ಬೆಂಗಳೂರು: ದುಬೈನಿಂದ ಕಡಿಮೆ ಮೊತ್ತಕ್ಕೆ ಚಿನ್ನ ಕೊಡಿಸುವುದಾಗಿ ಚಿನ್ನ-ಬೆಳ್ಳಿ ಪಾಲಿಶ್(ಪಾನ್‌ಬ್ರೋಕರ್) ನನ್ನು ಕರೆಸಿಕೊಂಡು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದ ಐವರು ಆರೋಪಿಗಳನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುರುಬರಹಳ್ಳಿಯ ಜೆ.ಸಿ.ನಗರ ನಿವಾಸಿ ಮೊಹಮ್ಮದ್ ರಿಜ್ವಾನ್(24), ಇಂದಿರಾನಗರ ನಿವಾಸಿ ಮೊಹಮ್ಮದ್ ಇರ್ಫಾನ್(20), ರಾಜಾಜಿನಗರ ನಿವಾಸಿ ಆಶ್ರಫ್(20), ಸತೀಶ್(19) ಮತ್ತು ದಿವಾಕರ್(19) ಬಂಧಿತರು. ಆರೋಪಿಗಳಿಂದ 53 ಲಕ್ಷ ರೂ. ನಗದು ಮತ್ತು ಒಂದು ಕಾರು ಮತ್ತು ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಗಳು ಡಿ.11ರಂದು ಕೋಲಾರ ಜಿಲ್ಲೆ ಕೆ.ಜಿ.ಎಫ್ ಮೂಲದ ಸಂಕೇತ್(22) ಎಂಬುವರಿಗೆ ಕಡಿಮೆ ಮೊತ್ತದಲ್ಲಿ ಚಿನ್ನ ಕೊಡಿಸುವುದಾಗಿ ನಂಬಿಸಿ ಠಾಣೆ ವ್ಯಾಪ್ತಿಯ ಸಿದ್ದಾಪ್ಪಾಜಿ ಉದ್ಯಾನವನ ಬಳಿ ಕರೆಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ 60 ಲಕ್ಷ ರೂ. ದೋಚಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿ ಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾ ನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆರೋಪಿಗಳ ಪೈಕಿ ಮೊಹಮ್ಮದ್ ರಿಜ್ವಾನ್ ಶಂಕರಮಠ ವೃತ್ತದ ಬಳಿ ಜಿಮ್ ನಡೆಸುತ್ತಿದ್ದು, ಈತನ ಸಂಬಂಧಿ ಕರೀಂ ಖಾನ್ ಎಂಬಾತ ದೂರುದಾರ ಸಂದೇಶ್‌ನ ತಂದೆಗೆ ಬಹಳ ವರ್ಷಗಳಿಂದ ಪರಿಚಯ ಇತ್ತು. ಹೀಗಾಗಿ ಈ ಹಿಂದೆ ಕರೀಂಖಾನ್, ತನ್ನ ಸಂಬಂಧಿಯೊಬ್ಬ ದುಬೈನಲ್ಲಿದ್ದು, ಆತನಿಂದ ಕಡಿಮೆ ಮೊತ್ತಕ್ಕೆ ಚಿನ್ನ ಕೊಡಿಸುತ್ತೇನೆ ಎಂದು ಹೇಳಿದ್ದರು. ಆದರಿಂದ ಕರೀಂಖಾನ್ ಮೂಲಕ ಸಂದೇಶ್, ಮೊಹಮ್ಮದ್ ರಿಜ್ವಾನ್‌ನನ್ನು ಸಂಪರ್ಕಿಸಿದ್ದಾನೆ. ಅದನ್ನು ದುರುಪಯೋಗ ಪಡಿಸಿಕೊಂಡ ರಿಜ್ವಾನ್ ತನ್ನ ಸಹಚರರ ಮೂಲಕ ಸಂದೇಶ್ ಮೇಲೆ ದಾಳಿ ನಡೆಸಿ ಸುಲಿಗೆಗೆ ಸಿದ್ದತೆ ನಡೆಸಿದ್ದ ಎಂದು ಹೇಳಿದರು.
ಸಾಲ ತಂದಿದ್ದ ಹಣ ಸುಲಿಗೆ: ಒಂದೂವರೆ ಕೆ.ಜಿ. ಚಿನ್ನ ಕೊಡಿಸುತ್ತೇನೆ ಎಂದು ನಂಬಿಸಿದ್ದ ರಿಜ್ವಾನ್ ಮಾತು ನಂಬಿದ ಸಂದೇಶ್, ತನ್ನ ಬಳಿ ಕೂಡಿಟ್ಟಿದ್ದ ನಗದು ಹಾಗೂ ಸಂಬಂಧಿಕರಿಂದ ಸಾಲ ಪಡೆದು 60 ಲಕ್ಷ ರೂ. ತೆಗೆದುಕೊಂಡು ಬೆಂಗಳೂರಿಗೆ ಬಂದಿದ್ದಾನೆ. ಆರೋ ಪಿಗಳು ಕಾರಿನಲ್ಲಿ ಕೂರಿಸಿಕೊಂಡು ಕೆಲವೆಡೆ ಸುತ್ತಾಡಿಸಿ, ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ 60 ಲಕ್ಷ ರೂ. ಸುಲಿಗೆ ಮಾಡಿ ಪರಾರಿಯಾಗಿದ್ದರು. ಸದ್ಯ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿ ರುವ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.