Advertisement

ದಿಲ್ಲಿ, ಈಶಾನ್ಯ ಅಸ್ತವ್ಯಸ್ತ; ದೇಶಾದ್ಯಂತ ವಾಡಿಕೆಗಿಂತ ಶೇ.6ರಷ್ಟು ಹೆಚ್ಚು ಮಳೆ

12:35 PM Jul 20, 2020 | mahesh |

ಹೊಸದಿಲ್ಲಿ: ದೇಶಾದ್ಯಂತ ಈ ಬಾರಿ ಮುಂಗಾರು ವಾಡಿಕೆಗಿಂತ ಶೇ. 6ರಷ್ಟು ಹೆಚ್ಚು ಸುರಿದಿದ್ದು, ದಕ್ಷಿಣ ಭಾಗ, ಕೇಂದ್ರೀಯ ಭಾಗ, ಉತ್ತರ ಹಾಗೂ ಈಶಾನ್ಯದಲ್ಲಿ ಅಧಿಕ ವರ್ಷಧಾರೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Advertisement

ಏತನ್ಮಧ್ಯೆ, ರಾಷ್ಟ್ರರಾಜಧಾನಿ ದಿಲ್ಲಿ, ಗೋವಾ, ಉತ್ತರಾ ಖಂಡ, ಅಸ್ಸಾಂ, ಮೇಘಾಲಯ ಸೇರಿದಂತೆ ಈಶಾನ್ಯ ಭಾಗದಲ್ಲಿ ರವಿವಾರ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅಸ್ಸಾಂನಲ್ಲಿ ಪ್ರವಾಹ ಮುಂದುವರಿದಿದ್ದು, ಇದುವರೆಗೆ 107 ಮಂದಿ ಮೃತಪಟ್ಟಿದ್ದಾರೆ. ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಅಸ್ಸಾಂಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ದಿಲ್ಲಿಯಲ್ಲಿ ರವಿವಾರ ಬೆಳಗ್ಗೆ ಮೂರ್‍ನಾಲ್ಕು ಗಂಟೆಗಳ ಧಾರಾಕಾರವಾಗಿ ಸುರಿದ ಮಳೆಯಿಂದ ಬಹುತೇಕ ರಸ್ತೆಗಳು ಜಲಾವೃತವಾಗಿದ್ದವು. ಕಟ್ಟಡ ವೊಂದು ಕೊಚ್ಚಿ ಹೋಗಿದ್ದು, ಹಲವು ಮನೆಗಳಿಗೆ ಹಾನಿಯಾ ಗಿದೆ. ಇಬ್ಬರು ಮೃತಪಟ್ಟಿದ್ದಾರೆ. ಉತ್ತರಾಖಂಡ, ಗೋವಾದಲ್ಲಿ ಮಳೆ ಗೆ ವಿವಿಧೆಡೆ ಸಾಕಷ್ಟು ಹಾನಿಯಾಗಿದೆ.

ದಿಲ್ಲಿ ತತ್ತರ: ರಾಷ್ಟ್ರ ರಾಜಧಾನಿ ದಿಲ್ಲಿ ಯಲ್ಲಿ ಮಳೆ ತನ್ನ ರುದ್ರನರ್ತನ ತೋರಿದೆ. ರವಿವಾರ ಬೆಳಗ್ಗೆ ಸತತವಾಗಿ ಸುರಿದ ಭಾರೀ ಮಳೆಯಿಂದ ನಾಲ್ವರು ಸಾವನ್ನಪ್ಪಿದ್ದು, ಕಟ್ಟಡವೊಂದು ಕೊಚ್ಚಿ ಹೋಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಲಾವೃತವಾಗಿರುವ ಮಿಂಟೊ ಸೇತುವೆ ಬಳಿ ಆಟೋ ಚಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇದೇ ಸೇತುವೆ ಸಮೀಪ ಡಿಟಿಸಿ ಬಸ್‌ವೊಂದು ಬಹುತೇಕವಾಗಿ ಮುಳುಗಿ ಹೋಗಿತ್ತು. ಕೂಡಲೇ ಅಗ್ನಿ ಶಾಮಕದಳ ಸಿಬಂದಿ ಸ್ಥಳಕ್ಕೆ ಧಾವಿಸಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಜಹಾಗಿರ್‌ಪುರಿಯಲ್ಲಿ ವಿದ್ಯುತ್‌ ಸ್ಪರ್ಶಿಸಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾರೆ.

ಕೊಚ್ಚಿ ಹೋದ ಕಟ್ಟಡ: ದಿಲ್ಲಿಯ ಐಟಿಒ ಪ್ರದೇಶದಲ್ಲಿ ನೀರು ಹರಿಯುವ ರಭಸಕ್ಕೆ ಕಟ್ಟಡವೊಂದು ಸಂಪೂರ್ಣವಾಗಿ ಕುಸಿದು ನೀರಿನಲ್ಲಿ ಕೊಚ್ಚಿ ಹೋಗಿದೆ. ಈ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿವಿಧೆಡೆ ಮರಗಳು, ಕಂಬಗಳು ಧರೆಗುರುಳಿವೆ. ಏತನ್ಮಧ್ಯೆ, ಮುಂಗಾರು ಮಳೆ ಸಂಬಂಧ ದಿಲ್ಲಿ ಸರಕಾರ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಮೊದಲ ಮಳೆಗೆ ಇಷ್ಟು ಆವಾಂತರ ಸೃಷ್ಟಿಯಾಗಿದೆ ಎಂದು ಬಿಜೆಪಿ ಕಿಡಿಕಾರಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ದಿಲ್ಲಿ ಸರಕಾರ ಹಾಗೂ ನಗರ ಪಾಲಿಕೆ ಕೊರೊನಾ ನಿಯಂತ್ರಿಸುವಲ್ಲಿ ನಿರತವಾಗಿವೆ. ಇದು ಪರಸ್ಪರ ದೂಷಿಸುವ ಸಮಯವಲ್ಲ. ಎಲ್ಲರೂ ತಮ್ಮ ಜವಾಬ್ದಾರಿ ನಿರ್ವಹಿಸಬೇಕಿದೆ ಎಂದು ತಿಳಿಸಿದ್ದಾರೆ.

ಉತ್ತರಾಖಂಡದಲ್ಲಿ ಹಾನಿ: ಉತ್ತರಾಖಂಡದಲ್ಲಿ ಶನಿವಾರ ರಾತ್ರಿ ಹಾಗೂ ರವಿವಾರ ಭಾರೀ ಮಳೆ ಸುರಿದಿದೆ. ವಿವಿಧೆದೆ ರಸ್ತೆಗಳು, ಮನೆಗಳಿಗೆ ಸಾಕಷ್ಟು ಹಾನಿಯಾ ಗಿದೆ. ಮುನ್ಸಿಯಾರಿ ಹಳ್ಳಿಯಲ್ಲಿ ಐದು ಮನೆಗಳು ಕುಸಿದು ಹೋಗಿವೆ. ಪಣಜಿಯಲ್ಲಿ ಕಟ್ಟಡ ಕುಸಿತ: ಗೋವಾದಲ್ಲಿ ರವಿವಾರ ಸಾಕಷ್ಟು ಮಳೆ ಸುರಿದಿದೆ. ರಾಜಧಾನಿ ಪಣಜಿಯಲ್ಲಿ ಮಳೆಯಿಂದ ಹಳೆಯ ಕಟ್ಟಡವೊಂದು ಕುಸಿದ ಪರಿಣಾಮ ಮೂವರು ಗಾಯಗೊಂಡಿದ್ದಾರೆ.

Advertisement

ಅಸ್ಸಾಂಗೆ ಅಗತ್ಯ ನೆರವು: ಪಿಎಂ ಮೋದಿ ಭರವಸೆ
ಗುವಾಹಾಟಿ: ಅಸ್ಸಾಂ ಪ್ರವಾಹಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರವಿವಾರ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ ಜೊತೆಗೆ ವೀಡಿಯೋ ಮಾತುಕತೆ ನಡೆಸಿ, ರಾಜ್ಯಕ್ಕೆ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ, ಕೊರೊನಾ ಸ್ಥಿತಿ, ತೈಲಬಾವಿ ಅಗ್ನಿ ಅವಘಡ ಹಾಗೂ ಪ್ರವಾಹ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಪ್ರವಾಹದಿಂದ ಇದುವರೆಗೆ 107 ಮಂದಿ ಮೃತಪಟ್ಟಿದ್ದಾರೆ. ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ 100ಕ್ಕೂ ಅಧಿಕ ವನ್ಯಜೀವಿಗಳು ಮೃತಪಟ್ಟಿವೆ. ಈ ಮಧ್ಯೆ, ರಾಜ್ಯದಲ್ಲಿ ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆ 30 ಸಾವಿರ ತಲುಪಿದ್ದು, ಗುವಾಹಟಿವೊಂದರಲ್ಲೇ 10 ಸಾವಿರ ಪ್ರಕರಣಗಳು ಕಂಡು ಬಂದಿವೆ. ಕೊರೊನಾ ಸಂಬಂಧ ಬಳಸಿದ ಪಿಪಿಇ ಕಿಟ್‌ಗಳು, ಮಾಸ್ಕ್, ಗ್ಲೌಸ್‌ಗಳು ಸೇರಿದಂತೆ ವೈದ್ಯಕೀಯ ತ್ಯಾಜ್ಯ ವಸ್ತುಗಳು ಕೂಡ ನೀರಿನಲ್ಲಿ ಕೊಚ್ಚಿ ಹೋಗಿವೆ. ಇವುಗಳನ್ನು ಸಮರ್ಪಕ ವಿಲೇವಾರಿ ಮಾಡದೇ ಒಂದೆಡೆ ಹಾಕಲಾಗಿತ್ತು.

ಸಿಡಿಲಿನಿಂದ ಹತ್ತು ಸಾವು
ಬಿಹಾರದ ಏಳು ಜಿಲ್ಲೆಗಳಲ್ಲಿ ಸಿಡಿಲಿನಿಂದಾಗಿ ಹತ್ತು ಮಂದಿ ಅಸುನೀಗಿದ್ದಾರೆ. ಪೂರ್ನಿಯಾದಲ್ಲಿ 3, ಬೆಗುಸರೈನಲ್ಲಿ 2, ಪಟ್ನಾ, ಸಹರ್ಸಾ, ಪೂರ್ವ ಚಂಪಾರಣ್‌, ಮಾಧೇಪುರ ಮತ್ತು ದರ್ಭಾಂಗ ಜಿಲ್ಲೆಗಳಲ್ಲಿ ತಲಾ ಒಬ್ಬೊಬ್ಬರು ಅಸುನೀಗಿದ್ದಾರೆ. ಅಸುನೀಗಿದ ವಕ್ತಿಗಳ ಕುಟುಂಬ ಸದಸ್ಯರಿಗೆ ತಲಾ 4 ಲಕ್ಷ ರೂ. ಪರಿಹಾರ ಪ್ರಕಟಿಸಲಾಗಿದೆ. ಮೂರು ವಾರಗಳ ಅವಧಿಯಲ್ಲಿ 163 ಮಂದಿ ಸಿಡಿಲಿಗೆ ಜೀವ ಕಳೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next