಾರಿಸಿದರು. ಇದರಿಂದಾಗಿ ಇಂಗ್ಲೆಂಡ್‌ ಈ ಪಂದ್ಯವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ.
ಆರಂಭಿಕ ಜೈಸ್ವಾಲ್‌ ಅವರ ತಾಳ್ಮೆಯ 73 ರನ್‌ ಮತ್ತು ಕೊನೆ ಹಂತದಲ್ಲಿ ಧ್ರುವ್‌ ಜುರೆಲ್‌ ಮತ್ತು ಕುಲದೀಪ್‌ ಯಾದವ್‌ ಮುರಿಯದ ಎಂಟನೇ ವಿಕೆಟಿಗೆ 42 ರನ್‌ ಪೇರಿಸಿದ್ದರಿಂದ ತಂಡದ ಮೊತ್ತ ಇನ್ನೂರರ ಗಡಿ ದಾಟುವಂತಾಯಿತು. ಇಲ್ಲದಿದ್ದರೆ ಭಾರತ ಇನ್ನಷ್ಟು ಕಡಿಮೆ ಮೊತ್ತಕ್ಕೆ ಆಲೌಟಾಗುವ ಸಾಧ್ಯತೆ ಯಿತ್ತು. ತಂಡ 177 ರನ್‌ ತಲುಪುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು.

ಜೈಸ್ವಾಲ್‌ ಆಸರೆ
ಇನ್ನಿಂಗ್ಸ್‌ ಆರಂಭಿಸಿದ ಭಾರತ ತಂಡವನ್ನು ಜೈಸ್ವಾಲ್‌ ಆಸರೆಯಾದರು. ನಾಯಕ ರೋಹಿತ್‌ ಶರ್ಮ ಅವರನ್ನು ಬೇಗನೇ ಕಳೆದುಕೊಂಡ ಬಳಿಕ ಜೈಸ್ವಾಲ್‌ ಮತ್ತು ಗಿಲ್‌ ತಾಳ್ಮೆಯಿಂದ ಆಡಿ ತಂಡವನ್ನು ಆಧರಿಸಿದರು. ದ್ವಿತೀಯ ವಿಕೆಟಿಗೆ 82 ರನ್‌ ಪೇರಿಸಿದರು. ಆದರೆ ಈ ಜೋಡಿಯನ್ನು ಬಶೀರ್‌ ಮುರಿದ ಬಳಿಕ ತಂಡ ಕುಸಿಯತೊಡಗಿತು. ಪಾಟಿದಾರ್‌, ಜಡೇಜ ಮತ್ತು ಈ ಹಿಂದಿನ ಪಂದ್ಯದಲ್ಲಿ ಮಿಂಚಿದ್ದ ಸಫ‌ìರಾಜ್‌ ಖಾನ್‌ ಮಿಂಚಲು ವಿಫ‌ಲರಾದರು. ಇದರಿಂದ ತಂಡ 177 ರನ್‌ ಗಳಿಸುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು.

ವಿಕೆಟ್‌ನ ಒಂದು ಕಡೆ ಜವಾಬ್ದಾರಿಯಿಂದ ಆಡಿದ ಜೈಸ್ವಾಲ್‌ ಅಮೋಘವಾಗಿ ಆಡಿ 73 ರನ್‌ ಗಳಿಸಿ ಬಶೀರ್‌ಗೆ ವಿಕೆಟ್‌ ಒಪ್ಪಿಸಿದರು. ಈ ಸರಣಿಯಲ್ಲಿ ಸರಾಸರಿ 103ರಂತೆ ಅವರು 618 ರನ್‌ ಪೇರಿಸಿದರು. 117 ಎಸೆತ ಎದುರಿಸಿದ ಅವರು 8 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದ್ದರು.

ಇಂಗ್ಲೆಂಡ್‌ 353ಕ್ಕೆ ಆಲೌಟ್‌
ಈ ಮೊದಲು ಏಳು ವಿಕೆಟಿಗೆ 302 ರನ್ನುಗ ಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್‌ ತಂಡವು 51 ರನ್‌ ಪೇರಿಸಿ ಆಲೌಟಾಯಿತು. ಜೋ ರೂಟ್‌ ಶತಕ (106) ಮತ್ತು ಓಲೀ ರಾಬಿನ್ಸನ್‌ 31 ರನ್ನುಗಳಿಂದ ದಿನದಾಟ ಆರಂಭಿಸಿ ಎಂಟನೇ ವಿಕೆಟಿಗೆ ಅಮೂಲ್ಯ 102 ರನ್‌ ಪೇರಿಸಿ ಬೇರ್ಪಟ್ಟರು. ತನ್ನ ಜೀವನಶ್ರೇಷ್ಠ 58 ರನ್‌ ಗಳಿಸಿದ ರಾಬಿನ್ಸನ್‌ ಅವರ ವಿಕೆಟನ್ನು ಜಡೇಜ ಉರುಳಿಸಿದರು. ಅಂತಿಮವಾಗಿ ತಂಡ 353 ರನ್ನಿಗೆ ಆಲೌಟಾದರೆ ಶತಕವೀರ ರೂಟ್‌ 122 ರನ್‌ ಗಳಿಸಿ ಅಜೇಯರಾಗಿ ಉಳಿದರು. 274 ಎಸೆತ ಎದುರಿಸಿದ ಅವರು 10 ಬೌಂಡರಿ ಬಾರಿಸಿದ್ದರು.

Advertisement

ಯಶಸ್ವಿ ಜೈಸ್ವಾಲ್‌‌ ಇನ್ನೊಂದು ದಾಖಲೆ ಮೂಡಿದ್ದಾರೆ. 55 ರನ್‌ ಗಳಿಸಿದ ವೇಳೆ ಅವರು ಟೆಸ್ಟ್‌ ಸರಣಿಯಲ್ಲಿ 600 ಅಥವಾ ಅದಕ್ಕಿಂತ ಹೆಚ್ಚಿನ ರನ್‌ ಪೇರಿಸಿದ ಭಾರತದ ಐದನೇ ಆಟಗಾರರೆಂಬ ಗೌರವಕ್ಕೆ ಪಾತ್ರರಾದರು.
ಕಳೆದ ವರ್ಷ ವೆಸ್ಟ್‌ಇಂಡೀಸ್‌ ಪ್ರವಾಸದ ವೇಳೆ ಭಾರತ ಪರ ಟೆಸ್ಟ್‌ಗೆ ಪದಾರ್ಪಣೆಗೈದಿದ್ದ ಜೈಸ್ವಾಲ್‌ ಸದ್ಯ ಸಾಗುತ್ತಿರುವ ಟೆಸ್ಟ್‌ ಸರಣಿಯ ಏಳನೇ ಇನ್ನಿಂಗ್ಸ್‌ನಲ್ಲಿ ಈ ದಾಖಲೆ ಸಾಧಿಸಿದರು. ದಿನದ ಅಂತಿಮ ಅವಧಿಯ ಆಟದಲ್ಲಿ ಬಶೀರ್‌ ಅವರ ಎಸೆತದಲ್ಲಿ ಒಂಟಿ ರನ್‌ ಗಳಿಸುವ ಮೂಲಕ ಅವರು ಈ ಸಾಧನೆ ಬರೆದರು.

ಈ ಸರಣಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿರುವ ಜೈಸ್ವಾಲ್‌ ದ್ವಿತೀಯ ಮತ್ತು ತೃತೀಯ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿ ಗಮನ ಸೆಳೆದಿದ್ದಾರೆ. 22ರ ಹರೆಯದ ಜೈಸ್ವಾಲ್‌ ಇದೀಗ ಟೆಸ್ಟ್‌ ಸರಣಿಯಲ್ಲಿ 600 ಪ್ಲಸ್‌ ಪೇರಿಸಿದ ಸುನಿಲ್‌ ಗಾವಸ್ಕರ್‌, ವಿರಾಟ್‌ ಕೊಹ್ಲಿ, ರಾಹುಲ್‌ ದ್ರಾವಿಡ್‌ ಮತ್ತು ದಿಲೀಪ್‌ ಸರ್‌ದೇಸಾಯಿ ಅವರ ಸಾಲಿಗೆ ಸೇರಿಕೊಂಡಿದ್ದಾರೆ. ಇವರಲ್ಲಿ ಗಾವಸ್ಕರ್‌, ಕೊಹ್ಲಿ ಮತ್ತು ದ್ರಾವಿಡ್‌ ತಮ್ಮ ಬಾಳ್ವೆಯಲ್ಲಿ ಈ ಸಾಧನೆಯನ್ನು ಎರಡು ಬಾರಿ ಮಾಡಿದ್ದರೆ ಸರ್‌ದೇಸಾಯಿ ವಿದೇಶಿ ನೆಲದಲ್ಲಿ (1970-71ರಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ) ಈ ಸಾಧನೆ ಮಾಡಿದ್ದರು.

ಬ್ರಾಡ್ಮನ್‌ ಹೆಸರಲ್ಲಿ ವಿಶ್ವದಾಖಲೆ
ಟೆಸ್ಟ್‌ ಸರಣಿಯಲ್ಲಿ ಗರಿಷ್ಠ ರನ್‌ ಪೇರಿಸಿದ ವಿಶ್ವದಾಖಲೆ ಆಸ್ಟ್ರೇಲಿಯದ ದಿಗ್ಗಜ ಡೋನಾಲ್ಡ್‌ ಬ್ರಾಡ್ಮನ್‌ ಅವರ ಹೆಸರಲ್ಲಿದೆ. ಅವರು 1930ರಲ್ಲಿ ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ 974 ರನ್‌ ಪೇರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next