ರಾಮನಗರ: ಕಳೆದ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಗೆ ಶೇ.60.96ರಷ್ಟು ಫಲಿತಾಂಶ ಲಭ್ಯವಾಗಿದೆ. ಫಲಿತಾಂಶ ಗಳಿಕೆಯಲ್ಲಿ ರಾಜ್ಯದಲ್ಲಿ ರಾಮನಗರ ಜಿಲ್ಲೆ 25ನೇ ಸ್ಥಾನ ಪಡೆದುಕೊಂಡಿದೆ. 2019-20ನೇ ಸಾಲಿನಲ್ಲಿ ಶೇ. 62.08ರಷ್ಟು ಫಲಿತಾಂಶ ಪಡೆದು ಜಿಲ್ಲೆ 24ನೇ ಸ್ಥಾನದಲ್ಲಿತ್ತು. ಕಳೆದ ಸಾಲಿಗಿಂತ ಫಲಿತಾಂಶ ಗಳಿಕೆಯಲ್ಲಿಸಾಕಷ್ಟು ಸುಧಾರಣೆಯಾಗಲಿದೆ ಎಂದು ಪಿಯು ಕಾಲೇಜುಗಳು ಮತ್ತು ಇಲಾಖೆ ನಿರೀಕ್ಷೆಯಲ್ಲಿದ್ದರು.
ಇದೀಗ ಮತ್ತೂಂದು ಸ್ಥಾನ ಕುಸಿಯುವುದರೊಂದಿಗೆ ಜಿಲ್ಲೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಹೊಸ, ಪುನರಾವರ್ತಿತ ಮತ್ತು ಖಾಸಗಿ ವಿದ್ಯಾರ್ಥಿಗಳ ಒಟ್ಟು ಫಲಿತಾಂಶ ತೆಗೆ ದುಕೊಂಡರೆ ಶೇ. 54.12 ಫಲಿತಾಂಶ ಲಭ್ಯವಾದಂತಾಗಿದೆ. ಜಿಲ್ಲೆಯಲ್ಲಿ ಈ ಬಾರಿ 7,506 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ಪೈಕಿ 4576 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 60.96ರಷ್ಟು ಫಲಿತಾಂಶ ಬಂದಿದೆ.
1,584 ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 434 ಮಂದಿ ಪಾಸಾಗಿದ್ದು, ಶೇ. 27.4 ಫಲಿತಾಂಶ ಲಭಿಸಿದೆ. ಖಾಸಗಿಯಾಗಿ 287 ಮಂದಿ ವಿದ್ಯಾರ್ಥಿಗಳ ಪೈಕಿ 65 ಮಂದಿ ಮಾತ್ರ ಪಾಸಾಗಿದ್ದು. ಶೇ. 22.65 ಫಲಿತಾಂಶ ಲಭ್ಯವಾಗಿದೆ. ಬಾಲಕಿಯರೇ ಮೇಲುಗೈ: ಲಿಂಗವಾರು ಫಲಿತಾಂಶದಲ್ಲಿ ಎಂದಿನಂತೆ ಈ ಭಾರಿಯು ಬಾಲಕೀಯರೇ ಮೇಲುಗೈ ಸಾಧಿಸಿದ್ದಾರೆ. 4,252 ಬಾಲಕರ ಪೈಕಿ 1,925 ಮಂದಿ ಉತ್ತೀರ್ಣರಾಗಿದ್ದಾರೆ. ಶೇ. 45.27ರಷ್ಟು ಫಲಿತಾಂಶ ಲಭ್ಯವಾಗಿದೆ. 5,125 ಬಾಲಕಿಯರ ಪೈಕಿ 3,150 ಮಂದಿ ಉತ್ತೀರ್ಣರಾಗಿದ್ದು, ಶೇ.61.46 ಫಲಿತಾಂಶ ಲಭ್ಯವಾಗಿದೆ.
ನಗರ ವಿದ್ಯಾರ್ಥಿಗಳ ಸಾಧನೆ: ಪ್ರದೇಶವಾರು ಫಲಿತಾಂಶ ಗಮನಿಸಿದರೆ ಗ್ರಾಮೀಣ ಭಾಗಕ್ಕಿಂತ ನಗರ ವ್ಯಾಪ್ತಿಯ ವಿದ್ಯಾರ್ಥಿಗಳೇ ಹೆಚ್ಚು ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪಟ್ಟಣ ಪ್ರದೇಶದಿಂದ 6,778 ವಿದ್ಯಾರ್ಥಿಗಳ ಪೈಕಿ 3,841 (ಶೇ. 56.67)ವಿದ್ಯಾರ್ಥಿಗಳು ಪಾಸಾಗಿದ್ದಾರೆ. 2,599 ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪೈಕಿ 1,234 ಮಂದಿ ಉತ್ತೀರ್ಣರಾಗಿದ್ದು, ಶೇ. 47.48 ಫಲಿತಾಂಶ ಬಂದಿದೆ.
ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳೇ ಮುಂದೆ: ಮಾಧ್ಯಮವಾರು ಫಲಿತಾಂಶದಲ್ಲಿ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತಂದುಕೊಟ್ಟಿದ್ದಾರೆ. ಕನ್ನಡ ಮಾಧ್ಯಮದಲ್ಲಿ 4,666 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ಪೈಕಿ 1936 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.41.49 ಫಲಿತಾಂಶಗಳಿಸಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ 4,711 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 3,139 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅವರು ಶೇ. 66.63 ಫಲಿತಾಂಶ ತಂದುಕೊಟ್ಟಿದ್ದಾರೆ.