Advertisement

6 ವಾಹನಗಳು ಜಖಂ: ಲಘು ಲಾಠಿ ಪ್ರಹಾರ; ಪನ್ನೀರ್‌ ಬೆಂಬಲಿಗರಿಂದ ದಾಂಧಲೆ?

03:45 AM Feb 16, 2017 | Team Udayavani |

ಬೆಂಗಳೂರು: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್‌ ಮತ್ತು ಸಹವರ್ತಿಗಳು ವಿಶೇಷ ನ್ಯಾಯಾಲಯಕ್ಕೆ ಶರಣಾಗಲು ಆಗಮಿಸಿದ ಸಂದರ್ಭದಲ್ಲಿ ಕೆಲವರು ದಾಂಧಲೆ ನಡೆಸಿದ್ದರಿಂದ  ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು.

Advertisement

ತಮಿಳುನಾಡಿನ ಹಂಗಾಮಿ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಅಭಿಮಾನಿಗಳು ಎಂದು ಹೇಳಲಾದ 15ರಿಂದ 20 ಜನರು ಶಶಿಕಲಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ 420 ಶಶಿಕಲಾ, ಜಯಲಲಿತಾಗೆ ಮೋಸ ಮಾಡಿದೆಯಲ್ಲಾ ಎಂದು ತಮಿಳಿನಲ್ಲಿ ನಿಂದಿಸಿ ತಮಿಳುನಾಡು ನೋಂದಣಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಅಷ್ಟೆ ಅಲ್ಲದೆ ಚಪ್ಪಲಿಗಳನ್ನು ಹಾಗೂ ಕಲ್ಲುಗಳನ್ನು ಶಶಿಕಲಾ ಬೆಂಬಲಿಗರಿದ್ದ ಕಾರುಗಳ ಮೇಲೆ ತೂರಿದರು. ಇದರಿಂದ 5 ಸ್ಕಾರ್ಪಿಯೋ, 1 ಇನೋವಾ ಕಾರಿನ ಗಾಜು ಪುಡಿಪುಡಿಯಾದವು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಈ ಸಂದರ್ಭದಲ್ಲಿ ಜೈಲಿನ ಪ್ರವೇಶ ದ್ವಾರದ ಬಳಿ ನೂಕುನುಗ್ಗಲು ಉಂಟಾಗಿದ್ದರಿಂದ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

ಶಶಿಕಲಾ ಕಾರು ಹಿಂಬಾಲಿಸಿ ಬರುತ್ತಿದ್ದ ಕಾರುಗಳನ್ನು ಎಲೆಕ್ಟ್ರಾನಿಕ್‌ ಸಿಟಿ ರಸ್ತೆಯಲ್ಲಿ ಕೆಲವು ಕಿಡಿಗೇಡಿಗಳು ತಡೆದು ಬ್ಯಾಟ್‌ ಮತ್ತು ದೊಣ್ಣೆಗಳಿಂದ ಕಾರಿನ ಗಾಜುಗಳನ್ನು ಹೊಡೆದು ಹಾಕಿದರು. ಇದೇ ವೇಳೆ ಶಶಿಕಲಾ ಫಾರ್ವಡ್‌ ಬ್ಲಾಕ್‌ ಪಕ್ಷದ ಮುಖಂಡ ಮಹೇಶ್ವರನ್‌ ಕಾರು ಜಖಂಗೊಳಿಸಲಾಗಿತ್ತು.ಇದರಿಂದ ಸಿಟ್ಟಿಗೆದ್ದ ಮಹೇಶ್ವರನ್‌ ಜೈಲಿನ ಹೊರಗೆ ರಕ್ಷಣೆ ನೀಡದ ಪೊಲೀಸರು ನಮ್ಮ ಚಿನ್ನಮ್ಮಾಗೆ ಜೈಲಿನ ಒಳಗೆ ಹೇಗೆ ರಕ್ಷಣೆ ನೀಡುತ್ತಾರೆ ಎಂದು ಪ್ರಶ್ನಿಸಿದರು. ಕಾರಿನ ಮೇಲೆ ಕಲ್ಲು ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಿ ಜಖಂಗೊಳಿಸಿದ ಪನ್ನೀರ್‌ ಸೆಲ್ವಂ ಬೆಂಬಲಿಗರು  ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

Advertisement

ಭಾರಿ ಭದ್ರತೆ
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್‌, ಜೆ.ಇಳವರಸಿ, ವಿ.ಎನ್‌.ಸುಧಾಕರನ್‌ ಪರಪ್ಪನ ಅಗ್ರಹಾರದ ಆವರಣದಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಶರಣಾಗಲು ಆಗಮಿಸಿದ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ನೇತೃತ್ವದಲ್ಲಿ ಜೈಲು ಸುತ್ತ ಬಿಗಿ ಭದ್ರತೆ ಮಾಡಲಾಗಿತ್ತು.

ಜೈಲಿನ ಸುತ್ತಲೂ ನಿಷೇದಾಜ್ಞೆ ಜಾರಿಗೊಳಿಸಲಾಗಿತ್ತು. ಅಲ್ಲದೆ, ಮೀಸಲು ಪಡೆ ಪೊಲೀಸರು , 5 ಎಸಿಪಿ, 15 ಇನ್‌ಸ್ಪೆಕ್ಟರ್‌, 20 ಸಬ್‌ ಇನ್‌ಸ್ಪೆಕ್ಟರ್‌ ಸೇರಿದಂತೆ 500ಮಂದಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಇದಕ್ಕೂ ಮುನ್ನ ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ಸೂದ್‌ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಪರಾಧಿಗಳನ್ನು ಕಾರಾಗೃಹಕ್ಕೆ ಕರೆತರುವಾಗ ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ಕೈಗೊಂಡಿದ್ದರು. ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಮಾರ್ಗವಾದ ಅತ್ತಿಬೆಲೆ, ಕೃಷ್ಣಗಿರಿ, ಹೊಸೂರು ಚೆಕ್‌ಪೋಸ್ಟ್‌ ಹಾಗೂ ಪರಪ್ಪನ ಅಗ್ರಹಾರಕ್ಕೆ ಬರುವ ಮಾರ್ಗಗಳ ಇಕ್ಕೆಲಗಳಲ್ಲಿ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next