ಜೇವರ್ಗಿ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವ ಕೂಲಿಕಾರ್ಮಿಕರಿಗೆ ದಿನಕ್ಕೆ 600ರೂ. ಕೂಲಿ ನೀಡಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರ ನರೇಗಾ ಕೂಲಿಯನ್ನು ಇತ್ತೀಚೆಗೆ ಪರಿಷ್ಕೃರಿಸಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪ್ರಸ್ತುತ ನೀಡುತ್ತಿರುವ ಕೂಲಿ ಯಾವುದಕ್ಕೂ ಸಾಲುತ್ತಿಲ್ಲ. ಕುಟುಂಬ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ನರೇಗಾ ಕೂಲಿಯನ್ನು 600ರೂ. ಗೆ ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕಳೆದ ವರ್ಷ ಬಜೆಟ್‌ನಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ 98 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಪ್ರಸಕ್ತ ವರ್ಷದ ಬಜೆಟ್ ನಲ್ಲಿ ಕಡಿತ ಮಾಡಿ ಕೇವಲ 73 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಈ ಅನುದಾನ ಖಾತ್ರಿ ಯೋಜನೆಗೆ ಸಾಲುವುದಿಲ್ಲ. ಪ್ರತಿಯೊಂದು ಕುಟುಂಬಕ್ಕೆ ಕನಿಷ್ಟ 200 ದಿನ ಕೆಲಸ ನೀಡಬೇಕು. ಕೆಲಸಗಾರರಿಗೆ ಅನೇಕ ಕಡೆ ಕೂಲಿ ಹಣ ಪಾವತಿ ಮಾಡಿಲ್ಲ. ಕೊರೊನಾದಂತ ಸಂಕಷ್ಟ ಸಮಯದಲ್ಲಿ ಯಾವುದೇ ಪರಿಹಾರ ನೀಡಿಲ್ಲ. ಕೂಲಿಕಾರ್ಮಿಕರಿಗೆ ಬಾಕಿ ಇರುವ ವೇತನ ಹಾಗೂ ಕೊರೊನಾ ಪರಿಹಾರ ತಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.
ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಕೆಲಸದ ಪ್ರಮಾಣ ಕಡಿಮೆ ಮಾಡಬೇಕು. 60 ವರ್ಷ ದಾಟಿದ ರೈತರಿಗೆ ಹಾಗೂ ಕೂಲಿಕಾರ್ಮಿಕರಿಗೆ ಮಾಸಿಕ 7500ರೂ. ನೀಡಬೇಕು. ರೈತರು ಬೆಳೆಯುವ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿ, ಡಾ| ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು. ಈ ವರ್ಷ ಹಾಳಾಗಿರುವ ತೊಗರಿ, ಹತ್ತಿ ಬೆಳೆಗಳಿಗೆ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಕೋರಿದರು.
ನಂತರ ತಹಶೀಲ್ದಾರ್ ವಿನಯಕುಮಾರ ಪಾಟೀಲ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಸುಭಾಷ ಹೊಸಮನಿ, ಕಾರ್ಯದರ್ಶಿ ಪರಶುರಾಮ ಬಡಿಗೇರ, ಮಲಕಪ್ಪ ಮ್ಯಾಗೇರಿ ಹರನೂರ, ಸಕ್ರೆಪ್ಪ ಹರನೂರ, ಶಂಕರಲಿಂಗ ಹನ್ನೂರ, ರೇವು ಜಾಧವ, ಈರಣ್ಣ ರಾಠೊಡ, ರಾಜು ಸಾಥಖೇಡ, ಯಲ್ಲಾಲಿಂಗ ತಳವಾರ ಹಾಗೂ ಪ್ರಾಂತ ರೈತ ಸಂಘದ ಮುಖಂಡರು ಭಾಗವಹಿಸಿದ್ದರು.