ಹೊಸದಿಲ್ಲಿ: ಪೆಗಾಸಸ್ ವಿವಾದದ ಬಗ್ಗೆ ಚರ್ಚೆಯಾಗಬೇಕು ಎಂದು ಪಟ್ಟು ಹಿಡಿದು ರಾಜ್ಯಸಭೆಯಲ್ಲಿ ಪ್ರತಿಭಟಿಸುತ್ತಿದ್ದ ಆರು ಮಂದಿ ಟಿಎಂಸಿ ಸಂಸದರನ್ನು ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ.
ನಿಯಮ 255ರ ಅನ್ವಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಈ ಕ್ರಮ ಕೈಗೊಂಡಿದ್ದಾರೆ. ಪೆಗಾಸಸ್ ವಿಚಾರದ ಬಗ್ಗೆ ಚರ್ಚೆ ನಡೆಸಲು ಸದನ ಸಮಿತಿಯಲ್ಲಿ ಚರ್ಚೆಯಾಗಿ ನಿರ್ಧಾರವಾಗದೆ, ಅದನ್ನು ಚರ್ಚೆಗೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ವಾಪಸ್ ಸೀಟ್‌ಗಳತ್ತ ತೆರಳಿ ಎಂದು ಮನವಿ ಮಾಡಿದರು. ಅದನ್ನು ಲೆಕ್ಕಿಸದೆ 6 ಸಂಸದರು ಭಿತ್ತಿಪತ್ರ ಹಿಡಿದುಕೊಂಡು ಸದನ ಮುಂಗಟ್ಟೆ ಯಲ್ಲಿ ಪ್ರತಿಭಟನೆ ನಡೆಸಿದರು. ಹೀಗಾಗಿ ಕ್ರುದ್ಧಗೊಂಡ ಸಂಸದರು ಗದ್ದಲ ಮುಂದು ವರಿಸಿದರು. ಗತ್ಯಂತರವಿಲ್ಲದೆ ನಿಯಮ 255ರ ಅನ್ವಯ ಸಭಾಪತಿ ಸಂಸದರನ್ನು ದಿನದ ಮಟ್ಟಿಗೆ ಅಮಾನತು ಮಾಡುವ ನಿರ್ಧಾರ ಪ್ರಕಟಿಸಿದರು.
ಇದೇ ವೇಳೆ, ದೇಶದಲ್ಲಿ ವಿಮಾನಯಾನ ಸೌಲಭ್ಯ ವಿಸ್ತರಿಸುವ ನಿಟ್ಟಿನಲ್ಲಿ ಅನುಕೂಲವಾಗುವಂತೆ ಭಾರತದ ವಿಮಾನ ನಿಲ್ದಾಣಗಳ ವಿತ್ತೀಯ ನಿಯಂತ್ರಣ ಪ್ರಾಧಿಕಾರ ಮಸೂದೆ 2021 (ಎಇಆರ್‌ಎ)ನ್ನು ಅಂಗೀಕರಿಸಲಾಯಿತು. ನಂತರ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
2 ಮಸೂದೆ ಅಂಗೀಕಾರ :
ಲೋಕಸಭೆಯಲ್ಲಿ ಪರಿಸ್ಥಿತಿ ಭಿನ್ನವೇನೂ ಆಗಿರಲಿಲ್ಲ. ಗದ್ದಲದ ನಡುವೆಯೇ ತೆಂಗು ಅಭಿವೃದ್ಧಿ ಮಂಡಳಿ (ತಿದ್ದುಪಡಿ) ಮಸೂದೆ, ರಾಷ್ಟ್ರೀಯ ರಾಜಧಾನಿ ವ್ಯಾಪ್ತಿ ಪ್ರದೇಶ ಮತ್ತು ಸುತ್ತುಮುತ್ತಲ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ನಿರ್ವಹಣೆಗೆ ಆಯೋಗ ಮಸೂದೆಕಕ್ಕೆ ಅನುಮತಿ ಪಡೆದುಕೊಳ್ಳಲಾಗಿದೆ. ನಂತರ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.