ಬೆಳಗಾವಿ: ಅಸ್ಸಾಂನಲ್ಲಿ ಈಗಾಗಲೇ 600 ಮದರಸಾಗಳನ್ನು ಮುಚ್ಚಲಾಗಿದೆ. ಅಷ್ಟೇ ಅಲ್ಲ ರಾಜ್ಯಾದ್ಯಂತ ಶಾಲಾ, ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆ ನೀಡಲು ನಿರ್ಧರಿಸಿದ್ದರಿಂದ ಎಲ್ಲಾ ಮದರಸಾಗಳನ್ನು ಮುಚ್ಚಲು ಚಿಂತನೆ ನಡೆಸಿರುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಸರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ:ಮೊದಲ ಏಕದಿನಕ್ಕೆ ವಾಂಖೆಡೆ ಸಜ್ಜು; ಟಾಸ್ ಗೆದ್ದ ಭಾರತ; ರಾಹುಲ್ ಗೆ ಸಿಕ್ತು ಚಾನ್ಸ್
ಅವರು ಬೆಳಗಾವಿ ನಗರದ ಶಹಾಪುರದಲ್ಲಿ ನೂತನವಾಗಿ ನಿರ್ಮಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ಜೀವನಗಾಥೆಯ ಶಿವ ಚರಿತ್ರೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ವೇಳೆ ಈ ಹೇಳಿಕೆ ನೀಡಿದ್ದಾರೆ.
ಅಸ್ಸಾಂನಲ್ಲಿ ಬಹುತೇಕ 600 ಮದರಸಾಗಳನ್ನು ಮುಚ್ಚಿಸಲಾಗಿದೆ. ನಮಗೆ ಮದರಸಾಗಳು ಬೇಕಿಲ್ಲ. ಅದರ ಬದಲಿಗೆ ವೈದ್ಯರು, ಎಂಜಿನಿಯರ್ ಗಳನ್ನು ರೂಪಿಸುವ ಶಾಲಾ, ಕಾಲೇಜುಗಳು, ವಿಶ್ವವಿದ್ಯಾಲಯಗಳ ಅಗತ್ಯವಿದೆ ಎಂದು ಸರ್ಮಾ ಹೇಳಿದರು.
ಬಾಂಗ್ಲಾದೇಶದಿಂದ ಜನರು ಅಸ್ಸಾಂಗೆ ಬರುತ್ತಿದ್ದಾರೆ. ಇದರಿಂದಾಗಿ ನಮ್ಮ ಸಂಸ್ಕೃತಿ ಮತ್ತು ಸಮಾಜಕ್ಕೆ ಅಪಾಯಕಾರಿ. ಅಸ್ಸಾಂ ಸರ್ಕಾರ ಮದರಸಾಗಳನ್ನು ಮುಚ್ಚಿ, ಶಾಲೆಗಳನ್ನಾಗಿ ಪರಿವರ್ತಿಸುವ ಕ್ರಮವನ್ನು ಗುವಾಹಟಿ ಹೈಕೋರ್ಟ್ ಎತ್ತಿಹಿಡಿದಿದೆ. ಏತನ್ಮಧ್ಯೆ ಹಲವು ಮದರಸಾಗಳ ಸಂಘಟನೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ. ಒಂದು ವೇಳೆ ಸುಪ್ರೀಂಕೋರ್ಟ್ ನಮ್ಮ ನಿರ್ಧಾರ ಎತ್ತಿಹಿಡಿದರೆ ಎಲ್ಲಾ ಮದರಸಾಗಳನ್ನು ಮುಚ್ಚುವುದಾಗಿ ತಿಳಿಸಿದ್ದಾರೆ.
ಅಸ್ಸಾಂ ಜಿಹಾದಿ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿತ್ತು. ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆಯ ಜೊತೆ ಸಂಪರ್ಕ ಹೊಂದಿರುವ ಐದು ಜಿಹಾದಿ ಘಟಕಗಳು ಕಾರ್ಯಾಚರಿಸುತ್ತಿದ್ದವು. ಇವು ಅಸ್ಸಾಂನ ಯುವಕರನ್ನು ಜಿಹಾದಿಯತ್ತ ಸೆಳೆಯಲು ಸ್ಲೀಪರ್ ಸೆಲ್ ನಂತೆ ಕಾರ್ಯ ಚಟುವಟಿಕೆ ನಡೆಸುತ್ತಿದ್ದವು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿರುವುದಾಗಿ ಸರ್ಮಾ ತಿಳಿಸಿದ್ದಾರೆ.