Advertisement

ರಟ್ಟಾಡಿ –ಹೆಂಗವಳ್ಳಿ ರಸ್ತೆ: ದುರಸ್ತಿಗೆ ಕೂಡಿ ಬರದ ಕಾಲ

01:07 AM Jan 23, 2020 | Team Udayavani |

ಗೋಳಿಯಂಗಡಿ: ರಟ್ಟಾಡಿಯಿಂದ ಹೆಂಗವಳ್ಳಿಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯತ್‌ ರಸ್ತೆಯ ಅಭಿವೃದ್ಧಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ. 6 ವರ್ಷಗಳ ಹಿಂದೆ ಈ ರಸ್ತೆಗೆ ಡಾಮರು ಆಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಈ ರಸ್ತೆಯ ಬಗ್ಗೆ ಯಾರು ಕೂಡ ಗಮನವೇ ಹರಿಸಿಲ್ಲ. ಈಗ ಸಂಪೂರ್ಣ ಹದಗೆಟ್ಟು ಹೋಗಿದ್ದು, ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ.

Advertisement

ರಟ್ಟಾಡಿಯಿಂದ ಹೆಂಗವಳ್ಳಿ, ಗೋಳಿಯಂಗಡಿ, ಹೆಬ್ರಿ ಮತ್ತಿತರ ಊರುಗಳಿಗೆ ಸಂಪರ್ಕ ಕಲ್ಪಿಸುವ ಜಿ. ಪಂ. ರಸ್ತೆ ಇದಾಗಿದೆ. ಸುಮಾರು 6 ಕಿ.ಮೀ. ರಸ್ತೆಯುದ್ದಕ್ಕೂ ಹೊಂಡಗಳೇ ತುಂಬಿದ್ದು, ವಾಹನ ಸವಾರರು ನಿತ್ಯ ಸರ್ಕಸ್‌ ಮಾಡಿಕೊಂಡೇ ವಾಹನ ಚಲಾಯಿಸಬೇಕಾಗಿದೆ.

2014ರಲ್ಲಿ ಡಾಮರು
ಈ ಹೆಂಗವಳ್ಳಿ- ರಟ್ಟಾಡಿಗೆ ಸಂಪರ್ಕಿಸುವ ಸುಮಾರು 6 ಕಿ.ಮೀ. ಉದ್ದದ ರಸ್ತೆಗೆ 2014ರಲ್ಲಿ ಡಾಮರು ಕಾಮಗಾರಿಗೆ ನಡೆದಿತ್ತು. ಅನಂತರ ಅಲ್ಲಿಂದ ಈವರೆಗೆ ಈ ರಸ್ತೆಗೆ ಕನಿಷ್ಠ ತೇಪೆ ಹಾಕುವ ಕಾರ್ಯವೂ ಆಗಿಲ್ಲ. ಈ ರಸ್ತೆಯನ್ನು ಈ ಭಾಗದ ಜನಪ್ರತಿನಿಧಿಗಳು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎನ್ನುವುದು ಇಲ್ಲಿನ ಗ್ರಾಮಸ್ಥರ ಆರೋಪ.

ಯಾವೆಲ್ಲ ಊರುಗಳು?
ಈ ರಸ್ತೆಯು ರಟ್ಟಾಡಿಯಿಂದ ಹೆಂಗವಳ್ಳಿಗೆ, ತೊಂಭತ್ತು, ಗೋಳಿಯಂಗಡಿ, ಹೆಬ್ರಿ, ಮಣಿಪಾಲ, ಉಡುಪಿಗೆ ಸಂಪರ್ಕಿಸಿದರೆ, ಈಚೆಯಿಂದ ಅಮಾಸೆಬೈಲು, ಹಾಲಾಡಿ, ಸಿದ್ದಾಪುರ, ಮತ್ತಿತರ ಊರುಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ನಿತ್ಯ ನೂರಾರು ಮಂದಿ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ.

ಅನೇಕ ವರ್ಷದಿಂದ ಮನವಿ
ಈ ರಸ್ತೆಯ ದುರಸ್ತಿಗೆ ಗ್ರಾಮಸ್ಥರೆಲ್ಲ ಅನೇಕ ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಲೇ ಇದ್ದೇವೆ. ಹೆಂಗವಳ್ಳಿ ಗ್ರಾ.ಪಂ.ಗೂ ಕೂಡ ಮನವಿ ಕೊಟ್ಟಿದ್ದೇವೆ. ಪಂಚಾಯತ್‌ ಈ ಸಂಬಂಧ ನಿರ್ಣಯ ಮಾಡಿ ಕಳುಹಿಸಿದರೂ ಏನೂ ಪ್ರಯೋಜನವಾಗಿಲ್ಲ.
ಕಳೆದ ಸಲ ಶಾಸಕರು 75 ಲಕ್ಷ ರೂ. ದುರಸ್ತಿಗೆ ಇಡಲಾಗಿದೆ ಎಂದು ತಿಳಿಸಿದ್ದರು.
ಈ ಬಾರಿಯಾದರೂ ಈ ರಸ್ತೆಗೆ ಮರು ಡಾಮರು ಆಗಲಿ.
-ಭೋಜ ಮಡಿವಾಳ ಹೆಂಗವಳ್ಳಿ, ಸ್ಥಳೀಯರು

Advertisement

ಬಸ್‌ ಸಂಚಾರ
ಈ ಹದಗೆಟ್ಟ ಮಾರ್ಗದಲ್ಲಿಯೇ ದಿನಕ್ಕೆ ಎರಡು ಸರಕಾರಿ ಬಸ್‌ ಹಾಗೂ 7-8 ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಇದಲ್ಲದೆ ಪ್ರತಿನಿತ್ಯ 50 -60 ಗೂಡ್ಸ್‌ ವಾಹನಗಳು, ನೂರಾರು ದ್ವಿಚಕ್ರ, ರಿಕ್ಷಾ ಸಹಿತ ಖಾಸಗಿ ವಾಹನ, ಹತ್ತಾರು ಶಾಲಾ ಬಸ್‌ಗಳು ಇದೇ ರಸ್ತೆಯನ್ನು ಆಶ್ರಯಿಸಿವೆ. ಇನ್ನು ಹೆಂಗವಳ್ಳಿಯಿಂದ ಬಿದ್ಕಲ್‌ಕಟ್ಟೆ, ಕುಂದಾಪುರ, ಶಂಕರನಾರಾಯಣ ಕಾಲೇಜಿಗೆ ಅನೇಕ ಮಂದಿ ವಿದ್ಯಾರ್ಥಿಗಳು ತೆರಳುತ್ತಾರೆ.
ಸದ್ಯಕ್ಕೆ ಯಾವುದೇ ಅನುದಾನ ಇಲ್ಲದಿರುವುದರಿಂದ ಮೀಸಲಿಟ್ಟಿಲ್ಲ. ಮುಂದಿನ ದಿನಗಳಲ್ಲಿ ಈ ರಟ್ಟಾಡಿ – ಹೆಂಗವಳ್ಳಿ ರಸ್ತೆ ದುರಸ್ತಿಗೆ ಜಿ.ಪಂ. ಅಥವಾ ಶಾಸಕರ ಬಳಿ ಮಾತನಾಡಿ ಅನುದಾನ ಮಂಜೂರಾತಿಗೆ ಪ್ರಯತ್ನಿಸಲಾಗುವುದು.-ಸುಪ್ರೀತಾ ಉದಯ ಕುಲಾಲ್‌, ಜಿ.ಪಂ. ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next