ಕೊಂಡ್ಲಹಳ್ಳಿ: ಕ್ಷಯರೋಗಿಯ ಚಿಕಿತ್ಸೆಗೆ ಆರು ತಿಂಗಳ ನೇರ ನಿಗಾವಣೆ ಮೂಲಕ ಉಚಿತ ಚಿಕಿತ್ಸೆ ದೊರೆಯಲಿದೆ ಎಂದು ಕೊಂಡ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶಿವಕುಮಾರ್ ಹೇಳಿದರು.
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪ್ರಾಥಮಿಕ ಆರೊಗ್ಯ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ಆಂದೋಲನ ಜು. 15 ರಿಂದ ಆರಂಭಗೊಂಡಿದ್ದು 27ರವರೆಗೆ ನಡೆಯಲಿದೆ. ಇದಕ್ಕೆ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನೊಳಗೊಂಡ ಆರು ತಂಡಗಳನ್ನು ರಚಿಸಲಾಗಿದೆ. ಆರೋಗ್ಯ ಕೇಂದ್ರದ ವ್ಯಾಪ್ತಿಯ ಕೊಂಡ್ಲಹಳ್ಳಿ ಎಸ್‌ಸಿ ಕಾಲೋನಿ, ಮಾರಮ್ಮನಹಳ್ಳಿ,ಬೆಳವಿನಮರದಟ್ಟಿ, ಕೋನಸಾಗರ ಗ್ರಾಮಗಳಲ್ಲಿ ಗುರುತಿಸಲಾಗಿರುವ ಕ್ಷಯರೋಗ ಪೀಡಿತ ಪ್ರದೇಶ ವ್ಯಾಪ್ತಿಯ ಒಟ್ಟು 670 ಮನೆಗಳಿಗೆ ಈ ತಂಡಗಳು ಭೇಟಿ ನೀಡಿ ಕ್ಷಯ ರೋಗಿ ಪತ್ತೆ ಕಾರ್ಯ ಹಾಗೂ ಕಫ ಸಂಗ್ರಹಣೆ ಕಾರ್ಯ ಮಾಡಲಿವೆ. ಕಫವನ್ನು ಬಿ.ಜಿ. ಕೆರೆಯ ಡಿಎಂಸಿ ಲ್ಯಾಬ್‌ಗ ಕಳುಹಿಸಲಾಗುತ್ತದೆ. ಕಫದಲ್ಲಿ ಟಬ್ಯಬರ್‌ಕ್ಯುಲೋಸಿಸ್ ಬ್ಯಾಕ್ಟೀರಿಯ ಕಂಡು ಬಂದಲ್ಲಿ ಕ್ಷಯ ರೋಗ ಎಂದು ದೃಢಪಡಿಸಲಾಗುವುದು. ರೋಗ ಪತ್ತೆಯಾದ ವ್ಯಕ್ತಿಗೆ ಸರ್ಕಾರದಿಂದ ಆರು ತಿಂಗಳ ಕಾಲ ಉಚಿತ ಚಿಕಿತ್ಸೆ, ಪೌಷ್ಟಿಕ ಆಹಾರ ಸೇವನೆಗಾಗಿ ರೋಗಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 500 ರೂ. ನೀಡಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ಈರಕ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಫಾರ್ಮಾಸಿಸ್ಟ್ ವೆಂಕಟೇಶ ನಾಯಕ್, ಮಾರುತಮ್ಮ, ಮಾಲಾಶ್ರೀ, ಸವಿತಾ, ಶೋಭಾ ಇದ್ದರು.