Advertisement

600 ಕೋಟಿ ಪ್ರಸ್ತಾವನೆ; 100 ಕೋಟಿ ನಿರೀಕ್ಷೆ

06:33 PM Feb 26, 2021 | Team Udayavani |

ರಾಯಚೂರು: ರಾಯಚೂರು ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಮಾದರಿಯಾಗಿ ನಿರ್ಮಿಸುವ ನಿಟ್ಟಿನಲ್ಲಿ ವಿವಿಧ ಆಯಾಮಗಳಲ್ಲಿ ಸರ್ಕಾರಕ್ಕೆ 600 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದು, ಈ ಸಾಲಿನ ಬಜೆಟ್‌ನಲ್ಲಿ 100 ಕೋಟಿ ರೂ. ಸಿಗುವ ನಿರೀಕ್ಷೆ ಇದೆ ಎಂದು ವಿವಿ ಕುಲಪತಿ ಪ್ರೊ| ಹರೀಶ ರಾಮಸ್ವಾಮಿ ತಿಳಿಸಿದರು.

Advertisement

ವಿವಿಯ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಾಲಿನ ಬಜೆಟ್‌ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಿದ್ದೇವೆ. ವಿಶ್ವವಿದ್ಯಾಲಯ ಇದೀಗ ತಾನೆ ಕಣ್ಣು ಬಿಡುತ್ತಿದ್ದು, ಮಾ.6ರಂದು ಮಂಡನೆಯಾಗುವ ಬಜೆಟ್‌ನಲ್ಲಿ ಮೊದಲ ಹಂತದ ಅನುದಾನ ಸಿಗುವ ನಿರೀಕ್ಷೆಯಲ್ಲಿದ್ದೇವೆ. ಇನ್ನೊಂದು ವಾರದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಆಸ್ತಿ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 2.25 ಕೋಟಿ ರೂ. ಅನುದಾನವಿದ್ದು, ಅದನ್ನು ವರ್ಗಾವಣೆ ಮಾಡಲು
ಗುಲ್ಬರ್ಗ ವಿವಿ ಆಡಳಿತ ಮಂಡಳಿ ಒಪ್ಪಿದೆ ಎಂದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಕುಟಿನೋ ಸಮಿತಿ ಈಗಾಗಲೇ ವಿವಿ ವಿಭಜನೆಗೆ ಸಂಬಂಧಿಸಿದ ವರದಿ ಸಲ್ಲಿಸಿದೆ. ಎಲ್ಲ ಆರಂಭಿಕ ಅಡೆತಡೆಗಳನ್ನು ಹಂತ-ಹಂತವಾಗಿ ನಿವಾರಿಸಿಕೊಂಡು ಹೋಗಲಾಗುತ್ತಿದೆ. ಧಾರವಾಡ ವಿವಿಯ ಕಾನೂನು ಶಾಸ್ತ್ರ ವಿಭಾಗದ ಡೀನ್‌ ಅವರನ್ನೇ ಕುಲಸಚಿವರನ್ನಾಗಿ ನೇಮಿಸಿದ್ದು, ಕಾನೂನಾತ್ಮಕ ತೊಡಕುಗಳ ನಿವಾರಣೆಗೂ ಸುಗಮವಾಗಿ ನಡೆಯುತ್ತಿದೆ ಎಂದು ವಿವರಿಸಿದರು.

ಸ್ನಾತಕೋತ್ತರ ಕೇಂದ್ರಕ್ಕೆ ಬೇಕಾದ ಸಿಬ್ಬಂದಿ ಮಾತ್ರ ಲಭ್ಯವಿದ್ದು, ಇನ್ನು ಮುಂದೆ ಹೊಸ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕಿದೆ. ಈಗಾಗಲೇ ಪ್ರತ್ಯೇಕ ಹಣಕಾಸು ಖಾತೆ ನಿರ್ವಹಿಸಲು ಗುಲ್ಬರ್ಗ ವಿವಿ ಒಪ್ಪಿಗೆ ನೀಡಿದ್ದು, ಅವರಲ್ಲಿರುವ 2.25 ಕೋಟಿ ಹಣ ವರ್ಗಾಯಿಸಲು ಒಪ್ಪಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದ 25-28ರಿಂದ ಕೋರ್ಸ್‌ ಆರಂಭಿಸಲಾಗುವುದು. ಅದರಲ್ಲೂ ತಾಂತ್ರಿಕ ಕೋರ್ಸ್‌ಗಳ ಆರಂಭಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಒಟ್ಟು 224 ಕಾಲೇಜುಗಳು ಮತ್ತು 19 ಸ್ನಾತಕೋತ್ತರ ಕೇಂದ್ರಗಳಿವೆ. ಗುಣಮಟ್ಟ ಮತ್ತು ಪ್ರಮಾಣ ಎರಡನ್ನೂ ಹೊಂದಿಸಿಕೊಂಡು ಹೋಗಲಾಗುವುದು.

Advertisement

ಗುಣಾತ್ಮಕತೆಗೆ ಒತ್ತು ನೀಡಲಾಗುವುದು. ವಿವಿ ಕ್ಯಾಂಪಸ್‌ ಸಮೀಕ್ಷೆ ನಡೆಸಲಾಗಿದೆ. ಅದರ ಜತೆಗೆ ಮರಗಳನ್ನು ಸಮೀಕ್ಷೆ ನಡೆಸಿದ್ದು, ದೊಡ್ಡ ಮರಳಿಗೆ ಧಕ್ಕೆ ಮಾಡದೆ ಕಟ್ಟಡಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಭೌಗೋಳಿಕ ಸಮೀಕ್ಷೆ ನಡೆಸಲಾಗಿದೆ ಎಂದರು.

ಕುಲಸಚಿವ ಪ್ರೊ| ವಿಶ್ವನಾಥ ಮಾತನಾಡಿ, ನೀರಿನ ಸಮಸ್ಯೆ ನಿವಾರಣೆ ಟಿಎಲ್‌ಬಿಸಿ ಕಾಲುವೆ ಮೂಲಕ ನೀರು ಪಡೆಯಲು ತಾಂತ್ರಿಕ ವಿಭಾಗದವರು ಯೋಜನೆ ರೂಪಿಸಿ ಕೊಟ್ಟಿದ್ದಾರೆ. ಅದರ ಜತೆಗೆ ಜಿಪಂಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. 26 ಬೋರ್‌  ವೆಲ್‌ ಕೊರೆದರೆ ಒಂದರಲ್ಲಿ ಮಾತ್ರ ನೀರು ಲಭ್ಯವಾಗಿದೆ. ಹೀಗಾಗಿ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲಾಗುತ್ತಿದೆ ಎಂದರು.

ಬಯೋ ಮೆಡಿಕಲ್‌ ರಿಸರ್ಚ್‌ ಸೆಂಟರ್‌ ಬಯೋ ಮೆಡಿಕಲ್‌ ರಿಸರ್ಚ್‌ ಸೆಂಟರ್‌ ಸ್ಥಾಪನೆಗೆ 57 ಕೋಟಿ ರೂ. ಅನುದಾನ ಕೋರಿ ಕೆಕೆಆರ್‌ ಡಿಬಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು 500 ಕೋಟಿ ರೂ. ಮೊತ್ತದ ಯೋಜನೆಯಾಗಿದೆ. ಹಂತ-ಹಂತವಾಗಿ ಕೇಂದ್ರವನ್ನು ಅಭಿವೃದ್ಧಿಪಡಿಸಬಹುದಾಗಿದೆ. ಇದು ಕೇವಲ ಅಧ್ಯಯನ ಕೇಂದ್ರವಾಗದೆ ತರಬೇತಿ ಕೇಂದ್ರ ಕೂಡ ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಈಗ ಧಾರವಾಡದಲ್ಲಿ ಮಾತ್ರ ಇಂಥ ಕೇಂದ್ರವಿದೆ. ಜಿನೆಟಿಕ್‌ ಲ್ಯಾಬ್‌ನಿಂದ ಈ ಭಾಗದಲ್ಲಿ ಅಧ್ಯಯನಕ್ಕೆ ಅನುಕೂಲವಾಗಲಿದೆ ಎಂದು ಕುಲಸಚಿವ ಪ್ರೊ| ವಿಶ್ವನಾಥ ವಿವರಿಸಿದರು.

500 ಎಕರೆ ಭೂಸ್ವಾಧೀನಕ್ಕೆ ಪ್ರಸ್ತಾವನೆ
ಈಗ ರಾಯಚೂರು ವಿವಿಗೆ 250 ಎಕರೆ ಸ್ಥಳ ಲಭ್ಯವಿದ್ದು, ಇನ್ನೂ 500 ಎಕರೆ ಭೂಮಿ ಸ್ವಾಧೀನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಿರುವ ಸ್ಥಳದಲ್ಲೇ 50 ಎಕರೆ ಸ್ಥಳದಲ್ಲಿ ಸೋಲಾರ್‌ ಪ್ಲಾಂಟ್‌ ಅಳವಡಿಸುವ ಚಿಂತನೆ ಮಾಡಲಾಗಿದೆ. ಹೀಗಾಗಿ ಸ್ಥಳಾಭಾವ ಸಮಸ್ಯೆ ಎದುರಾಗಬಹುದು. ಈಗ ಭೂಮಿ ನೀಡಿದವರಿಗೆ ಉದ್ಯೋಗ ನೀಡುವ ವಿಚಾರ ನನ್ನ ಗಮನಕ್ಕಿಲ್ಲ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕುಲಪತಿ ಪ್ರೊ| ಹರೀಶ ರಾಮಸ್ವಾಮಿ ತಿಳಿಸಿದರು.

ಈಗ ತಾತ್ಕಾಲಿಕವಾಗಿ ವಿವಿಯ ಲಾಂಛನ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಸಾಕಷ್ಟು ಅಭಿಪ್ರಾಯಗಳು ಬರುತ್ತಿವೆ. ಘೋಷವಾಕ್ಯದ ಬಗ್ಗೆಯೂ ಇನ್ನೂ ಅಂತಿಮಗೊಳಿಸಿಲ್ಲ. ಎಲ್ಲರ ಸಲಹೆ ಪಡೆದು ಸೂಕ್ತ ರೀತಿಯ ಲಾಂಛನ ಸಿದ್ಧಪಡಿಸಲಾಗುವುದು. ಅದರ ಜತೆಗೆ ವಿವಿಗೆ ಯಾರ ಹೆಸರಿಡಬೇಕು ಎಂಬುದು ಸರ್ಕಾರಕ್ಕೆ ಬಿಟ್ಟ ವಿಚಾರ.
ಪ್ರೊ| ಹರೀಶ ರಾಮಸ್ವಾಮಿ,
ಕುಲಪತಿ, ರಾಯಚೂರು ವಿವಿ

Advertisement

Udayavani is now on Telegram. Click here to join our channel and stay updated with the latest news.

Next